Advertisement

ಪಾಠ ಇಂಗ್ಲಿಷ್‌ ಆದರೂ ಚಿಂತನೆ ಕನ್ನಡ

07:24 AM Jun 17, 2019 | Lakshmi GovindaRaj |

ಬೆಂಗಳೂರು: ವಿಮರ್ಶೆಗೆ ನಿಷ್ಠರಾಗಿದ್ದ ಗಿರಡ್ಡಿ ಗೋವಿಂದರಾಜ ಅವರು ತಮ್ಮ ಬದುಕಿನುದ್ದಕ್ಕೂ ಅದನ್ನು ಒಂದು ವ್ರತದಂತೆ ಆಚರಿಸಿದರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.

Advertisement

ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತು ಭಾನುವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವಿರತ ಪುಸ್ತಕ ಹೊರತಂದಿರುವ “ಡಾ. ಗಿರಡ್ಡಿ ಗೋವಿಂದರಾಜ: ವ್ಯಕ್ತಿ-ವಾಙ್ಮಯ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

“ಗಿರಡ್ಡಿಯವರ ವಿಮರ್ಶೆ ಓದಿದಾಗ ಮಲ್ಲಿಕಾರ್ಜುನ ಮನ್ಸೂರ ಅವರ ಸಂಗೀತ ಕೇಳಿದ ಅನುಭವ ಆಗುತ್ತದೆ’ ಎಂದು ಡಾ.ಎಂ.ಎಂ. ಕಲಬುರಗಿಯವರು ತಮ್ಮ ಲೇಖನ ಒಂದರಲ್ಲಿ ಉಲ್ಲೇಖೀಸಿದ್ದಾರೆ. ಗಿರಡ್ಡಿಯವರು ವಿಮರ್ಶೆಗೆ ವಿಶಿಷ್ಟ ಮತ್ತು ವಿಸ್ಮತ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬರವಣಿಗೆ ಶುದ್ಧಿ ಹೊಂದಿದ್ದ ಅವರು ವಿಮರ್ಶೆಗೆ ಇಂಗ್ಲಿಷ್‌ ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತಿದ್ದರು ಎಂದರು.

ಇಂಗ್ಲಿಷ್‌ ಪಾಠ ಮಾಡುತ್ತಿದ್ದರೂ ಗಿರಡ್ಡಿಯವರ ಚಿಂತನೆ ಕನ್ನಡದ ಕುರಿತಾಗಿತ್ತು. ಇಂಗ್ಲಿಷ್‌ನಲ್ಲಿ ಕಲಿತ ವಿದ್ವತ್ತನ್ನು ಕನ್ನಡಕ್ಕೆ ಧಾರೆ ಎರೆಯುತ್ತಾ ಬಂದರು. ಕನ್ನಡ ಎಂ.ಎ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರ ಬಗ್ಗೆ ಅವರಿಗೆ ತುಂಬಾ ಬೇಸರ ಇತ್ತು. ವಿಮರ್ಶೆಗಳ ಮೂಲಕ ಓದುಗರಲ್ಲಿ ಓದುವ ಅಭಿರುಚಿ ಹುಟ್ಟು ಹಾಕುತ್ತಿದ್ದ ಗಿರಡ್ಡಿಯವರು, ಸಾಹಿತ್ಯ ಓದಿಗೆ ಒಂದು ವಲಯವನ್ನು ಕಟ್ಟಿಕೊಟ್ಟರು ಎಂದು ಸ್ಮರಿಸಿದ ವಸುಂಧಾರ ಅವರು, ಮಹಿಳಾ ಸಾಹಿತ್ಯ ವಿಮರ್ಶೆ ಬಗ್ಗೆ ಗಿರಡ್ಡಿಯವರಿಗೆ ಒಂದಿಷ್ಟು ಅಸಡ್ಡೆ ಇತ್ತು ಅನ್ನುವುದು ಅನೇಕರ ಭಾವನೆಯಾಗಿತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಸಿ.ಎನ್‌. ರಾಮಚಂದ್ರನ್‌ ಮಾತನಾಡಿ, ಗಿರಡ್ಡಿ ಅವರು ಕರ್ನಾಟಕ ಸಾಹಿತ್ಯಅಕಾಡೆಮಿಯ ಅಧ್ಯಕ್ಷರಾಗಿದ್ದ ಕೊನೆಯ ಅವಧಿಯಲ್ಲಿ ಕೈಗೊಂಡ ಶತಮಾನದ ಸಾಹಿತ್ಯ ಸಂಕಲನ ಹೊರತಂದಿದ್ದು ಅವರಿಗೆ ಕಿರಿಟಪ್ರಾಯವಾಗಿತ್ತು. 20ನೇ ಶತಮಾನದಲ್ಲಿ ರಚನೆಗೊಂಡ ಶ್ರೇಷ್ಠ ಕಥೆ, ಕವನ, ವಿಮರ್ಶೆ, ಸಂಶೋಧನೆ, ಲಲಿತ ಪ್ರಬಂಧ ಸೇರಿದಂತೆ ಒಟ್ಟು ಆರು ವಿಧದ ಸಂಪುಟಗಳ ಸಂಪಾದಿಸಿ ಪ್ರಕಟಿಸಿದ್ದು, ಅಸಾಧಾರಣ ಕಾರ್ಯ ಎಂದರು.

