Advertisement

ಬ್ರಾಹ್ಮಣನ ಮುಖ್ಯ ಧರ್ಮ ಪ್ರಾಮಾಣಿಕತೆಯಾಗಲಿ

09:59 PM Sep 10, 2019 | Lakshmi GovindaRaju |

ಮೈಸೂರು: ನಾವು ಮಾಡುವ ವೃತ್ತಿಯಲ್ಲಿ ಪ್ರಾಮಾಣಿಕತೆ ಇದ್ದರೆ ಅದೇ ನಾವು ಭಗವಂತನಿಗೆ ಮಾಡುವ ದೊಡ್ಡ ಪೂಜೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮಾನಸ ಗಂಗೋತ್ರಿಯ ಸೆನೆಟ್‌ ಭವನದಲ್ಲಿ ವಿಪ್ರ ಪೊಫೆಷನಲ್‌ ಫೋರಂ ವತಿಯಿಂದ ಮಂಗಳವಾರ ಆಯೋಜಿಸಿದ್ದ ವೃತ್ತಿ ನಿರತ ವಿಪ್ರ ಸೌಹಾರ್ದ ನಿಯಮಿತ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

Advertisement

ಗಾಯತ್ರಿ ಮಂತ್ರ: ನಾವು ಎಷ್ಟೇ ದೊಡ್ಡವರಾದರೂ ಗಾಯತ್ರಿಮಂತ್ರವನ್ನು ಮರೆಯಬಾರದು. ಪ್ರತಿದಿನ 10 ಸಲವಾದರೂ ಗಾಯತ್ರಿ ಮಂತ್ರ ಪಠಿಸಬೇಕು. ಎಲ್ಲರಿಗೂ ಒಳ್ಳೆಯ ವಿದ್ಯೆ, ಬುದ್ಧಿ ಕೊಡು ಎಂಬುದೇ ಗಾಯತ್ರಿಮಂತ್ರದ ಸಾರ. ಗಾಯತ್ರಿಮಂತ್ರ ರಾಷ್ಟ್ರಗೀತೆಯಂತೆ ವಿಶ್ವಗೀತೆ ಇದ್ದಂತೆ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಸಾಮಾಜಿಕ ಸೇವೆ ನಮ್ಮ ಜೀವನವನ್ನು ಮುಡಿಪಿಡಬೇಕು. ಸ್ವಾರ್ಥ ಜೀವನ ಸಾಗಿಸಿದರೆ ನಾವು ತಿನ್ನುವ ಅನ್ನ ಪಾಪವಾಗಿ ಮಾರ್ಪಡುತ್ತದೆ ಎಂದು ತಿಳಿಸಿದರು.

ಅನಂತಕುಮಾರ್‌ಗೆ ಹೊಗಳಿಕೆ: ಮಾಜಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗ್ಡೆ ಅವರು ಬ್ರಾಹ್ಮಣ ಮತ್ತು ಹಿಂದೂ ಸಮಾಜದ ಬಗ್ಗೆಯೂ ಅತ್ಯಂತ ನಿಷ್ಠೆಯಿಂಸ ಕೆಲಸ ಮಾಡುತ್ತಾರೆ. ನಿರ್ಭಯವಾಗಿ ವಿಚಾರಗಳನ್ನು ಹೇಳುವ ಧೀರತನ ಉಳ್ಳವರಾಗಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಅನಂತ್‌ಕುಮಾತ್‌ ಹೆಗ್ಡೆ ಮಾತನಾಡಿ, ವಿಪ್ರ ಪ್ರೊಫೆಷನಲ್‌ ಫೋರಂನಿಂದ ವೃತ್ತಿ ನಿರತ ವಿಪ್ರ ಸೌಹಾರ್ದ ಸಹಕಾರಿ ಸಂಘ ನಿಯಮಿತವನ್ನು ಸ್ಥಾಪಿಸುತ್ತಿರುವುದು ಸಂತೋಷದ ವಿಷಯ. ಇದು ಕೇವಲ ಆದಾಯ ವೃದ್ಧಿಯನ್ನೇ ಮುಖ್ಯ ಧ್ಯೇಯವಾಗಿಸಿಕೊಳ್ಳದೇ, ವ್ಯವಹಾರ ಮತ್ತು ಜ್ಞಾನದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾಗುವುದರೊಂದಿಗೆ ಹೊಸತನದ ಕಲ್ಪನೆಯನ್ನೂ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಹೊಸ ತಲೆಮಾರಿಗೆ ಅನುಕೂಲವಾಗುವ ಅವಕಾಶಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಗಟ್ಟಿಗರಾಗಿ: ಬ್ರಾಹ್ಮಣ ಸಮುದಾಯ ಏನೇ ಮಾಡಿದರೂ ಅದು ಜಗತ್ತಿನ ಒಳಿತಾಗಿರುತ್ತದೆ. ಇವರು ಇಲ್ಲ ಸಲ್ಲದ ಹಕ್ಕುಗಳಿಗಾಗಿ ಎಂದೂ ಹೋರಾಡುವುದಿಲ್ಲ. ನಾವು ನಂಬಿಕೊಂಡಿರುವ ವಿಚಾರಗಳಿಗೆ ಬದ್ಧರಾಗಿ ಬದುಕು ನಡೆಸುತ್ತಾ ಬಂದಿದ್ದೇವೆ. ರಾಜಕೀಯ, ಸಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರದಲ್ಲಿ ಬದ್ಧತೆ ಮತ್ತು ಧ್ಯೇಯವನ್ನಿಟ್ಟುಕೊಂಡಿದ್ದೇವೆ. ಅದು ಹೀಗೆಯೇ ಮುಂದುವರೆಯಬೇಕು. ಹಣ ಬರುವುದಕ್ಕಿಂತ ಮುಂಚೆ ಎಲ್ಲವೂ ಸರಿ ಇರುತ್ತದೆ. ಆದರೆ ಹಣ ಬಂದ ನಂತರ ನಾವು ಹಾಳಾಗುತ್ತೇವೆ. ಇಲ್ಲ ಹೋಳಾಗುತ್ತೇವೆ. ಹಾಗಾಗಿ ನೇತೃತ್ವ ವಹಿಸಿಕೊಂಡವರು ಗಟ್ಟಿಗರಾಗಿರಬೇಕು ಎಂದು ಹೇಳಿದರು.

Advertisement

ಗುರಿ, ಉತ್ಸಾಹ: ನಮ್ಮ ಬದುಕು ಮತ್ತು ನಿಲುವಿನ ಬಗ್ಗೆ ಹೆಮ್ಮೆ ಇಟ್ಟುಕೊಂಡಿರಬೇಕು. ಯಾರಲ್ಲಿ ಗುರಿ ಮತ್ತು ಗೆರೆ ದಾಟುವ ಉತ್ಸಾಹ ಇರುತ್ತದೋ ಅವರು ಇತಿಹಾಸ ಸೃಷ್ಟಿಸುತ್ತಾರೆ. ಇಂದು ಅನೇಕ ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಹೊಸ ಹೊಸ ಆವಿಷ್ಕಾರಗಳ ಮೂಲಕ ಯುವ ಸಮುದಾಯಕ್ಕೆ ತಲುಪುವಂತಹ ಯೋಜನೆಗಳನ್ನು ರೂಪಿಸಬೇಕು. ಇಂದು ಇಡೀ ಜಗತ್ತೆ ಭಾರತವನ್ನು ಒಪ್ಪಿಕೊಂಡಿದೆ.

ಯೂರೋಪ್‌, ಅಮೆರಿಕ ದೇಶದಂತಹ ಆರ್ಥಿಕ ಸ್ಥಿತಿ ಕೆಳಮಟ್ಟಕ್ಕೆ ತಲುಪಿದ್ದರೂ, ನಮ್ಮ ದೇಶದ ಆರ್ಥಿಕ ಸ್ಥಿತಿ ಕಣ್ತೆರೆಯುತ್ತಿದೆ. ಜಗತ್ತಿನ ಯಾವುದೇ ರಾಷ್ಟ್ರ ಮಾಡದ ಕೆಲಸವನ್ನು ನಮ್ಮ ಇಸ್ರೋ ವಿಜ್ಞಾನಿಗಳು ಮಾಡಿ ತೋರಿಸಿದ್ದಾರೆ. ಇದು ಕೆಲವರಿಗೆ ವಿಫ‌ಲವಾದರೆ, ನಮಗೆಲ್ಲ ದೊಡ್ಡ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿಪ್ರ ಪೊಫೆಷನಲ್‌ ಫೋರಂನ ಡಾ.ಎಸ್‌. ಮುರಳಿ, ಎಸ್‌.ವಿ. ವೆಂಕಟೇಶ್‌ ಇದ್ದರು.

ಬ್ರಾಹ್ಮಣರು ಪ್ರಾಮಾಣಿಕರಾಗಿದ್ದರೆ ಮೀಸಲಾತಿ ತನ್ನಷ್ಟಕ್ಕೆ ಹೋಗಲಿದೆ: ಬ್ರಾಹ್ಮಣ ಸಮಾಜ ಎಲ್ಲಾರಂಗದಲ್ಲೂ ಬಲಗೊಳ್ಳಬೇಕು. ರಾಜಕೀಯ, ಔದ್ಯೋಗಿಕ, ಸಾಮಾಜಿಕ, ಅಧಾ¾ತ್ಮಿಕ ರಂಗದಲ್ಲೂ ಬೆಳೆಯಬೇಕು. ಯಾವ ಕ್ಷೇತ್ರದಲ್ಲೂ ಹಿಂದೆ ಬೀಳಬಾರದು. ಬ್ರಾಹ್ಮಣ ಸಮಾಜ ಕೇವಲ ಬ್ರಾಹ್ಮಣರ ಅಭಿವೃದ್ಧಿಗಾಗಿ ಕೆಲಸ ಮಾಡುವುದಿಲ್ಲ. ಬದಲಿಗೆ ರಾಷ್ಟ್ರದ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸುತ್ತದೆ. ಬ್ರಾಹ್ಮಣನ ಮುಖ್ಯ ಧರ್ಮ ಪ್ರಾಮಾಣಿಕತೆಯಾಗಬೇಕು. ನಾವು ಪ್ರಾಮಾಣಿಕರಾಗಿ ಇದ್ದರೆ ಮೀಸಲಾತಿ ತನ್ನಷ್ಟಕ್ಕೆ ಹೋಗುತ್ತದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next