ಹಾವೇರಿ: ಮಹಾತ್ಮ ಗಾಂಧಿಧೀಜಿಯವರ ಕನಸಾದ ಕುಷ್ಠರೋಗ ಮುಕ್ತ ಭಾರತ ನಿರ್ಮಿಸಲು ನಾವೆಲ್ಲರೂ ಶ್ರಮಿಸಬೇಕು ಹಾಗೂ ಕುಷ್ಠರೋಗಿಯು ಸಕಾಲಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಕುಷ್ಠ ರೋಗದ ವಿರುದ್ಧ ಅಂತಿಮ ಯುದ್ಧ ನಡೆಸಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಂದ್ರ ದೊಡ್ಡಮನಿ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ವಾರ್ತಾ ಇಲಾಖೆ, ತಾಲೂಕು ಆರೋಗ್ಯಾ ಧಿಕಾರಿಗಳ ಕಚೇರಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಸ್ಪರ್ಶ ಕುಷ್ಠರೋಗ ಅರಿವು’ ಆಂದೋಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಎಲ್ಲ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಬ್ಯಾನರ್, ಕರಪತ್ರ, ಗೋಡೆ ಬರಹಗಳ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸಮಾಜದಲ್ಲಿನ ಕುಷ್ಠರೋಗದ ಬಗ್ಗೆ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ| ಚನ್ನಬಸಯ್ಯ ವಿರಕ್ತಮಠ ಮಾತನಾಡಿ, ಕುಷ್ಠರೋಗವು ಭಯಾನಕ ಕಾಯಿಲೆಯಲ್ಲ, ಕುಷ್ಠರೋಗವು ಮೈಕ್ರೋಬ್ಯಾಕ್ಟಿರಿಯಾದಿಂದ ಬರುವಂತಹ ಕಾಯಿಲೆ. ಗಾಳಿಯ ಮೂಲಕ ಹರಡುತ್ತದೆ. ಬೇಗನೆ ರೋಗ ಕಂಡುಹಿಡಿದು ಬಹುವಿಧ ಔಷಧದಿಂದ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದು ಮತ್ತು ಅಂಗವಿಕಲತೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಜಾಥಾದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ನಾಗರಾಜ ನಾಯಕ, ತಾಲೂಕು ಆರೋಗ್ಯಾಧಿಕಾರಿ ಪ್ರಭಾಕರ ಕುಂದೂರು, ಜಿಲ್ಲಾ ಮಲೇರಿಯಾ ಅಧಿಕಾರಿಗಳು, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾ ಕಚೇರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಸಿಬ್ಬಂದಿಗಳು, ಎಎನ್‌ಎಂ ತರಬೇತಿ ಕೇಂದ್ರದ ಆಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಆಶಾಕಾರ್ಯಕರ್ತೆಯರು, ಭಾಗವಹಿಸಿದ್ದರು. ನಗರದ ಕೇಂದ್ರ ಬಸ್‌ನಿಲ್ದಾಣ, ಮೈಲಾರ ಮಹದೇವಪ್ಪ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು.