Advertisement

ತೀರ್ಥಹಳ್ಳಿ ಪಟ್ಟಣದ ತುಡ್ಕಿ ಬಳಿ ಕಾಣಿಸಿಕೊಂಡ ಚಿರತೆ…ಆತಂಕದಲ್ಲಿ ಜನತೆ

06:49 PM Feb 17, 2023 | Team Udayavani |

ತೀರ್ಥಹಳ್ಳಿ : ವನ್ಯಜೀವಿಗಳ ಕಾಟ ಬರೀ ಗ್ರಾಮಾಂತರ ಪ್ರದೇಶಕ್ಕೆ ಸೀಮಿತವಾಗಿಲ್ಲ, ಪಟ್ಟಣ, ನಗರ ಪ್ರದೇಶಕ್ಕೂ ವನ್ಯಜೀವಿಗಳು ದಾಂಗುಡಿ ಇಡುತ್ತಿದ್ದು ಭಯ ಮೂಡಿಸುತ್ತಿವೆ. ಕೆಲದಿನದಿಂದ ಪಟ್ಟಣ ಸಮೀಪದ ತುಡ್ಕಿಯ ಆನಂದಗಿರಿ ಗುಡ್ಡದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಂಡು ಬಂದಿದ್ದು ಜನರು ಗಾಬರಿಗೊಂಡಿದ್ದಾರೆ.

Advertisement

ಆನಂದಗಿರಿ ಗುಡ್ಡದಲ್ಲಿರುವ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಆಟದ ಮೈದಾನಕ್ಕೆ ತೆರಳದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಮಕ್ಕಳ ಪ್ರಾರ್ಥನಾ ಕಾರ್ಯಕ್ರಮದ ಅವಧಿಯನ್ನು ಕೆಲ ದಿನದ ಮಟ್ಟಿಗೆ ಬದಲಾಯಿಸಲಾಗಿದೆ. ಕಟ್ಟಡ ಒಳಾಂಗಣ, ಕೊಠಡಿಯಲ್ಲಿ ಇರುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಚಿರತೆ ಓಡಾಟವನ್ನು ಸಾರ್ವಜನಿಕರು ಗುರುತಿಸಿದ್ದು ಅರಣ್ಯ ಇಲಾಖೆ, ಮೊರಾರ್ಜಿ ವಸತಿ ಶಾಲೆಗೆ ಆಡಳಿತಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ಕ್ರಮವಹಿಸಲಾಗಿದೆ.

ಆನಂದಗಿರಿ ಗುಡ್ಡದ ಭಾಗದಲ್ಲಿ ತಿಂಗಳಿನಿಂದ ಚಿರತೆ ಓಡಾಟ ನಡೆಸುತ್ತಿದ್ದು ಜೀವಾಪಾಯ ಉಂಟು ಮಾಡಬಹುದು ಎಂಬ ಆತಂಕ ಎದುರಾಗಿದೆ. ಆನಂದಗಿರಿ ಗುಡ್ಡದ ಪರಿಸರದಲ್ಲಿ ಮೊರಾರ್ಜಿ ವಸತಿ ಶಾಲೆ, ಐಟಿಐ ಕಾಲೇಜು, ತುಂಗಾ ಮಹಾವಿದ್ಯಾಲಯ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಜನವಸತಿ ಪ್ರದೇಶ ಇದೆ. ದಿಢೀರನೆ ಚಿರತೆ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರಲ್ಲಿ ಕಳವಳ ಉಂಟು ಮಾಡಿದೆ.

ಪಟ್ಟಣಕ್ಕೆ ಕಾಡಾನೆ ಪ್ರವೇಶ: ಒಂದೂವರೆ ತಿಂಗಳ ಹಿಂದೆ ತೀರ್ಥಹಳ್ಳಿ ಪಟ್ಟಣ, ಕುರುವಳ್ಳಿ, ತುಂಗಾನದಿ ಪರಿಸರದಲ್ಲಿ ಒಂಟಿ ಕಾಡಾನೆ ಕಾಣಿಸಿಕೊಂಡ ಬೆನ್ನಲ್ಲೆ ಚಿರತೆ ಪ್ರತ್ಯಕ್ಷವಾಗಿದೆ. ವನ್ಯಜೀವಿಗಳು ನಿಧಾನಕ್ಕೆ ಪಟ್ಟಣ ಪ್ರವೇಶ ಮಾಡುತ್ತಿದ್ದು ಭೀತಿ ಮೂಡುವಂತಾಗಿದೆ. ಆಹಾರ ಅರಸಿ ವನ್ಯಜೀವಿಗಳು ಪಟ್ಟಣಕ್ಕೆ ಪ್ರವೇಶ ಮಾಡುತ್ತಿವೆ ಎಂಬ ಸಂಗತಿಯನ್ನು ಪ್ರಾಥಮಿಕವಾಗಿ ಗುರುತಿಸಿದರೂ ಬೇರೆ ಕಾರಣಗಳ ಪತ್ತೆಗೆ ಸಂಬಂಧಪಟ್ಟ ಇಲಾಖೆಗಳು ಇನ್ನು ಮುಂದಾಗಿಲ್ಲ

ಪರಿಸರ ಸಂರಕ್ಷಣೆ ನಿಯಮ ಕಠಿಣಗೊಳ್ಳುತ್ತಿರುವ ಸಂದರ್ಭ ಜನವಸತಿ ಪ್ರದೇಶದಲ್ಲಿ ವನ್ಯಜೀವಿಗಳು ಕಾಣಿಸುತ್ತಿವೆ. ಮಾನವ, ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾಗದಂತೆ ಎಚ್ಚರವಹಿಸಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ. ಪಟ್ಟಣದ ಸುತ್ತಲಿನ ಪರಿಸರದ ಸಂರಕ್ಷಣೆ ನಿಯಮಗಳ ಅನ್ವಯ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಸುತ್ತಲಿನ ಅರಣ್ಯ ಪರಿಸರದ ಪ್ರದೇಶವನ್ನು ಬಫರ್ ಜೋನ್ ವಲಯವನ್ನಾಗಿ ಗುರುತಿಸಲು ಆಡಳಿತದಲ್ಲಿ ಬಿರುಸಿನ ಸಿದ್ಧತೆ ನಡೆಯುತ್ತಿದೆ ಎಂಬ ಮಾತು ಕೇಳಿಬಂದಿದೆ.

Advertisement

ಚಿರತೆ ಓಡಾಟದ ಕುರಿತಂತೆ ಜನರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಿಂಗಳಿನಿಂದ ಮಕ್ಕಳ ಸುರಕ್ಷತೆಗಾಗಿ ಎಚ್ಚರಿಕೆ ವಹಿಸಲಾಗಿದೆ. ಚಿರತೆ ಓಡಾಟದ ಕುರಿತಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅರಣ್ಯ ಇಲಾಖೆ ಶಾಲೆ ಸುತ್ತಲಿನ ಪರಿಸರವನ್ನು ಗಮನಿಸುತ್ತಿದೆ ಎಂದು ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಸುಚಿತ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ಜೆ.ಪಿ.ನಡ್ಡಾ ಉಡುಪಿ, ಚಿಕ್ಕಮಗಳೂರು ಪ್ರವಾಸ, ಕಾರ್ಯಕ್ರಮಕ್ಕೆ ಸಿದ್ಧತೆ

Advertisement

Udayavani is now on Telegram. Click here to join our channel and stay updated with the latest news.

Next