ಉಡುಪಿ: ಮಣಿಪಾಲ ಸಮೀಪದ ಇಂದ್ರಾಳಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ದುರ್ಗಾನಗರ ಬಳಿ ಚಿರತೆ ಕಾಣಿಸಿದ್ದು, ಜನರು ಭೀತರಾಗಿದ್ದಾರೆ.
ಮಂಗಳವಾರ ತಡರಾತ್ರಿ ಇಲ್ಲಿ ನಾಯಿಯೊಂದನ್ನು ಚಿರತೆ ಕೊಂದಿದೆ. ಘಟನೆ ಬುಧವಾರ ಬೆಳಗ್ಗೆ ಗೊತ್ತಾಗಿದ್ದು, ಪರಿಸರದಲ್ಲಿ ಚಿರತೆಯ ಹೆಜ್ಜೆ ಗುರುತು ಕೂಡ ಕಂಡುಬಂದಿದೆ.
ರಾತ್ರಿ ವೇಳೆ ಇಲ್ಲಿ ಸಾಮಾನ್ಯವಾಗಿ ಜನ ಸಂಚಾರ ಇರುತ್ತಿದ್ದು, ಚಿರತೆ ಕಾಣಿಸಿಕೊಂಡ ಬಳಿಕ ಜನರು ಆತಂಕಿತರಾಗಿದ್ದಾರೆ.
ಚಿರತೆಗೆ ಏಟು ಬಿದ್ದರೆ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಇಲ್ಲದಿದ್ದರೆ ಮನುಷ್ಯರಿಗೆ ಯಾವುದೇ ಸಮಸ್ಯೆಯಿಲ್ಲ. ಚಿರತೆ ಸಾಮಾನ್ಯವಾಗಿ ಒಂದೇ ಪ್ರದೇಶ ದಲ್ಲಿ ನಿಲ್ಲುವುದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಬ್ರಹ್ಮಾವರ, ಕಾಪು, ಶಿರ್ವ, ಮೂಡು ಬೆಳ್ಳೆ ಭಾಗ ಗಳಲ್ಲಿ ಬೋನು ಇರಿಸಲಾಗಿದೆ.
ಇದನ್ನೂ ಓದಿ:ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!
ಆಸುಪಾಸಿನಲ್ಲಿ ಚಿರತೆ ಕಂಡು ಬಂದರೆ ಅರಣ್ಯ ಇಲಾಖೆ ಅಥವಾ 1926 ಸಂಖ್ಯೆಗೆ ದೂರು ನೀಡ ಬಹುದು ಎಂದು ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರಿ ತಿಳಿಸಿದ್ದಾರೆ.