Advertisement
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಮೃತ ಪಿಎಸ್‌ಐ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿ, ಪಿಎಸ್‌ಐ ಮೃತಪಟ್ಟ ಬಳಿಕ ಎಸ್ಪಿ 18 ಗಂಟೆಗಳ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೆಲ್ಲವೂ ಸಿಎಂ, ಗೃಹ ಸಚಿವರ ಗಮನಕ್ಕಿಲ್ಲದೇ ನಡೆಯುವಂಥದ್ದಲ್ಲ. ಆದರೆ ನಾವು ಯಾರೂ ಸಿಐಡಿಗೆ ಕೊಡಿ ಎಂದು ಕೇಳಿಲ್ಲ. ಕುಟುಂಬವೂ ಸಹಿತ ಸಿಐಡಿಗೆ ಒತ್ತಾಯಿಸಿಲ್ಲ. ಆದರೆ ಒಂದೇ ಗಂಟೆಯಲ್ಲಿ ಸರಕಾರ ಸಿಐಡಿ ತನಿಖೆಗೆ ಕೊಟ್ಟಿದೆ. ಹಿಂದೆ ಸಿಐಡಿಗೆ ಕೊಟ್ಟಿರುವ ಪ್ರಕರಣ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣವನ್ನು ರಾಜ್ಯ ಸರಕಾರ ಮುಚ್ಚಿ ಹಾಕುವ ಯತ್ನ ಮಾಡುತ್ತಿದೆ. ಈ ಪ್ರಕರಣ ಸಿಬಿಐಗೆ ಕೊಡಬೇಕು ಎಂದು ಕುಟುಂಬ ವರ್ಗವೂ ಒತ್ತಾಯ ಮಾಡಿದೆ. ನಾನು ವಿಪಕ್ಷದ ನಾಯಕನಾಗಿ ಇದನ್ನು ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ಪಿಎಸ್‌ಐ ಸಾವಿನ ಎಫ್‌ಎಸ್‌ಎಲ್ ಸಾವಿನ ವರದಿಯೇ ಬಂದಿಲ್ಲ. ಆದರೆ ಗೃಹ ಸಚಿವರು ಹೃದಯಾಘಾತದಿಂದ ಪಿಎಸ್‌ಐ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಇದೆಂಥ ದುರಂತದ ಸಂಗತಿ. ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕು. ನಾವು ಇದನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಪಾದಯಾತ್ರೆ ಮಧ್ಯೆ ಈ ಕುಟುಂಬವನ್ನು ಭೇಟಿ ಮಾಡಿದ್ದೇನೆ. ಮೃತ ಪಿಎಸ್‌ಐ ಕುಟುಂಬದ ಜತೆ ನಾವಿದ್ದೇವೆ. ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದೇವೆ ಎಂದು ಅಶೋಕ್ ಹೇಳಿದರು.
Related Articles
