ಮಧ್ಯಪ್ರದೇಶ: ಚಿರತೆಯೊಂದು ವಸತಿಗೃಹಕ್ಕೆ ನುಗ್ಗಿ ಒಂದೇ ಕುಟುಂಬದ ಮೂವರನ್ನು ಒಳಗೊಂಡಂತೆ ಐದು ಜನರ ಮೇಲೆ ಭೀಕರವಾಗಿ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದ್ದು, ರಕ್ಷಣೆಗೆಂದು ತೆರಳಿದ್ದ ಪೊಲೀಸರನ್ನೂ ಗಾಯಗೊಳಿಸಿದೆ.
ಈ ಕುರಿತಾದ ವಿಡೀಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯನ್ನು ಒಳಗೊಂಡಂತೆ ಐವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇಲ್ಲಿನ ಖಾಸಗಿ ವಸತಿಗೃಹದ ಒಳಗೆ ಬಂದ ಚಿರತೆ ತಕ್ಷಣವೇ ಅಲ್ಲಿದ್ದ ಜನರ ಮೇಲೆ ದಾಳಿ ಮಾಡಿದೆ. ಈ ಸಮಯದಲ್ಲಿ ಅಸಹಾಯಕ ಜನರನ್ನು ರಕ್ಷಣೆ ಮಾಡಲು ಮುಂದಾದ ಪೊಲೀಸರು ಚಿರತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದಾಗ ಪೊಲೀಸರ ಪ್ರಯತ್ನ ವಿಫಲವಾಗಿ ಚಿರತೆ ಪೊಲೀಸರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ:ಕಾರ್ಯತಂತ್ರದ ಸಹಯೋಗವನ್ನು 5 ವರ್ಷಗಳ ತನಕ ವಿಸ್ತರಿಸಿಕೊಂಡ ನ್ಯೂಮಾಂಟ್, ಇನ್ಫೋಸಿಸ್ ..!
ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಸಿಬಂದಿ ವರ್ಗ ಹಾಗೂ ಟೈಗರ್ ಫೋರ್ಸ್ ಮತ್ತು ವೃಗಾಲಯದ ಸಿಬಂದಿಗಳೂ ಕೂಡಾ ಪೊಲೀಸರ ಜೊತೆ ಕೈ ಜೋಡಿಸಿದ್ದು, ಅರವಳಿಕೆ ಮದ್ದು ಹಾಗೂ ಬಲೆಗಳನ್ನು ಬಳಸಿ ಸತತ ಐದು ಘಂಟೆಗಳ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಭಯದ ವಾತಾವರಣ ಮನೆಮಾಡಿದ್ದು, ಈ ಹಿನ್ನೆಲೆಯಲ್ಲಿ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆಯ ದೃಶ್ಯಗಳನ್ನು ಜನರು ವೀಕ್ಷಿಸುವಂತೆ ಪ್ರದರ್ಶನವನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.