ದೇವನಹಳ್ಳಿ: ಮೂಲ ಆರ್ಥಿಕ ಪ್ರಗತಿಗೆ ಬ್ಯಾಂಕ್‌ಗಳು ತಳಮಟ್ಟದಿಂದ ಗ್ರಾಹಕರಿಗೆ ಯೋಜನೆಗಳನ್ನು ರೂಪಿಸಿ ನೆರವಾಗಬೇಕು ಎಂದು ರಿಸರ್ವ್ ಬ್ಯಾಂಕ್ ನಿಕಟ ಪೂರ್ವ ಗವರ್ನರ್ ಡಾ.ಚಕ್ರವರ್ತಿ ರಂಗರಾಜನ್ ಸಲಹೆ ನೀಡಿದರು.
ತಾಲೂಕಿನ ಸಾದಹಳ್ಳಿ ಗೇಟ್ ಸಮೀಪದಲ್ಲಿರುವ ಕ್ಲಾರ್ಕ್ಸ್ ಎಕ್ಸಾಟಿಕಾ ರೆಸಾರ್ಟ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ನಡೆದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬ್ಯಾಂಕ್‌ಗಳು ಸ್ವ-ಸಹಾಯ ಸಂಘಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು.
ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಮತ್ತು ಸ್ಥಳೀಯ ರಾಜ್ಯ ಸರ್ಕಾರಗಳು ರೈತರ ಪ್ರಗತಿದಾಯಕ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಆರ್ಥಿಕ ಚೈತನ್ಯವನ್ನು ಹೆಚ್ಚಿಸಬೇಕು. ರೈತರು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಕೃಷಿ ಚಟುವಟಿಕೆಗಳನ್ನು ಮಾಡಬೇಕು. ಬ್ಯಾಂಕ್‌ಗಳು ರೈತರಿಗೆ ಆರ್ಥಿಕ ಮಟ್ಟ ಸುಧಾರಿಸಲು ಸಾಲ ಸೌಲಭ್ಯಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ನಮ್ಮ ಜವಾಬ್ದಾರಿ ಹೆಚ್ಚಿದೆ: ಧರ್ಮಸ್ಥಳದ ಧಮಾì ಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಈ ಕಾರ್ಯಕ್ರಮ ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ನಾನು ನನ್ನ ದೈನಂದಿನ ಜೀವನದಲ್ಲಿ ಸಾಕಷ್ಟು ಜನರನ್ನು ಭೇಟಿ ಮಾಡುತ್ತೇನೆ. ಸಾಮಾಜಿಕ ಪಿಡುಗುಗಳು ಸಮಾಜವನ್ನು ಕಿತ್ತು ತಿನ್ನುತ್ತಿವೆ. ಇದರ ವಿರುದ್ಧ ಹೋರಾಡುವುದು ಜವಾಬ್ದಾರಿಯುತ ಕೆಲಸ. ಭಾರತದಲ್ಲಿ ಯಥೇಚ್ಚವಾಗಿ ಅವಕಾಶಗಳು ಇವೆ.
ಆದರೆ, ಸರ್ಕಾರಗಳು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಿಕ್ಷಣ, ತರಬೇತಿ ನೀಡಬೇಕಿದೆ ಎಂದರು. ಈ ಹಿಂದೆ ಜನರಲ್ಲಿ ನಂಬಿಕೆ ಇರಲಿಲ್ಲ. ಭರವಸೆ ಕಳೆದುಕೊಂಡಿದ್ದರು. ಜನರು ತಮ್ಮ ದೈನಂದಿನ ವ್ಯವಸಾಯ ಬಿಟ್ಟು ಬೇರೆ ಏನನ್ನೂ ಮಾಡುತ್ತಿರಲಿಲ್ಲ. ಮಾರುಕಟ್ಟೆ, ಮಾರಾಟದ ಅರಿವು ಇಲ್ಲವಾಗಿತ್ತು. ಶಿಕ್ಷಣ ಇಲ್ಲದಿರುವುದು ಇದಕ್ಕೆ ಕಾರಣವಾಗಿತ್ತು. ನಾನು ಇದರ ಅಧ್ಯಯನ ನಡೆಸಿ, ಸರಿ ಮಾಡಲು ಪ್ರಯತ್ನ ಪಟ್ಟೆ.
ರೈತರಿಗೆ ಮೊದಲು ವಿದ್ಯಾಭ್ಯಾಸ ಕೊಡಿಸಿ, ಕನಿಷ್ಠ ಜ್ಞಾನವೃದ್ಧಿಗೆ ಅವಕಾಶ ನೀಡಬೇಕಾಗಿತ್ತು. ರೈತರನ್ನು ಉತ್ತೇಜಿಸುವುದು ದೊಡ್ಡ ಸವಾಲಾಗಿತ್ತು. ಸಿಂಡಿಕೇಟ್, ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಯುವಕರಿಗೆ ಸ್ವ ಉದ್ಯೋಗ ಕಲ್ಪಿಸಲು ಪ್ರಯತ್ನ ಪಟ್ಟು, 650 ಊರುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡೆವು. ಕೇಂದ್ರ ಸರ್ಕಾರದ ಯೋಜನೆಗಳನ್ನು ಯುವಕರಿಗೆ ತಲುಪಿಸಲು ಪ್ರಯತ್ನ ಪಟ್ಟು ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಬೆಂಗಳೂರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವಿಸಿಟಿಂಗ್ ಸಂಸ್ಥಾಪಕ ಪ್ರೊ.ಶ್ರೀರಾಮ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್ ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ಆನಂದ್ ಸುವರ್ಣ, ಜಿಲ್ಲಾ ಯೋಜನಾ ನಿರ್ದೇಶಕ ವಸಂತ್ ಸಾಲಿಯಾನ, ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ಉಪಸ್ಥಿತರಿದ್ದರು.