Advertisement
ಅಂದು ಭಾನುವಾರ ಏಳನೇ ಫೆಬ್ರವರಿ 2016. ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ಊರಿನಿಂದ ಬಂದಿದ್ದ ಅಪ್ಪ-ಅಮ್ಮ ವಾಪಸ್ಸು ಹೊರಟು ನಿಂತರು. ಆಟೋ ಹತ್ತಿಸಿ ವಾಪಸ್ಸು ಬಂದವನು ಅದ್ಯಾಕೋ ಗೊತ್ತಿಲ್ಲ ಇಂಟರ್ನೆಟ್‌ನಲ್ಲಿ ಶ್ರೀಮುರಳಿ ನಟಿಸಿದ “ಉಗ್ರಂ’ ಚಿತ್ರವನ್ನು ನೋಡಲು ಪ್ರಾರಂಭಿಸಿದೆ. ಕೇವಲ ವಾಣಿಜ್ಯ ದೃಷ್ಟಿಯಿಂದ ತಯಾರಿಸಿದ ಚಲನಚಿತ್ರಗಳನ್ನು ನೋಡುವ ಅಭ್ಯಾಸವಿಲ್ಲ. ಒಂದರ್ಧ ಗಂಟೆ ಪಿಕ್ಚರ್ ನೋಡಿರಬಹುದು ಮೊಬೈಲ್ ರಿಂಗಾಯಿತು. “ಯಾರಪ್ಪ ಇದು ಭಾನ್ವಾರಾ ಮಧ್ಯಾಹ್ನ’ ಎಂದುಕೊಂಡು ನೋಡಿದರೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಯಪ್ಪನವರು. “ನಮಸ್ಕಾರ ಗುಬ್ಬಿಯವರೇ, ನೀವು ಟಿವಿಯಲ್ಲಿ ನೋಡಿರಬೇಕು…ಈ ವೈಟ್‌ಫೀಲ್ಡ್‌ನಲ್ಲಿ ಇರೋ ವಿಬ್ಗಯಾರ್ ಶಾಲೆಯಲ್ಲಿ ಚಿರತೆ ಬಂದುಬಿಟ್ಟದೆ. ಬೆಳಿಗ್ಗೆಯಿಂದ ಪ್ರಯತ್ನ ಪಡುತ್ತಿದ್ದೇವೆ, ಯಾಕೋ ಹಿಡಿಯಲಾಗಲಿಲ್ಲ. ಚೀಫ್ ವೈಲ್ಡ್‌ಲೈಫ್ ವಾರ್ಡನ್ ನಿಮ್ಮನ್ನು ಸಹ ಒಮ್ಮೆ ಕರೆಯಿರಿ ಅಂತ ಹೇಳಿದರು, ದಯವಿಟ್ಟು ಬರ್ತೀರಾ?’ ಎಂದರು. ಬೆಳಿಗ್ಗೆ ಸ್ನೇಹಿತರೊಬ್ಬರು ಫೋಟೋ ಇಮೇಲ್ ಮಾಡಿದ್ರು, ನೋಡಿದೆ ಸರ್, ಖಂಡಿತ ಬರ್ತೀನಿ ಎಂದು ಫೋನಿಟ್ಟೆ. ಕರಿಯಪ್ಪನವರು ಕಾಡು-ವನ್ಯಜೀವಿ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿ. ಅವರು