ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಒಂದೇ ಕಾಯ್ದೆಯಡಿ ತರುವ ನಿಟ್ಟಿನಲ್ಲಿ ಸೂಕ್ತ ನಿಯಮ ರಚಿಸಬೇಕೆಂದು ಶಿಕ್ಷಣ ತಜ್ಞರು, ಮೇಲ್ಮನೆ ಸದಸ್ಯರು ಹಾಗೂ ವಿಶ್ರಾಂತ ಕುಲಪತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶಿಕ್ಷಕರ ಸದನಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮಗಳು -2017 ಒಂದು ಅವಲೋಕನ ಎಂಬ ದುಂಡು ಮೇಜಿನ ಸಭೆಯಲ್ಲಿ ಶಿಕ್ಷಣ ತಜ್ಞರು ಅಭಿಪ್ರಾಯ ಮಂಡಿಸಿ, ವಿಶ್ವವಿದ್ಯಾಲಯಕ್ಕೆ ಕುಲಪತಿಗಳ ನೇಮಕ ವಿಚಾರವಾಗಿ ಸರ್ಕಾರದ ಹಸ್ತಕ್ಷೇಪ ಮಾಡಬಾರದು. ಐಎಸ್‌ಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ನೇಮಿಸುವ ಬದಲು,
ಹಿರಿಯ ಪ್ರಾಧ್ಯಾಪಕರನ್ನೇ ಈ ಹುದ್ದೆಗೆ ನೇಮಿಸಬೇಕು ಎಂಬ ಸಲಹೆ ನೀಡಿದರು.
ಕೇಂದ್ರೀಕೃತ ನೇಮಕಾತಿ ಪ್ರಾಧಿಕಾರ ಕೂಡ ವಿಶ್ವವಿದ್ಯಾಲಯಗಳ ಸ್ವಾಯುತ್ತತೆಯನ್ನು ಕಡಿತಗೊಳಿಸುವ ಉದ್ದೇಶ ಹೊಂದಿದ್ದು, ಅದನ್ನು ಬದಲಿಸಬೇಕು. ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ನೇರ ಹಸ್ತಕ್ಷೇಪ ಮಾಡಿ ಆರ್ಥಿಕ ಸ್ವಾಯತ್ತತೆಯನ್ನು ಕಡಿತಗೊಳಿಸುವ ಹುನ್ನಾರ ಹೊಸ ಕಾಯ್ದೆಯಲ್ಲಿದೆ ಎಂದು ವಿಟಿಯು ನಿವೃತ್ತ ಪ್ರಾಧ್ಯಾಪಕ ಡಾ.ಬಲವೀರ್ ರೆಡ್ಡಿ ಹೇಳಿದರು.
ಮೇಲ್ಮನೆ ಸದಸ್ಯ ಪುಟ್ಟಣ್ಣ ಮಾತನಾಡಿ, ಕುಲಪತಿಗಳ ನೇಮಕಾತಿ ಹಲವು ರೀತಿಯ ಅವ್ಯವಹಾರಕ್ಕೆ ಕಾರಣವಾಗುತ್ತಿದ್ದು, ನೇಮಕಾತಿಯನ್ನು ಪಾರದರ್ಶಕವಾಗಿ ಮಾಡುವಂತಹ ಕಾಯ್ದೆ ತರಬೇಕು ಎಂದರು. ಮೇಲ್ಮನೆ ಮಾಜಿ ಸದಸ್ಯ ಪ್ರೊ.ಪಿ.ವಿ. ಕೃಷ್ಣಭಟ್ಟ, ಶಿಕ್ಷಣ ತಜ್ಞ ಡಾ. ಎಂ.ಕೆ.ಶ್ರೀಧರ್, ಎಬಿವಿಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರುಳಾಪುರ, ಡಾ.ರಾಮಚಂದ್ರಶೆಟ್ಟಿ, ಯುವಿಸಿಇ ಪ್ರಾಂಶುಪಾಲ ಡಾ. ಕೆ.ಆರ್.ವೇಣುಗೋಪಾಲ್, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿ ಹಂಗಾಮಿ ಕುಲಪತಿ ಡಾ.ಎಂ.ಕೆ.ರಮೇಶ್, ಶಿಕ್ಷಣ ಕ್ಷೇತ್ರದ ಪ್ರಮುಖರಾದ ಶ್ರೀನಿವಾಸಯ್ಯ, ಕೃಷ್ಣ ವೆಂಕಟೇಶ್, ಡಾ.ರಾಮಕೃಷ್ಣ, ಡಾ. ಜಯಕೃಷ, ವಸಂತ
ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಅಧಿನಿಯಮ ರೂಪಿಸಿ
ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮ-2017ರ ಜಾರಿಗೂ ಮೊದಲು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಮತ್ತು ವಿಶ್ವವಿದ್ಯಾಲ ಯಗಳ ನೌಕರರೊಂದಿಗೆ ಚರ್ಚಿಸಬೇಕು. ಸಂಬಂಧಪಟ್ಟ ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಉನ್ನತ ಶಿಕ್ಷಣದ ಶ್ರೇಯಾಭಿವೃದ್ಧಿಗೆ ಪೂರಕವಾಗುವಂತ ಅಧಿನಿಯಮ ರೂಪಿಸಬೇಕು ಎಂಬ ಒತ್ತಾಯವನ್ನು ಸರ್ಕಾರಕ್ಕೆ ದುಂಡು ಮೇಜಿನ ಸಭೆಯ ಮೂಲಕ ಮಾಡಲಾಗಿದೆ.