ಮೃತ ಪರಶುರಾಮ ಅವರ ನಿವಾಸಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಕಾಲಿಡುತ್ತಿದ್ದಂತೆ ಪರಶುರಾಮ ಅವರ ತಾಯಿ ಹಿರೇಗಂಗಮ್ಮ, “ನನ್ನ ಮಗನನ್ನು ಬದುಕಿಸಿ ಕೊಡಿ’ ಎಂದ ಅವರ ಕಾಲಿಗೆ ಬಿದ್ದು ಗೋಳಾಡಿದರು. ತತ್‌ಕ್ಷಣ ತಾಯಿಯ ಕೈ ಹಿಡಿದ ಅಶೋಕ್ ಅವರು ತಮ್ಮ ತಲೆಗೆ ಒತ್ತಿಕೊಂಡು ನಮಸ್ಕರಿಸಿ ಸಾಂತ್ವನ ಹೇಳಿದರು. ಸಹೋದರ ಹನುಮಂತಪ್ಪ ಮಾತನಾಡಿ, ನಮ್ಮ ಪರಶುರಾಮ ತುಂಬಾ ಬುದ್ಧಿವಂತ. ಹಲವು ನೌಕರಿ ಬಿಟ್ಟು ಪಿಎಸ್‌ಐ ಹುದ್ದೆಗೆ ಸೇರಿದ್ದ, ಆತನಿಗೆ ದೊಡ್ಡ ಕನಸಿತ್ತು. ಸಮಾಜ ಸೇವೆ ಮಾಡಬೇಕೆಂಬ ಹಂಬಲ ಇತ್ತು. ಕೂಲಿ ಕೆಲಸ ಮಾಡಿ ಆತನಿಗೆ ಶಿಕ್ಷಣ ಕೊಡಿಸಿದ್ದೆವು. ಆತನೂ ಕೂಲಿ ಕೆಲಸ ಮಾಡಿ ಜೀವನ ಕಟ್ಟಿಕೊಂಡು ನೌಕರಿ ಸೇರಿದ್ದ. ಆತನನ್ನು ವರ್ಗಾವಣೆ ಮಾಡುವ ವಿಷಯ ನಮಗೆ ತಿಳಿದಿತ್ತು. ಆಗ 30 ಲಕ್ಷ ರೂ. ಕೊಡಬೇಕು ಎಂದಿದ್ದ. ನಾವು ಅಷ್ಟು ಹಣವಂತರಲ್ಲ. ನಮ್ಮಿಂದ ಕೊಡಲಾಗದು ಎಂದು ಹೇಳಿದ್ದೆವು. ಆತನು ತುಂಬಾ ಒತ್ತಡದಲ್ಲಿದ್ದ. ಒಂದೆರಡು ದಿನ ಮನೆಯಲ್ಲಿ ರಜೆ ಮಾಡಿ ಇಲ್ಲೇ ಇರು ಎಂದಿದ್ದೆವು. ಆದರೆ ನನಗೆ ರಜೆ ಹಾಕಲು ಬರುವುದಿಲ್ಲ, ತುಂಬಾ ಒತ್ತಡದ ಕೆಲಸ ಎಂದು ಪದೇ ಪದೆ ಹೇಳುತ್ತಿದ್ದ ಎಂದು ಕಣ್ಣೀರಾದರು.
Advertisement
ಯಾದಗಿರಿಗೆ ಸಿಐಡಿ ತಂಡ; ಮಾಹಿತಿ ಸಂಗ್ರಹಯಾದಗಿರಿ: ಯಾದಗಿರಿ ನಗರ ಪೊಲೀಸ್ ಠಾಣೆ ಪಿಎಸ್‌ಐ ಪರಶುರಾಮ ಸಾವಿನ ಪ್ರಕರಣದ ತನಿಖೆಗೆ ಇಳಿದಿರುವ ಸಿಐಡಿ ತಂಡ ರವಿವಾರ ನಗರದ ಸಿಐಡಿ ಕಚೇರಿಗೆ ಆಗಮಿಸಿ ಮಹತ್ವದ ಮಾಹಿತಿ ಕಲೆ ಹಾಕಿದೆ. ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತಂಡ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಎಸ್‌ಪಿ ಕಚೇರಿಗೆ ತೆರಳಿ ಎರಡು ಪೆನ್‌ಡ್ರೈವ್ ಹಾಗೂ ಪರಶುರಾಮ ಬಳಸುತ್ತಿದ್ದ ಫೋನ್ ವಶಕ್ಕೆ ಪಡೆದಿದೆ. ನಗರ ಠಾಣೆ ಸಿಬಂದಿಯಿಂದಲೂ ಮಾಹಿತಿ ಸಂಗ್ರಹಿಸಿದೆ. ಗ್ರಾಮೀಣ ಠಾಣೆ ಸಿಪಿಐ ಸುನೀಲ್ ಮೂಲಿಮನಿ ಹಾಗೂ ಪಿಎಸ್‌ಐ ಹಣಮಂತ ಬಂಕಲಗಿ ಸಿಐಡಿ ಅಧಿಕಾರಿಗಳಿಗೆ ಸಾಥ್ ನೀಡಿದ್ದಾರೆ. ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಪಿಎಸ್‌ಐ ಪರಶುರಾಮ ಪತ್ನಿ ಶ್ವೇತಾ ದೂರು ನೀಡಿದ್ದರು. ಪ್ರಕರಣ ತೀವ್ರತೆ ಅರಿತ ರಾಜ್ಯ ಸರಕಾರ ಶನಿವಾರ ಸಿಐಡಿಗೆ ವಹಿಸಿದೆ.