ಮುಂಚೆ ಹಾಸನದಲ್ಲಿದ್ದಾಗ ಅವರೊಡನೆ ಸಂರಕ್ಷಣಾ ವಿಚಾರಗಳಲ್ಲಿ ಹತ್ತಿರದಿಂದ ಕೆಲಸ ಮಾಡಿ ತಿಳಿದಿದ್ದೆ. ತಕ್ಷಣ ಹೊರಡಲು ತಯಾರಿ ಪ್ರಾರಂಭಿಸಿದೆ. ಏನಾದರೂ ಇರಲಿ ಎಂದು ಅಲ್ಲಿದ್ದ ಪಶುವೈದ್ಯ ಅರುಣ್‌ಗೆ ಫೋನಾಯಿಸಿದೆ. “ಏನು ಅರುಣ್, ನಿಜವಾಗ್ಲೂ ಚಿರತೇನಾ?’ ಅಂದೆ. “ಹೌದು ಸರ್, ನಾನು ಸಿಸಿಟಿವಿ ಫುಟೇಜ್ ನೋಡಿದೆ’ ಎಂದರು.ಅದ್ಯಾಕೋ ಗೊತ್ತಿಲ್ಲ. ಈ ಮನೆ, ಬಿಲ್ಡಿಂಗ್ ಒಳಗೆ ಸೇರಿಕೊಳ್ಳುವ ಚಿರತೆಗಳು ಬರುವುದೆಲ್ಲಾ ಭಾನುವಾರವೇ. ಇವಕ್ಕೆ ಭಾನುವಾರ ಅಂತಾನಾದ್ರೂ ಜ್ಞಾನ ಬ್ಯಾಡ್ವಾ? ಸರಿ ಏನು ಮಾಡುವುದೆಂದು ಹೊರಡುವ ತಯಾರಿ ಆರಂಭಿಸಿದೆ. ನನ್ನ 23 ವರ್ಷ ಹಳೆಯ ದುರ್ಬೀನು ಮತ್ತು ಒಂದು ದೊಡ್ಡ ಟಾರ್ಚನ್ನು ಒಂದು ಚಿಕ್ಕ ಬ್ಯಾಗ್‌ಪ್ಯಾಕ್‌ನಲ್ಲಿ ತುಂಬಿಕೊಂಡೆ. ಅಷ್ಟರಲ್ಲಿ ಕರಿಯಪ್ಪನವರಿಂದ ಇನ್ನೊಂದು ಫೋನ್, “ಗುಬ್ಬಿಯವರೇ, ಚಿರತೆ ಶಾಲೆ ಒಳಗೆ ಇಲ್ಲ, ನೀವು ಹೊರಡಬೇಡಿ’. ಸರಿಯೆಂದು ಕೂತು ಮತ್ತೆ ಸಿನೆಮಾ ಮುಂದುವರಿಸಿದೆ. ಇನ್ಹತ್ತು ನಿಮಿಷ ಕಳೆದಿರಬಹುದು, ಮತ್ತೆ ಫೋನ್- “ಗುಬ್ಬಿಯವರೇ, ಚಿರತೆ ಅಲ್ಲೇ ಇದೆ. ಬೇಗ ಬಂದಿಡಿ’ ಅಂದರು ಕರಿಯಪ್ಪನವರು. ಮತ್ತೆ ಅರುಣ್‌ಗೆ ಫೋನ್ ಮಾಡಿದೆ- “ಹೌದಾರ್, ನಾವೂನು ಚಿರತೆ ಇಲ್ಲ ಎಂದು ಢಾಬಾಕ್ಕೆ ಬಂದು ಊಟ ಮಾಡ್ತಾ ಇದ್ವಿ, ಈಗ ವಾಪಸ್ ಶಾಲೆಗೆ ಹೊರಟ್ವಿ ಸಾರ್’ ಅಂದ್ರು. ತಕ್ಷಣ ಓಲಾ ಬುಕ್ ಮಾಡಿದೆ.
