Advertisement

ಕರ್ತವ್ಯ ಪ್ರಜ್ಞೆಯ ಪಾಠ

04:57 AM Jul 07, 2020 | Lakshmi GovindaRaj |

ಸ್ವಾತಂತ್ರ್ಯ ಹೋರಾಟಗಾರರ ಬೆನ್ನ ಹಿಂದೆ ಗುಪ್ತಚರರು ಓಡಾಡುವುದು ಮಾಮೂಲಾಗಿದ್ದ ಕಾಲ. ಕೆಲವರನ್ನು ಬ್ರಿಟಿಷ್‌ ಸರಕಾರ ನೇಮಿಸಿದ್ದರೆ, ಇನ್ನು ಕೆಲವರನ್ನು ಬ್ರಿಟಿಷ್‌ ಸರಕಾರಕ್ಕೆ ತಲೆಬಾಗಿ ನಡೆಯುವ ದೇಶೀಯ ಸಂಸ್ಥಾನಗಳೇ  ನೇಮಿಸಿಕೊಂಡಿದ್ದವು. ಹೋರಾಟಗಾರರು ಎಲ್ಲೆಲ್ಲಿ ಹೋಗುತ್ತಾರೆ, ಯಾರೊಡನೆ ಸಂಪರ್ಕದಲ್ಲಿದ್ದಾರೆ, ಯಾವ ಬಗೆಯ ಹೋರಾಟದ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬ ಬಗ್ಗೆ ಗೂಢಚಾರರು ಮಾಹಿತಿ ಕಲೆಹಾಕಿ, ಮೇಲಧಿಕಾರಿಗಳಿಗೆ  ಮುಟ್ಟಿಸುತ್ತಿದ್ದರು.

Advertisement

ಬರೋಡೆಯ ಸರಕಾರ, ಲೋಕಮಾನ್ಯ ಬಾಲಗಂಗಾಧರ ತಿಲಕರ ಬೆನ್ನ ಹಿಂದೆ ಅಂಥ ಗೂಢಚಾರರನ್ನು ನೇಮಿಸಿತ್ತು. ಕ್ರಾಂತಿಕಾರಿ ತಿಲಕರದು ನಿರ್ಭೀತ ವ್ಯಕ್ತಿತ್ವ. ಮಾತ್ರವಲ್ಲ, ಅತ್ಯಂತ ಚುರುಕುಬುದ್ಧಿಯೂ  ಕೂಡ. ಅವರ ಸ್ಮರಣಶಕ್ತಿ ಅದೆಷ್ಟು ಅಗಾಧವಾಗಿತ್ತೆಂದರೆ- ಜೈಲಿನಲ್ಲಿ ಗೀತಾರಹಸ್ಯ ಕೃತಿ ಬರೆಯುತ್ತಿದ್ದಾಗ ಸರಕಾರಿ ಅಧಿಕಾರಿಗಳು ಅವರು ಬರೆದಿಟ್ಟಿದ್ದ ಎಲ್ಲ ಹಾಳೆಗಳನ್ನೂ ವಶಪಡಿಸಿಕೊಂಡರಂತೆ.

ತಿಲಕರು ತುಸುವೂ ಧೃತಿಗೆಡದೆ,  ತಾನು ಬರೆದಿಟ್ಟಿದ್ದ ಅಷ್ಟೂ ಸಂಗತಿಗಳನ್ನು ಮತ್ತೆ ಬರೆದು, ಕೃತಿಯನ್ನು ಪೂರ್ಣ ಗೊಳಿಸಿದರಂತೆ! ಅಂಥ ಅದ್ಭುತ ಸ್ಮರಣಶಕ್ತಿ ಮತ್ತು ನಿಶಿತಮತಿ ಇದ್ದ ತಿಲಕರಿಗೆ, ತನ್ನ ಬೆನ್ನ ಹಿಂದೆ ಎಂತೆಂಥ ಮಸಲತ್ತುಗಳು ನಡೆಯುತ್ತಿದ್ದವೆಂಬುದು  ತಿಳಿಯದ ವಿಷಯವೇ? ಗೂಢಾಚಾರರು ಹಿಂದೆ ಬಿದ್ದಿದ್ದಾರೆ ಎಂಬುದು ಗೊತ್ತಿದ್ದರೂ ಅವರ ಚಟುವಟಿಕೆಗಳಲ್ಲಿ ಯಾವ ಬದಲಾವಣೆಯೂ ಇರಲಿಲ್ಲ. ಅದೊಂದು ದಿನ ತಿಲಕರು ಸ್ನೇಹಿತರೊಬ್ಬರನ್ನು ಭೇಟಿ ಮಾಡುವುದಿತ್ತು. ಅಲ್ಲಿ ಮಾತಾಡುತ್ತ,  ಹರ ಟುತ್ತ ಬಹಳಷ್ಟು ಸಮಯವೇ ಕಳೆದುಹೋಯಿತು.

ಅವರನ್ನು ಗುಟ್ಟಾಗಿ ಹಿಂಬಾಲಿಸುತ್ತ ಬಂದಿದ್ದ ಗೂಢಚಾರ, ಪಕ್ಕದ ಒಂದು ಜಾಗದಲ್ಲಿ ಅಡಗಿ ಕೂತಿದ್ದ. ಸಮಯ ಸರಿದಂತೆ ಆತ ಕಾದು ಕಾದು ನಿದ್ದೆಗಿಳಿದುಹೋದ! ತಡರಾತ್ರಿ  ಸ್ನೇಹಿತರ ಮನೆ ಯಿಂದ ಹೊರಬಂದ ತಿಲಕರು, ನೇರವಾಗಿ ಗೂಢ ಚಾರ ಅಡಗಿಕೂತಿದ್ದ ಜಾಗದತ್ತ ನಡೆದು, ಮಲಗಿದ್ದ ಅವನನ್ನು ಎಬ್ಬಿಸಿ- ನಾನು ನನ್ನ ಕೆಲಸ ಮುಗಿಸಿ ಇದೀಗ ಮನೆಗೆ ಹೊರಟಿದ್ದೇನೆ. ನೀವೂ ನಿಮ್ಮ ಡ್ಯೂಟಿ ಮಾಡಲು  ಸಜ್ಜಾಗಿ ಸ್ವಾಮಿ! ಇಲ್ಲವಾದರೆ ಕರ್ತವ್ಯ ಮರೆತ ತಪ್ಪಿಗೆ ನಿಮ್ಮ ಯಜಮಾನರಿಂದ ಒದೆ ತಿನ್ನುತ್ತೀರಲ್ಲವೇ? ಎಂದರು. ಈ ಮಾತು ಕೇಳಿದ ಆ ಗೂಢಚಾರನ ಪರಿಸ್ಥಿತಿ ಹೇಗಾಗಿದ್ದಿರ ಬಹುದೋ ಯೋಚಿಸಿ…

* ರೋಹಿತ್‌ ಚಕ್ರತೀರ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next