ಚಿಕ್ಕಬಳ್ಳಾಪುರ: ಕುಷ್ಠರೋಗವನ್ನು ಸಮರ್ಥವಾಗಿ ಗುಣಪಡಿಸುವ ಬಹು ವಿವಿಧ ಔಷದಿ ಲಭ್ಯವಿದ್ದು, ಕುಷ್ಠರೋಗದ ಬಗ್ಗೆ ಯಾರು ಆತಂಕ ಅಥವಾ ಭಯಪಡದೇ ಧೈರ್ಯವಾಗಿ ಮುಂದೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಬೇಕೆಂದು ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ ತಿಳಿಸಿದರು.
ನಗರದ ಜಿಪಂನ ತಮ್ಮ ಕಚೇರಿಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೆ.5 ರಿಂದ 23 ರ ವರೆಗೂ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಕುಷ್ಠರೋಗ ಪತ್ತೆ ಅಭಿಯಾನದ ಬಗ್ಗೆ ಜನ ಜಾಗೃತಿ ಮೂಡಿಸುವ ಪೋಸ್ಟರ್‌ನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಿಲ್ಲೆಯ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯಾಗಿಲು ಸಹಕಾರ ನೀಡಬೇಕೆಂದರು.
ಪರೀಕ್ಷೆಗೆ ಒಳಪಡಿಸಿ: ಮನಷ್ಯನ ಮೈ ಮೇಲೆ ಕಾಣುವ ಬಿಳಿ ಮಚ್ಚೆಗಳು ಅದರಲ್ಲೂ ಸ್ಪರ್ಶ ಜ್ಞಾನ ಇಲ್ಲದ ಮಚ್ಚೆಗಳು ಇದ್ದರೆ ಅವು ಕುಷ್ಠರೋಗದ ಪ್ರಮುಖ ಗುಣ ಲಕ್ಷ್ಮಣವಾಗಿದ್ದು, ಅಂತಹ ಲಕ್ಷ್ಮಣಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆಗೆ ಒಳಪಡಿಸಬೇಕೆಂದರು. ಸೆ.5 ರಿಂದ 23ರ ವರೆಗೂ ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಪ್ರತಿ ಮನೆ ಮನೆಗೂ ಭೇಟಿ ನೀಡಿ ರೋಗದ ಲಕ್ಷ್ಮಣ ಇರುವ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಿದ್ದು, ಈ ಬಗ್ಗೆ ಸಾರ್ವಜನಿಕರು ಪರೀಕ್ಷೆಗೆ ಒಳಪಡಬೇಕೆಂದು ಮನವಿ ಮಾಡಿದರು.
ರೋಗ ಪತ್ತೆ ಬಗ್ಗೆ ತರಬೇತಿ: ಕುಷ್ಠರೋಗ ಇತ್ತೀಚೆಗೆ ಕಡಿಮೆ ಆಗುತ್ತಾ ಬರುತ್ತಿದ್ದು, ಜಿಲ್ಲೆಯನ್ನು ಸಂಪೂರ್ಣ ಕುಷ್ಠರೋಗ ಮುಕ್ತ ಮಾಡಲು ಗುರಿ ಹೊಂದಲಾಗಿದೆ. ಪ್ರತಿ ವರ್ಷ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕುಷ್ಠರೋಗ ಪತ್ತೆ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ಈಗಾಗಲೇ ಜಿಲ್ಲೆಯ ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಮೇಲ್ವಿಚಾರಕಿಯರಿಗೆ ರೋಗ ಪತ್ತೆ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.
ಇಲಾಖೆಯಿಂದ ಸಿದ್ಧತೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್‌ಗೌಡ ಮಾತನಾಡಿ, ಕುಷ್ಠರೋಗ ಪತ್ತೆ ಅಭಿಯಾನಕ್ಕೆ ಜಿಲ್ಲೆಯ ಜನತೆ ಸಹಕಾರ ನೀಡಬೇಕು. ರೋಗ ಕಂಡು ಬರುವ ವ್ಯಕ್ತಿಗಳಿಗೆ ಆರೋಗ್ಯ ಇಲಾಖೆ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ಕೊಡಲಿದೆ. ಈಗಾಗಲೇ ಜಿಲ್ಲೆಯ ಪ್ರತಿ ಹೋಬಳಿ, ಗ್ರಾಪಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕುಷ್ಠರೋಗ ಪತ್ತೆ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ನಡೆಸಲಾಗಿದ್ದು, ಇಲಾಖೆ ಕೂಡ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರ ಮೋಹನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ್ ಸೇರಿದಂತೆ ಜಿಪಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.