Advertisement

ದೌರ್ಜನ್ಯದ ವಿರುದ್ಧ ಜಾಗೃತಿ ಇರಲಿ

01:23 PM Nov 20, 2017 | Team Udayavani |

ದೇವನಹಳ್ಳಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯಗಳು ಹೆಚ್ಚಾಗುತ್ತಿರುವುದರಿಂದ ಪ್ರತಿ ಮಹಿಳೆಯರು ಜಾಗೃತರಾಗಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ.ಸಕ್ಸೇನಾ ತಿಳಿಸಿದರು.

Advertisement

ನಗರದ ಗಿರಿಯಮ್ಮ ವೃತ್ತದಲ್ಲಿರುವ ಡಾ.ಅಂಬೇಡ್ಕರ್‌ ಭವನದಲ್ಲಿ ತಾಲೂಕು ಮಾನವಹಕ್ಕುಗಳ ಜಾಗೃತಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ತೃತೀಯ ತಾಲೂಕು ಸಮಾವೇಶ ಅಂಗವಾಗಿ “ಕಾನೂನು ಅರಿವು ವಿಚಾರ ಸಂಕಿರಣ, ಧರ್ಮ ಮತ್ತು ವೈಚಾರಿಕತೆ, ಮಹಿಳಾ ಹಕ್ಕು, ಶೈಕ್ಷಣಿಕ ಹಕ್ಕು ಹಾಗೂ ಇತ್ತೀಚಿನ ದಿನಗಳ ವಿದ್ಯಮಾನಗಳ ಒಂದು ನೋಟ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೌಡ್ಯತೆ ಮತ್ತು ವೈಚಾರಿಕತೆ ಇಂದಿಗೂ ಜೀವಂತ: ಮಹಿಳೆಯರಿಗಾಗಿ ಹಲವಾರು ಹಕ್ಕುಗಳು ಇವೆ. ಎಷ್ಟೋ ಮಹಿಳೆಯರು ಹಕ್ಕುಗಳ ಬಗ್ಗೆ ತಿಳಿದುಕೊಂಡಿಲ್ಲ. ಪ್ರತಿ ಮಹಿಳೆಯರಲ್ಲಿ ಜಾಗೃತಿ ಮೂಡಬೇಕು.
 
ಪ್ರತಿನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ತಮ್ಮನ್ನು ರಕ್ಷಣೆ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾ ಗಿದೆ. 21ನೇ ಶತಮಾನ ಕಳೆಯುತ್ತಿದ್ದರೂ
ಮೌಡ್ಯತೆ ಮತ್ತು ವೈಚಾರಿಕತೆ ಇಂದಿಗೂ ಕಾಡುತ್ತಿವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಮಾನವ ಹಕ್ಕುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಹುಟ್ಟಿನಿಂದ ಮಾನವ ಹಕ್ಕುಗಳು ಆರಂಭ: ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಡಾ. ಸಮೇತನಹಳ್ಳಿ ಲಕ್ಷ್ಮಣ್‌ಸಿಂಗ್‌ ಮಾತನಾಡಿ, ಹಳ್ಳಿಗಾಡುಗಳಲ್ಲಿ ನಿವೇಶನಗಳಿಲ್ಲದೇ ಒಂದೇ ಮನೆಯಲ್ಲಿ ಮೂರ್ನಾಲ್ಕು ಸಂಸಾರಗಳು ಇರುವಂಥ ಪರಿಸ್ಥಿತಿ ಇದೆ. ಸರ್ಕಾರ ಎಲ್ಲಾ ಜನರಿಗೂ ನಿವೇಶನ ಕಲ್ಪಿಸಬೇಕು. ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರ ಎಷ್ಟೇ ಯೋಜನೆಗಳನ್ನು ರೂಪಿಸಿದರೂ ಜನಸಂಖ್ಯೆ ಸ್ಫೋಟದಿಂದ ಜನರಿಗೆ ಯೋಜನೆಗಳು ತಲುಪುತ್ತಿಲ್ಲ. ಮಗು ಹುಟ್ಟಿನಿಂದ ಹಿಡಿದು ಕೊನೆ ತನಕ ಮಾನವ ಹಕ್ಕುಗಳು ಪ್ರಾರಂಭವಾಗುತ್ತವೆ ಎಂದು ಹೇಳಿದರು. 

ಪ್ರತಿಯೊಬ್ಬರು ಶಿಕ್ಷಣ ಪಡೆಯಿರಿ: ಭೂ ನ್ಯಾಯಮಂಡಳಿ ಮಾಜಿ ಸದಸ್ಯ ಡಿ.ಆರ್‌ .ನಾರಾಯಣಸ್ವಾಮಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಮಕ್ಕಳು ಶೈಕ್ಷಣಿಕ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದ ಹಾಗೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ದೇಶ ಮತ್ತು ರಾಜ್ಯ ಹಳ್ಳಿಗಳು ಉದ್ಧಾರ ಆಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು. 

Advertisement

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಎ.ಎಂ.ನಾರಾಯಣಸ್ವಾಮಿ (ನಾಣಿ) ಅಧ್ಯಕ್ಷತೆ ವಹಿಸಿ ಮಾತನಾಡಿ, ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಮಕ್ಕಳನ್ನು ಖಾಸಗಿ ಶಾಲೆಗೆ ಹೆಚ್ಚಾಗಿ ಸೇರಿಸುತ್ತಿದ್ದೇವೆ. ಕನ್ನಡ ಸರ್ಕಾರಿ ಶಾಲೆಗಳನ್ನು ಮರೆಯುವ ಸ್ಥಿತಿಗೆ ತಲುಪಿದ್ದೇವೆ. ಪ್ರತಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ಪೋಷಕರ ಮೇಲಿದೆ ಎಂದು ಹೇಳಿದರು.
 
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್‌, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಹೇಮಲತಾ, ಎಸ್‌ಎಲ್‌ಎಸ್‌ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಡಿ.ಎಸ್‌. ಧನಂಜಯ, ಮಾನಸ ಆಸ್ಪತ್ರೆ ಡಾ.ನರಸಾರೆಡ್ಡಿ, ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿ ಗೌರವಾಧ್ಯಕ್ಷ ಲಾಲಗೊಂಡನಹಳ್ಳಿ ವೆಂಕಟೇಶ್‌, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಎ.ಲಕ್ಷ್ಮೀದೇವಿ, ಜಿಲ್ಲಾ ಉಪಾಧ್ಯಕ್ಷ ಹಾರೋಹಳ್ಳಿ ರಾಜಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಬುಳ್ಳಹಳ್ಳಿ ಮುನಿರಾಜು, ಸಹಕಾರ್ಯದರ್ಶಿ ನಾಗರಾಜ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next