ಬಂಗಾರಪೇಟೆ: ಐದಾರು ತಿಂಗಳಿನಿಂದ ಕೋವಿಡ್ ಸೋಂಕಿನಿಂದಾಗಿ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದ್ದು, ಶಿಕ್ಷಣದಿಂದ ದೂರವಾಗಿದ್ದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಕೆಗೆ ಪ್ರಾಮುಖ್ಯತೆ ಕೊಟ್ಟು ಪ್ರತಿ ದಿನ ಉಚಿತ ಶಿಕ್ಷಣ ನೀಡಲು ತಾಲೂಕಿನ ಬೂದಿಕೋಟೆ ಹೋಬಳಿಯ ಕಾರಮಾನಹಳ್ಳಿಯ ಗರಿಕೆ ಸಾಂಸ್ಕೃತಿಕಕೇಂದ್ರ ಮುಂದಾಗಿದೆ.
ರಂಗಭೂಮಿಯೊಟ್ಟಿಗೆ ಶಿಕ್ಷಣ: ಗ್ರಾಮೀಣಭಾಗದ ಶಾಲಾ ಮಕ್ಕಳಿಗೆ ಐದು ವರ್ಷಗಳಿಂದ ಪಠ್ಯಕ್ಕೆ ಪೂರಕವಾಗಿ ಕಲೆ ಮತ್ತು ಸಾಹಿತ್ಯಕ್ಕೆ ಕೊಂಡಿಯಾಗಿರುವ ರಂಗಭೂಮಿಯೊಟ್ಟಿಗೆ ಶಿಕ್ಷಣ ನೀಡುತ್ತಾ ತಾಲೂಕಿನ ಬೂದಿಕೋಟೆ ಹೋಬಳಿ ಕಾರಮಾನಹಳ್ಳಿಯ ಗರಿಕೆ ಸಾಂಸ್ಕೃತಿಕ ಕೇಂದ್ರ ಬಂದಿದೆ. ಜೊತೆಗೆ ಪ್ರತಿ ವರ್ಷ ಬೇಸಿಗೆಯಲ್ಲಿ ಬೇಸಿಗೆ ರಂಗ ಶಿಬಿರ ಆಯೋಜನೆ ಮಾಡಿ ಮಕ್ಕಳಿಂದ ನಾಟಕ ಕಟ್ಟುವಲ್ಲಿ ಸಹ ಯಶಸ್ವಿಯಾಗಿದೆ.
ಕನ್ನಡ, ಇಂಗ್ಲಿಷ್ ತರಗತಿ: ಕೋವಿಡ್ ಲಾಕ್ ಡೌನ್ ಕರಿನೆರಳು ಸಂಸ್ಥೆಯ ಚಟುವಟಿಕೆಗಳ ಮೇಲೆ ಬಿದ್ದಿದ್ದು, ಯಾರೂ ಸಹ ದೃತಿಗೆಡದೆ ಮಕ್ಕಳು ಶಿಕ್ಷಣ ಮತ್ತು ಇತರೆ ಚಟುವಟಿಕೆಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹಾಗೂ ಪೋಷಕರ ಒತ್ತಾಯದ ಮೇರೆಗೆ ಪ್ರತಿ ದಿನ ಕನ್ನಡ ಹಾಗೂ ಇಂಗ್ಲಿಷ್ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಜಿಲ್ಲೆಗೆ ಮಾದರಿ: ಗಡಿಭಾಗದಲ್ಲಿಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಪ್ರಭಾವ ಹೆಚ್ಚಾಗಿರುವ ಕಾರಣದಿಂದ ಕನ್ನಡಕ್ಕೆ ಒತ್ತು ಕೊಡುವ ಮೂಲಕ ಈ ಭಾಗದ ಮಕ್ಕಳ ಮುಂದಿನ ಶೈಕ್ಷಣಿಕ ಪ್ರಗತಿಗೆ ಕನ್ನಡ ಭಾಷೆ ಮಾನದಂಡವಾಗಬೇಕೆಂಬ ಮಹದಾಸೆ ಸಂಸ್ಥೆ ಹೊಂದಿದೆ. ಸಂಸ್ಥೆಯು ಸರ್ಕಾರದ ಯಾವುದೇ ಸಂಪನ್ಮೂಲಗಳನ್ನು ಬಳಸದೇ, ಸಮಾನ ಮನಸ್ಕರು ಒಟ್ಟುಗೂಡಿ ಆರ್ಥಿಕ ಕ್ರೋಢಿಕರಿಸುತ್ತಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವ ಗರಿಕೆ ಸಂಸ್ಥೆ ಜಿಲ್ಲೆಗೆ ಮಾದರಿಯಾಗಿದೆ.