Related Articles
Advertisement
ಸುಮಾರು 5.10ಕ್ಕೆ ಶಾಲೆ ತಲುಪಿದರೆ ಅದೇ ಮಾಮೂಲಿ ದೃಶ್ಯ. ನೂರಾರು ಜನ ಶಾಲೆಯ ಸುತ್ತಲೂ ನಿಂತಿದ್ದಾರೆ. ಮಕ್ಕಳು, ಮರಿ, ಹೆಂಗಸರು ಎಲ್ಲರೂ ಚಿರತೆ ನೋಡಬೇಕೆಂಬ ಕೌತುಕದಲ್ಲಿ ಕಾಂಪೌಂಡ್ ಸುತ್ತ ಜಮಾಯಿಸಿದ್ದಾರೆ. ನಮ್ಮ ತಾಯಿಯ ಊರು ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ವಾರಕೊಮ್ಮೆ ಸಂತೆಯಲ್ಲಿ ಇದೇ ತರಹ ಜನ ಸೇರುತ್ತಿದ್ದದ್ದು. ಗೇಟ್‌ನಲ್ಲಿದ್ದ ಸೆಕ್ಯುರಿಟಿಯವನಿಗೆ ನನ್ನ ಕಾರ್ಡ್ ತೋರಿಸಿ ಒಳ ನುಗ್ಗಿದೆ. ಶಾಲೆಯ ಒಳಗೆ ಹೋದರೆ ಅಲ್ಲೊಂದು ಮಿನಿ ಸಂತೆ.
ಅಧಿಕಾರಿಗಳನ್ನು ಮಾತನಾಡಿಸಿ ಚಿರತೆ ಎಲ್ಲಿದೆ ಎಂದು ಕೇಳಿದರೆ ಒಂದು ಉದ್ದವಾದ ಕಾರಿಡಾರ್‌ನ ಮೂಲೆಯಲ್ಲಿರುವ ಹುಡುಗರ ಬಾತ್ರೂಮ್ ತೋರಿಸಿದರು. ಪಶು ವೈದ್ಯ ಅರುಣ್ ಜೊತೆ ಶಾಲಾ ಕಟ್ಟಡದ ಒಳಗೆಲ್ಲಾ ಸುತ್ತಾಡಿದೆವು. ಚಿರತೆ ಬಚ್ಚಲು ಮನೆಯಿಂದ ಹೊರಬಂದರೆ ಎಲ್ಲಿ, ಹೇಗೆ ಹೋಗಬಹುದು ಎಂದು ಅಂದಾಜು ಮಾಡಿದೆವು. ಮೊದಲು ಬಚ್ಚಲು ಮನೆಯ ಬಾಗಿಲನ್ನು ಭದ್ರಪಡಿಸಿ. ಕಟ್ಟಡದಾಚೆ ಒಮ್ಮೆ ಕಣ್ಣಾಡಿಸಲು ಹೋದೆವು. ಚಿರತೆಯಿರುವ ಬಚ್ಚಲುಮನೆ ಬಹು ವಿಚಿತ್ರವಾಗಿತ್ತು. ಸುಮಾರು ಹತ್ತು ಅಡಿ ಎತ್ತರದಲ್ಲಿದ್ದ ವೆಂಟಿಲೇಟರ್ ಮೂಲಕ ಒಳಗೆ ಇಣುಕಿ ನೋಡಿದರೆ ಒಂದು ಮೂಲೆಯಲ್ಲಿ ವಾಷ್ ಬೇಸಿನ್ ಕೆಳಗೆ ಚಿರತೆಯ ಬಾಲದ ಒಂದು ತುದಿ ಕಂಡಿತು. ಭಾರೀ ಕ್ಲಿಷ್ಟಕರವಾದ ಸ್ಥಳದಲ್ಲಿ ಚಿರತೆಯಿತ್ತು. ಬಚ್ಚಲು ಮನೆಯಲ್ಲಿದ್ದ ಹಲವಾರು ಯೂರಿನಲ್ಸ್‌ನಿಂದಾಗಿ ವಾಶ್ ಬೇಸಿನ್ ಅಡಿಯಿದ್ದ ಚಿರತೆ ಸರಿಯಾಗಿ ಕಾಣುತ್ತಿರಲಿಲ್ಲ.
