ಕುಣಿಗಲ್: ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಪ್ರೌಢಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ ಡಾ.ಎಚ್.ಡಿ.ರಂಗನಾಥ್ ಮಕ್ಕಳಿಗೆ ಪಾಠ ಪ್ರವಚನ ಮಾಡುವ ಮೂಲಕ ಗಮನ ಸೆಳೆದರು.
ಶಾಸಕರ ಅಭಯ: ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ, ಬಿಸಿ ಊಟ, ಪಠ್ಯಪುಸ್ತಕ, ಕೊಠಡಿ ಸಮಸ್ಯೆ ಹಾಗೂ ಸಮವಸ್ತ್ರಗಳ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿ ತಿಳಿದುಕೊಂಡರು. ಶಾಲೆ ತ್ತೀಚೆಗೆ ಪ್ರಾರಂಭವಾಗಿದ್ದು, ಹೀಗಾಗಿ ಯಾವುದೇ ಕೊರತೆ ಇಲ್ಲ ಎಂದು ವಿದ್ಯಾರ್ಥಿಗಳು ಶಾಸಕರಿಗೆ ಹೇಳಿದರು. ವಿದ್ಯಾಭ್ಯಾಸ ಹಾಗೂ ಮೂಲಸೌಲಭ್ಯಕ್ಕೆ ಸಂಬಂಧಿಸಿ ಸಮಸ್ಯೆ ಇದ್ದಲ್ಲಿ ನೇರವಾಗಿ ನನ್ನೊಂದಿಗೆ ಹಂಚಿಕೊಳ್ಳಬಹುದೆಂದು ಶಾಸಕ ಅಭಯ ನೀಡಿದರು.
ಶಾಲೆಗಳ ಬಲವರ್ಧನೆಗೆ ಕ್ರಮ: ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಡಾ.ರಂಗನಾಥ್, ಸರ್ಕಾರಿ ಶಾಲೆಗಳಿಗೆ ಬಹುತೇಕವಾಗಿ ಗ್ರಾಮೀಣ ಪ್ರದೇಶದ ಬಡ ಮಕ್ಕಳು ದಾಖಲಾಗುತ್ತಿದ್ದಾರೆ, ಆದರೆ ಖಾಸಗಿ ಶಾಲೆಗಳ ಪೈಪೋಟಿಯಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕುಂಠಿತವಾಗುತಿದೆ. ಹೀಗಾಗಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ರಾಜ್ಯ ಸಮಿಶ್ರ ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ: ಜಾಗತಿಕ ಸ್ಪರ್ಧೆಯಲ್ಲಿ ಗ್ರಾಮಾಂತರ ಬಡ ರೈತರ ಮಕ್ಕಳು ಉದ್ಯೋಗ ಪಡೆಯಲು ಕಂಪ್ಯೂಟರ್ ಕಲಿಕೆ ಅಗತ್ಯ ವಾಗಿದೆ. ಖಾಸಗಿ ಕಂಪ್ಯೂಟರ್ ತರಬೇತಿ ಕೇಂದ್ರ ದಲ್ಲಿ ಬಡ ಮಕ್ಕಳು 3ರಿಂದ 4 ಸಾವಿರ ರೂ. ನೀಡಿ ತರಬೇತಿ ಪಡೆಯಬೇಕು. ಆದರೆ ಹಣವಿಲ್ಲದೆ ಬಡ ವಿದ್ಯಾರ್ಥಿಗಳು ಕಂಪ್ಯೂಟರ್ ತರಬೇತಿಯಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗೊಂಡು ಡಿಕೆಶಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾತ್ಮಗಾಂಧಿ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಪ್ರಾರಂಭಿಸಿ ಉಚಿತವಾಗಿ ತರಬೇತಿ ನೀಡಲಾಗುವುದು. ತರಬೇತಿಗೆ ಶಿಕ್ಷಕರನ್ನು ಟ್ರಸ್ಟ್‌ವತಿಯಿಂದ ನೇಮಕ ಮಾಡಲಾಗುವುದು. ಮುಂದಿನ ದಿನದಲ್ಲಿ ಅವಶ್ಯಕತೆ ಇರುವ ಎಲ್ಲ ಕಾಲೇಜುಗಳಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಪ್ರಾರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರೌಢಶಾಲಾ ಮುಖ್ಯಶಿಕ್ಷಕರ ಸಭೆ: ತಾಲೂಕಿನ ಎಲ್ಲಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ತೆಗೆದು, ಉತ್ತಮ ಫಲಿತಾಂಶಕ್ಕೆ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರ ಸಭೆ ಕರೆದು ಈ ಸಂಬಂಧ ಸೂಚನೆ ನೀಡಲಾಗುವುದು ಎಂದರು.
ವಿದ್ಯಾರ್ಥಿನಿಗೆ ಸಹಾಯ: ತಾಲೂಕಿನ ಚೌಡನಕುಪ್ಪೆ ಗ್ರಾಮದ ವಿದ್ಯಾರ್ಥಿನಿ ಕವಿಕ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರೂ ಹಣವಿಲ್ಲದೆ ಬಿ.ಕಾಂಗೆ ಸೇರಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಧನ ಸಹಾಯ ನೀಡಿ ವಿದ್ಯಾಭ್ಯಾಸ ಮುಂದುವರೆಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ಶಾಸಕರು ಹೇಳಿದರು. ಪ್ರಭಾರ ಉಪ ಪ್ರಚಾರ್ಯ ಸೋಮಶೇಖರಯ್ಯ, ಪುರಸಭಾ ಮುಖ್ಯಾಧಿಕಾರಿ ಆರ್.ರಮೇಶ್, ಲೋಕೋಪಯೋಗಿ ಇಲಾಖೆಯ ಎಇಇ ದಿವಾಕರ್ ಮತ್ತಿತರರು ಇದ್ದರು.