ಬೆಂಗಳೂರು: ನಗರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿರುವುದು ಹಾಗೂ ಮಳೆ ನೀರು ಇಂಗಿಸುವುದು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಅಂಜರ್ತಲ ಮಟ್ಟ ಕುಸಿಯತ್ತಿದೆ. ಈ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಕೆರೆಗಳಲ್ಲಿ ನೀರು ಸಂಗ್ರಹಿಸಲು ಬಿಬಿಎಂಬಿ, ಬಿಡಿಎ ಸಿದ್ಧತೆ ಮಾಡಿತ್ತಾದರೂ ಮಳೆ ಕೊರತೆ ಉಂಟಾಗಿದೆ.
ಬಿಬಿಎಂಪಿ, ಬಿಡಿಎ ಅಷ್ಟೇ ಅಲ್ಲದೆ ಖಾಸಗಿಯಾಗಿ ಆನಂದ್ ಮಾಲಿಗಾವ್ ಎಂಬುವರು ಸಿಎಸ್‌ಆರ್ ನಿಧಿ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ)ಯಡಿ ಕ್ಯಾಲಸನಹಳ್ಳಿಯ 36 ಎಕರೆ, ಲಾಬಸಂದ್ರದ 10 ಎಕರೆ, ಕೋನಸಂದ್ರದ 16 ಎಕರೆ ಮತ್ತು ಗವಿಕೆರೆಯ 3 ಎಕರೆ ವಿಸ್ತೀರ್ಣದ ಕೆರೆಗಳನ್ನು 4 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ಆದರೆ ಈಗ, ಮಳೆಗಾಗಿ ಕಾಯುವಂತಾಗಿದೆ.
ರಾಜ್ಯದ 17 ಜೆಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆದರೆ, ಬೆಂಗಳೂರು ನಗರ ಹಾಗೂ ಗ್ರಾಮಾಂತ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ. ಜೂನ್‌ನಿಂದ ಆ. 13ರವರೆಗೆ ಬೆಂಗಳೂರು ನಗರ ಜಿಲ್ಲೆ ಶೇ .28 ರಷ್ಟು, ಗ್ರಾಮಾಂತರ ಜಿಲ್ಲೆಯಲ್ಲಿ ಶೇ.31 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕಳೆದ ವರ್ಷವೂ ಇದೇ ಅವಧಿಯಲ್ಲಿ ಮಳೆ ಪ್ರಮಾಣ ಕಡಿಮೆಯಿತ್ತು.
ಕಳೆದ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ನವರೆಗೆ ವಾಡಿಕೆಯಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ 451.9 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ, 421.8 ಮಿ.ಮೀ ಮಳೆಯಾಗಿತ್ತು. ಆದರೆ, ಮಳೆಯ ನೀತು ಸಂಗ್ರಹಿಸಿಟ್ಟುಕೊಳ್ಳುವಲ್ಲಿಯೂ ಬಿಬಿಎಂಪಿ, ಜಲಮಂಡಳಿಯ ಅಧಿಕಾರಿಗಳು ಹೆಚ್ಚು ಆಸಕ್ತಿ ತೋರಲಿಲ್ಲ ಎಂಬ ಆರೋಪವೂ ಇದೆ.
ಬಿಬಿಎಂಪಿಯು 168 ಕೆರೆಗಳ ನಿರ್ವಹಣೆ ಮಾಡುತ್ತಿದ್ದು, ಬಿಡಿಎ ವ್ಯಾಪ್ತಿಯಲ್ಲಿ 32 ಕೆರೆಗಳಿವೆ. ಕೋಟ್ಯಂತರ ರೂ. ವೆಚ್ಚ ಮಾಡಿ ಅಭಿವೃದ್ಧಿ ಮಾಡಿರುವ ಕೆರೆಗಳಿಗೆ ರಾಜಕಾಲುವೆಯಿಂದ ಮಳೆಯ ನೀರು ಹರಿದು ಬರುತ್ತಿಲ್ಲ. ಬದಲಿಗೆ ಒಳಚರಂಡಿಯ ಕಲುಷಿತ ನೀರು ಸೇರುತ್ತಿದೆ.
ಅಂತರ್ಜಲ ನಿರ್ದೇಶನಾಲಯದ ವರದಿ
ಜಲ ಮಟ್ಟ ಕುಸಿತ ( ಮೀಟರ್‌ಗಳಲ್ಲಿ)
ವ್ಯಾಪ್ತಿ 2009 2018
ಆನೇಕಲ್ 13.95 32.53
ಬೆಂ.ಉ 17.63 20.62
ಬೆಂ.ದ 15.47 20.15
ಬೆಂ.ಪೂ 16.79 28.65