ಮುಖ್ಯವಾಗಿ ಬಚ್ಚಲುಮನೆಗೆ ಒಂದರ ಪಕ್ಕದಲ್ಲಿ ಇನ್ನೊಂದು ಗೋಡೆ. ಚಿತ್ರದುರ್ಗದ ಕೋಟೆ ಏಳು ಸುತ್ತಿನದ್ದು. ಇದು ಒಂಥರಾ ಎರಡು ಸುತ್ತಿನ ಕೋಟೆಯ ಹಾಗಿತ್ತು. ಎರಡು ಗೋಡೆಗಳ ಮಧ್ಯೆ ಸುಮಾರು ಎರಡಡಿ ಜಾಗ. ಎರಡು ಗೋಡೆಗಳಲ್ಲಿದ್ದ ವೆಂಟಿಲೇಟರ್‌ನ ಜಾಲರಿಗಳು ಕಿತ್ತು ಬಂದಿವೆ. ಇದು ಮುಚ್ಚಲೇಬೇಕು ಇಲ್ಲವಾದಲ್ಲಿ ಇಲ್ಲಿಂದ ಚಿರತೆ ಆಚೆ ಬರುವುದು ಖಂಡಿತವೆಂದು ನಾವಿಬ್ಬರು ನಿರ್ಧರಿಸಿದೆವು. ಅದರೊಡನೆ ವೆಂಟಿಲೇಟರ್‌ನ ಪಕ್ಕದಲ್ಲೇ ಈಜುಕೊಳ. ನಾವು ಚಿರತೆಗೆ ಅರಿವಳಿಕೆ ಮದ್ದು ಕೊಟ್ಟಾಗ ಅದು ಗಾಬರಿಯಾಗಿ ಆಚೆ ಬಂದು ಈಜುಕೊಳಕ್ಕೆ ಹಾರಿದರೆ ಮುಳುಗುವ ಸಾಧ್ಯತೆಯಿತ್ತು ಅಥವಾ, ಚಿರತೆ ಆಚೆ ಬಂದರೆ ಗಾಬರಿಯಾಗಿ ಶಾಲೆಯ ಕಾಂಪೌಂಡ್‌ನ ಒಳಗಿದ್ದ ಶಾಲಾ ಸೆಕ್ಯೂರಿಟಿ, ಅರಣ್ಯ ಇಲಾಖಾ ಸಿಬ್ಬಂದಿ, ಪೊಲೀಸ್‌ನವರು ಅಥವಾ ಇನ್ಯಾರಾದರೂ ಈಜು ಬರದವರು ಗಾಬರಿಯಾಗಿ ಈಜು ಕೊಳಕ್ಕೆ ಹಾರಿದರೆ ಅನಾಹುತವಾಗುವ ಸಂಭವ. ಇನ್ನೊಂದು ಆಯಾಮವೆಂದರೆ, ಅರಿವಳಿಕೆ ಕೊಟ್ಟ ಚಿರತೆ ಆಚೆ ಬರಲು ಹೋಗಿ ಎರಡು ಸುತ್ತಿನ ಗೋಡೆಗಳ ಮಧ್ಯೆ ಸಿಕ್ಕಿಕೊಂಡರೆ ಬೆನ್ನು ಮುರಿದುಕೊಳ್ಳುವುದು ಖಚಿತ. ಚಿರತೆ ಮತ್ತು ಅಲ್ಲಿ ಸೇರಿದ್ದ ಜನರ ಹಿತದೃಷ್ಟಿಯಿಂದ ಸನ್ನಿವೇಶವನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ವಿಶ್ಲೇಷಿಸಿ ನೋಡಬೇಕಾಗಿತ್ತು. ಶಾಲಾ ಕಟ್ಟಡದೊಳಗೆ ಹಿಂದಿರುಗಿ ಅಧಿಕಾರಿಗಳೊಂದಿಗೆ ಚರ್ಚಿಸಿದೆವು. ಶಾಲೆಯಾಚೆ ಇರುವ ಜನರನ್ನು ವಾಪಸ್ಸು ಕಳುಹಿಸಬೇಕು, ಪೊಲೀಸರಿಗೆ ಮನವಿ ಮಾಡಿ ಸೆಕ್ಷೆನ್ 144 ಜಾರಿಗೊಳಿಸಬೇಕು, ಚಿರತೆಯಿದ್ದ ಬಚ್ಚಲು ಮನೆಯಾಚೆಯಿರುವ ಈಜು ಕೊಳದಿಂದ ನೀರು ಖಾಲಿ ಮಾಡಿಸಬೇಕು, ಮತ್ತು ಬಚ್ಚಲ ಮನೆಯ ವೆಂಟಿಲೇಟರ್‌ಗಳನ್ನು ಹೇಗಾದರೂ ಮಾಡಿ ತುರ್ತಾಗಿ ಮುಚ್ಚಬೇಕು. ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ನಿರ್ದೇಶನಗಳನ್ನು ಕೊಡುವುದು, ಅವರ ನಿರ್ದೇಶನದಂತೆ ಮಾತ್ರ ಕಾರ್ಯ ನಡೆಸುವುದು, ಎಲ್ಲವೂ ಬಂದೋಬ… ಮಾಡಿದ ನಂತರವೇ ಚಿರತೆಗೆ ಅರುಣ್ ಅರಿವಳಿಕೆ ಮದ್ದು ನೀಡುವುದು; ಅಲ್ಲಿಯವರೆಗೆ ಎಲ್ಲರೂ ಕಟ್ಟಡದಿಂದ ಆಚೆ ಹೋದರೆ ಚಿರತೆಯೂ ಸ್ವಲ್ಪ$ಶಾಂತವಾಗುತ್ತದೆ ಅದರಿಂದ ಅರಿವಳಿಕೆ ಮದ್ದು ಸ್ವಲ್ಪ$ಬೇಗ ಪರಿಣಾಮ ಬೀರುತ್ತದೆ ಎಂದೆಲ್ಲ ಚರ್ಚಿಸಿ-ನಿರ್ಧರಿಸಿ ಕೋಣೆಯಿಂದ ಆಚೆ ಬಂದೆವು. ಪ್ರಾಣಿಗಳು ಉದ್ರಿಕ್ತಗೊಂಡಿದ್ದರೆ ಅರಿವಳಿಕೆ ಮದ್ದು ಪರಿಣಾಮ ಬೀರಲು ಬಹು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಅವುಗಳನ್ನು ಶಾಂತವಾಗಿರಿಸುವುದು ಬಹು ಮುಖ್ಯ. ಅದರೊಡನೆ ನಾವೂ ಶಾಂತವಾಗಿರಬೇಕು. ಸಂದಿಗ್ಧ ಪರಿಸ್ಥಿತಿಗಳಲ್ಲಿ ಶಾಂತವಾಗಿಲ್ಲದಿದ್ದರೆ ಸಮತೋಲನವಾಗಿ ಯೋಚಿಸುವುದು, ಅತ್ಯಲ್ಪಕಾಲದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ನಾವು ಶಾಂತವಾಗಿದ್ದರೂ ಅಂದು ನನ್ನ ಮನಸ್ಸು ಏಕೋ ಹೆಚ್ಚು ಯೋಚನೆ ಮಾಡುತಿತ್ತು. ನನ್ನ ಜರ್ಮನ್ ದೇಶದ ಬೈನಾಕ್ಯುಲರ್ ಕಬ್ಬಿಣದಿಂದ ಮಾಡಲಾಗಿತ್ತು. ಎಂದೂ ಈ ಯೋಚನೆಗಳನ್ನು ಮಾಡದ ನಾನು ಅಂದು ಈ ಬೈನಾಕುಲರ್ ಆತ್ಮರಕ್ಷಣೆಗೆ ಒಂದು ಒಳ್ಳೆಯ ಆಯುಧ ಎಂದು ಯೋಚಿಸಿದೆ.