ಪಾಠ, ಚಿತ್ರಕಲೆ, ಸಂಗೀತ: ಗರಿಕೆ ಕುಟೀರಕ್ಕೆ ಪ್ರತಿದಿನ ಕಾರಮಾನಹಳ್ಳಿ ಗ್ರಾಮದ 1ರಿಂದ ಪಿಯುಸಿ ವರೆಗೆ ವ್ಯಾಸಂಗ ಮಾಡುತ್ತಿರುವ 24 ಹೆಣ್ಣು ಹಾಗೂ 26 ಗಂಡು ಮಕ್ಕಳು ಬರುತ್ತಿದ್ದು,ಇವರಿಗೆ ಇಬ್ಬರು ಬೋಧಕರಿದ್ದಾರೆ. ಮಕ್ಕಳು ಪಾಠಪ್ರವಚನಗಳ ಜೊತೆಗೆ ಚಿತ್ರಕಲೆ, ಲಯ, ಸಂಗೀತ, ರಂಗಭೂಮಿ ಕಲಿಯುತ್ತಿದ್ದಾರೆ.
ಇಲ್ಲಿಗೆ ಬರುವಂತಹ ಬಹಳಷ್ಟು ಮಕ್ಕಳಿಗೆ ಓದಲು ಮತ್ತು ಬರೆಯಲು ಕನ್ನಡ ಸರಿಯಾಗಿ ಬರುವುದಿಲ್ಲವಾದ್ದರಿಂದ ಕನ್ನಡ ವರ್ಣಮಾಲೆ, ವ್ಯಾಕರಣ ಕಲಿಸಲು ಒತ್ತು ಕೊಟ್ಟು ವಾರಕ್ಕೆ ಎರಡುದಿನ ಇಂಗ್ಲಿಷ್ ಸಹ ಕಲಿಸಲಾಗುತ್ತಿದೆ. ಸಾಕಷ್ಟು ಮಕ್ಕಳು ಬೆಳಗ್ಗೆಯಿಂದ ಸಂಜೆಯ ತನಕ ಬೇರೆಯವರ ಹಾಗೂ ತಮ್ಮದೇ ಜಮೀನಿನಲ್ಲಿ ಹಾಗೂ ಮನೆಯಲ್ಲಿ ಕೆಲಸ ಮಾಡುತ್ತಾ ಸಂಜೆ ಬಂದು ಸಂತೋಷದಿಂದ ಎಲ್ಲರೊಟ್ಟಿಗೆ ಬೆರೆತು ಆಟವಾಡುತ್ತಾ ಪಾಠಕಲಿಯುತ್ತಿದ್ದಾರೆ.
ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ವಿದ್ಯಾಗಮ ಯೋಜನೆ ಮೂಲಕ ಶಿಕ್ಷಣ ನೀಡಲು ಮುಂದಾಗಿದ್ದರೂ ಸಹ ಇನ್ನವಿದ್ಯಾರ್ಥಿಗಳು ಅತಂತ್ರದಲ್ಲಿದ್ದಾರೆ. ಕೋವಿಡ್ ಹರಡದಂತೆ ಎಚ್ಚರಿಕೆಯ ನಿಯಮಗಳನ್ನು ಪಾಲಿಸುತ್ತಾ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.
–ಕಿರಣ್, ಟ್ರಸ್ಟಿ, ಗರಿಕೆ ಸಾಂಸ್ಕೃತಿಕ ಕೇಂದ್ರ ಕಾರಮಾನಹಳ್ಳಿ
ಎಂ.ಸಿ.ಮಂಜುನಾಥ್