Advertisement

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 21 ಮಂದಿ ಸಾಧಕರಿಗೆ “ಕನ್ನಡ ಸೇವಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ, ಮದ್ರಾಸ್‌ ವಿವಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ತಮಿಳ್‌ ಸೆಲ್ವಿ, ನಗರ ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಾಯಣ್ಣ, ಕೃತಿಯ ಸಂಪಾದಕರಾದ ಟಿ.ಎಸ್‌. ದಕ್ಷಿಣಾಮೂರ್ತಿ, ಪ್ರೊ. ಮಹೇಶ್‌ ತಿಪ್ಪಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಹತ್ತಿ ಬಟ್ಟೆಯ ಧ್ವಜ ಬಳಸಿ: ಎಲ್ಲ ಕನ್ನಡಪರ ಸಂಘಟನೆಗಳು ಇನ್ನು ಮುಂದೆ ಹತ್ತಿ ಬಟ್ಟೆಯಿಂದ ತಯಾರಿಸಿದ ಧ್ವಜ ಮತ್ತು ಬಾವುಟಗಳನ್ನು ಬಳಸಬೇಕು. ಏಕೆಂದರೆ, ಈಗ ಬಳಸುತ್ತಿರುವ ಧ್ವಜ ಪಾಲಿಸ್ಟರ್‌ ಬಟ್ಟೆಯದ್ದು, ಇದು ಮಣ್ಣಲ್ಲೂ ಕರಗುವುದಿಲ್ಲ. ಮೈ ಮತ್ತು ಚರ್ಮಕ್ಕೂ ಅದು ಒಳ್ಳೆಯದಲ್ಲ. ಹತ್ತಿ ನಾಡಿನ ಘನತೆಗೆ ಬಹಳ ಮುಖ್ಯ. ಅಲ್ಲದೇ ಹತ್ತಿ ಬಳಸಿದರೆ ಹತ್ತಿ ಬೆಳೆಯುವ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ. ಆದ್ದರಿಂದ ಕನ್ನಡಪರ ಸಂಘಟನೆಗಳು ಹಾರಿಸಲು ಮತ್ತು ಹಾಕಿಕೊಳ್ಳಲು ಹತ್ತಿ ಬಟ್ಟೆಯ ಧ್ವಜಗಳನ್ನು ಬಳಸುವಂತೆ ವಸುಂಧರಾ ಭೂಪತಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next