ಆಚೆ ಬಂದು ಕಾರ್ಯ ಚಾಲನೆಗೊಳಿಸಿದೆವು. ಯುವ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ಪೊಲೀಸ್ ಇನ್ಸ್‌ಪೆಕ್ಟರ್‌ರನ್ನು ಕರೆದು ಸೆಕ್ಷನ್ 144 ಜಾರಿಗೊಳಿಸಿ ಜನರನ್ನು ಹಿಂದೆ ಕಳಿಸಿ ಎಂದು ಕೇಳಿಕೊಂಡರು. “ಇಲ್ಲ ಮೇಡಂ ಇದಕ್ಕೆ ತಹಶೀಲ್ದಾರ್ ಆಜ್ಞೆ ಮಾಡಬೇಕು, ಇವತ್ತು ಭಾನುವಾರ ಅವರು ಎಲ್ಲಿಗೋ ಹೋಗಿದ್ದಾರೆ ನೀವೇ ಫೋನಿನಲ್ಲಿ ಮಾತನಾಡಿ’ ಎಂದರು. ಇನ್ಸ್‌ಪೆಕ್ಟರ್ ಮುಂದುವರಿಸಿದರು “ಮೇಡಂ ನಾವೇ ಜನರನ್ನು ಚದುರಿಸುತ್ತೇವೆ, ನೀವು ಕೆಲಸ ಪ್ರಾರಂಭ ಮಾಡಿ’. ಅಷ್ಟರಲ್ಲಿ ದೀಪಿಕಾ ತಹಸೀಲ್ದಾರರೊಡನೆ ಫೋನಿನಲ್ಲಿ ಮಾತನಾಡುತ್ತಿರುವುದು ಕೇಳುತ್ತಿತ್ತು. ಶಾಲೆಯ ಮೇಲ್ವಿಚಾರಕರೊಬ್ಬರಿಗೆ ದಯವಿಟ್ಟು ಈಜುಕೊಳ ಖಾಲಿ ಮಾಡಿಸುತ್ತೀರಾ ಎಂದು ಮನವಿ ಮಾಡಿದೆ. “ಇಲ್ಲ ಸರ್ ಸುಮಾರು ಒಂದು ಲಕ್ಷ ಲೀಟರ್ ನೀರಿದೆ, ಖಾಲಿ ಮಾಡಿಸುವುದು ಕಷ್ಟ’ ಎಂದು ಕೈಚೆಲ್ಲಿಬಿಟ್ಟರು. ನನಗೆ ಸ್ವಲ ಹಿಂಸೆಯಾಯಿತು. ಇಲ್ಲಿ ಪ್ರಾಣದ ವಿಚಾರ ಮಾತನಾಡುತ್ತಿದ್ದೇವೆ ಇವರು ಸ್ವಲ್ಪ ಕೆಲಸ ಆಗುತ್ತದೆ ಎಂದು ಹಿಂಜರಿಯುತ್ತಿದ್ದಾರಲ್ಲಾ ಎಂದುಕೊಂಡೆ….
(ಮುಂದುವರಿಯುವುದು) ಚಿರತೆ ಶಾಲೆಯೊಳಗೆ ಏನು ಮಾಡಿತು ಎನ್ನುವ ಸಿಸಿಟಿವಿ ಫುಟೇಜ್ ನೋಡಲುಈ ಲಿಂಕ್ ಟೈಪ್ ಮಾಡಿ bit.ly/2tdllOq
(ವಿಡಿಯೋ ಕೃಪೆ: ವಿಬ್ಗಯಾರ್ ಶಾಲೆ) ಚಿತ್ರಕೃಪೆ: ಅನಂತ ಸುಬ್ರಹ್ಮಣ್ಯ