ಹುಬ್ಬಳ್ಳಿ: ಭಾರತದಲ್ಲಿರುವ ಆಯುರ್ವೇದ ಚಿಕಿತ್ಸಾ ಪದ್ಧತಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇದನ್ನು ಮುಂದುವರಿಸಿ ಕೊಂಡು ಹೋಗುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕೆಂದು ಆಯುಷ್ ಜಿಲ್ಲಾ ನಿವೃತ್ತ ವೈದ್ಯಾಧಿಕಾರಿ ಡಾ|ಸಂಗಮೇಶ ಕಲಹಾಳ ಹೇಳಿದರು.
ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಜಿಪಂ, ತಾಪಂ ಹಾಗೂ ಗ್ರಾಪಂ ವತಿಯಿಂದ ಧಾರವಾಡ ತಾಲೂಕಿನ ಹೆಬ್ಬಳ್ಳಿಯ ಶ್ರೀ ಮೂಗಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕೋವಿಡ್ ವಾರಿಯರ್ಸ್ ಗೆ ರೋಗ ನಿರೋಧಕ ಮಾತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಣ್ಣಿಗೆ ಕಾಣದ ಸೋಂಕು ಇಂದು ಪ್ರಪಂಚದ ಬಲಿಷ್ಠ ರಾಷ್ಟ್ರಗಳನ್ನು ಬೆಚ್ಚಿ ಬೀಳಿಸಿದೆ. ಹಲವು ದೇಶಗಳು ಔಷಧಿ ಸಂಶೋಧನೆಯಲ್ಲಿ ತೊಡಗಿವೆ. ಆದರೆ ಕಾಯಿಲೆ ಬರುವುದಕ್ಕಿಂತ ಅದನ್ನು ತಡೆಯುವುದು ಪ್ರಮುಖ. ಹೀಗಾಗಿ ರೋಗ ನಿರೋಧ ಶಕ್ತಿ ಹೆಚ್ಚಿಸುವ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದರು. ಜಿಲ್ಲಾ ಆಯುಷ್ಯ ವೈದ್ಯಾಧಿಕಾರಿ ಡಾ|ಮೀನಾಕ್ಷಿ ಮಾತನಾಡಿ, ಕೋವಿಡ್ ಹಾವಳಿಯಿಂದ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ತಮ್ಮ ಪ್ರಾಣ ಲೆಕ್ಕಿಸದೆ ಹೋರಾಡುತ್ತಿದ್ದು, ಇಡೀ ವಿಶ್ವ ಅವರನ್ನು ದೇವರೆಂದು ಪೂಜಿಸುತ್ತಿದೆ. ಆದರೆ ನಮ್ಮ ಪುರಾಣದಲ್ಲಿ ವೈದ್ಯೋ ನಾರಾಯಣ ಹರೀ ಎನ್ನುವ ಮೂಲಕ ಅವರನ್ನು ಹಿಂದಿನ ಕಾಲದಿಂದಲೂ ದೇವರೆಂದು ಪೂಜಿಸಲಾಗುತ್ತಿದೆ ಎಂದರು.
ಹಿರಿಯ ವೈದ್ಯ ಡಾ| ವಿ.ಎಂ. ದೇಶಪಾಂಡೆ ಮಾತನಾಡಿ, ಹೋಮಿಯೋಪಥಿಕ್ ಚಿಕಿತ್ಸೆ ಈ ಔಷಧಗಳು ಮಾನವನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಂತಹ ಕಾರ್ಯಕ್ರಮ ಪ್ರತಿ ಹಳ್ಳಿಗಳಲ್ಲೂ ನಡೆಯಲಿ. ಗ್ರಾಮದ ಎಲ್ಲರಿಗೂ ರೋಗ ನಿರೋಧಕ ಮಾತ್ರೆಗಳನ್ನು ಪೂರೈಸುವ ಕೆಲಸ ಆಗಬೇಕು ಎಂದರು. ಆಶಾ, ಅಂಗನವಾಡಿ ಕಾರ್ಯಕರ್ತೆಯರು,
ಸ್ವಚ್ಛತಾ ಕರ್ಮಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಔಷಧ ವಿತರಕರು ಸೇರಿದಂತೆ ಸಾರ್ವಜನಿಕರಿಗೆ ರೋಗ ನಿರೋಧಕ ಮಾತ್ರೆ ವಿತರಿಸಲಾಯಿತು. ಜಿಪಂ ಸದಸ್ಯ ಚನ್ನಬಸಪ್ಪ ಮಟ್ಟಿ, ತಾಪಂ ಸದಸ್ಯ ಮಲ್ಲಪ್ಪ ಭಾವಿಕಟ್ಟಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಸುಣಗಾರ, ಉಪಾಧ್ಯಕ್ಷ ರಮೇಶ ಧಾರವಾಡ, ಪಿಡಿಒ ಬಿ.ಡಿ. ಚವರಡ್ಡಿ, ಎಎಫ್‌ಐ ಸಂಘದ ಜಿಲ್ಲಾಧ್ಯಕ್ಷ ಡಾ| ರವೀಂದ್ರ ವೈ, ರಾಜ್ಯಕಾರ್ಯದರ್ಶಿ ಡಾ| ಸೋಮಶೇಕರ ಹುದ್ದಾರ, ಡಾ| ಎಂ.ಎಸ್. ಅಮಿತ, ಡಾ| ಬಸವರಾಜ ಅಂಗಡಿ, ಡಾ| ವಿಜಯಲಕ್ಷ್ಮೀ ಅಂಗಡಿ, ಡಾ| ಚಂದ್ರಗೌಡ ಪಾಟೀಲ, ಡಾ| ಪಿ.ಎಸ್. ಆಲೂರ, ಡಾ| ಹುಲ್ಲೂರ ಕಾರ್ಯಕ್ರಮ ನಿರ್ವಹಿಸಿದರು.