ಒಂದು ಕಾಡಿನಲ್ಲಿ ಚಿಟ್ಟೆ ದಂಪತಿ ಇತ್ತು. ಹೆಣ್ಣು ಚಿಟ್ಟೆ ಗರ್ಭಿಣಿಯಾಗಿತ್ತು. ಕೆಲ ದಿನಗಳ ನಂತರ ಮೊಟ್ಟೆ ಇಟ್ಟಿತು. ಚಿಟ್ಟೆಗಳೆರಡೂ ಮೊಟ್ಟೆಯನ್ನು ಜತನದಿಂದ ಕಾಪಾಡಿದವು. ಮೊಟ್ಟೆಯಿಂದ ಹುಳು ಹೊರಬಂದು ಅದಕ್ಕೆ ರೆಕ್ಕೆ ಬಲಿಯುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡವು. ಹಾರಲು ಕಲಿಯುವ ಸಮಯದಲ್ಲಿ ತಂದೆ ಚಿಟ್ಟೆ ಮರಿಗೆ ಹಾರುವುದು ಹೇಗೆ, ಮಧು ಹೀರುವುದು ಹೇಗೆ ಎಂಬಿತ್ಯಾದಿ ವಿಚಾರಗಳ ಕುರಿತಾಗಿ ಪಾಠ ಮಾಡಿದವು.
ಒಂದು ದಿನ ಮರಿ ಚಿಟ್ಟೆ ತಂದೆ ತಾಯಿಗೆ ವಂದಿಸಿ ಸ್ವತಂತ್ರವಾಗಿ ಹಾರಿಕೊಂಡು ಆಹಾರ ಹುಡುಕುತ್ತಾ ಹೊರಟಿತು. ದಂಪತಿ ಚಿಟ್ಟೆಗಳಿಗೆ ಖುಷಿಯಾಯಿತು. ಸಂಜೆಯಾಯಿತು ಚಿಟ್ಟೆ ಮರಿ ಗೂಡಿಗೆ ಬರಲೇ ಇಲ್ಲ. ಅಪ್ಪ ಅಮ್ಮನಿಗೆ ಆತಂಕ ಶುರುವಾಯಿತು. ಕತ್ತಲು ಕವಿಯುತ್ತಿದ್ದಂತೆಯೇ ಚಿಟ್ಟೆ ಮರಿ ಗೂಡಿಗೆ ವಾಪಸ್ಸಾಯಿತು. ಅದರ ರೆಕ್ಕೆಗಳು ಅಲ್ಲಲ್ಲಿ ತೂತಾಗಿದ್ದವು. ಮುಖದ ಮೇಲೆ ಗಾಯದ ಗುರುತುಗಳಿದ್ದವು. ಪಾಲಕರು “ಏನಾಯ್ತು ಮರೀ?’ ಎಂದು ಕೇಳಿದವು.
ಮರಿ “ನಾನು ಮಧು ಹುಡುಕಿಕೊಂಡು ಹಾರುತ್ತಾ ಹೋದೆ. ಒಂದೆಡೆ ಬೇಲಿಯೊಳಗೆ ಹೂವುಗಳು ಆಗ ತಾನೇ ಅರಳಿದ್ದವು. ಅಲ್ಲಿ ಮುಳ್ಳುಗಳು ತುಂಬಾ ಇದ್ದವು. ಅವುಗಳಿಂದ ತಪ್ಪಿಸಿಕೊಂಡು ಹೂಗಳಿಂದ ಮಧು ಹೀರಿದೆ. ಹೊಟ್ಟೆ ತುಂಬಿತು. ಸುತ್ತಮುತ್ತ ಇರುವ ಮುಳ್ಳುಗಳನ್ನು ನೋಡಿದೆ. ನೀವು ಅವುಗಳ ತಂಟೆಗೆ ಹೋಗಬೇಡ ಅಂತ ಹೇಳಿದ್ರಿ. ಆದರೆ ನಾನು ಏನಾಗುತ್ತೆ ನೋಡಿಯೇಬಿಡೋಣ ಎಂದು ಅದರ ಬಳಿಗೆ ಹೋಗಿ ಕುಣಿದಾಡಿದೆ. ಮುಳ್ಳು ಬಾಲಕ್ಕೆ ಚುಚ್ಚಿಕೊಂಡಿತು.
ಅದರಿಂದ ಪಾರಾಗುವಷ್ಟರಲ್ಲಿ ಇನ್ನೊಂದು ಮುಳ್ಳು ನನ್ನ ರೆಕ್ಕೆಯನ್ನು ಚುಚ್ಚಿತು. ಸಹಾಯಕ್ಕೆ ಯಾರೂ ಬರಲಿಲ್ಲ. ಪುಣ್ಯಕ್ಕೆ ಗಾಳಿಯು ಜೋರಾಗಿ ಬೀಸಿ ನನ್ನನ್ನು ಪಾರು ಮಾಡಿತು. ಓಡಿ ಬಂದೆ.’ ಅಂದಿತು. “ನಮ್ಮ ಮಧ್ಯೆ ಒಳ್ಳೆಯವರು ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಒಳ್ಳೆಯವರ ಸಹವಾಸ ಮಾಡಿದರೆ ನಮಗೆ ಶ್ರೇಯಸ್ಸು. ಮುಳ್ಳಿನಂಥ ಮನಸ್ಸುಳ್ಳವರ ಸಹವಾಸ ಮಾಡಿದರೆ ಅಪಾಯ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು’ ಎಂದು ಅಮ್ಮ ಚಿಟ್ಟೆ ಬುದ್ಧಿವಾದ ಹೇಳಿತು. ಮರಿ ಹೂಂ ಎಂದು ತಲೆಯಲ್ಲಾಡಿಸಿತು.
ಸದಾಶಿವ್ ಸೊರಟೂರು