ಗದಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಬಲೆಗೆ ಬೀಳಿಸುವ ಯತ್ನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಯಶಸ್ವಿಯಾಗಿದೆ.
ಜಿಲ್ಲೆಯ ಗಜೇಂದ್ರಗಡ ತಾಲೈಕಿನ ಭೈರಾಪೂರ ತಾಂಡಾದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನೊಳಗೆ ಚಿರತೆ ಸೆರೆಯಾಗಿದ್ದು, ಅಕ್ಕಪಕ್ಕದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಗಜೇಂದ್ರಗಡ ತಾಲೂಕಿನ ಭೈರಾಪೂರ, ಕಾಲಕಾಲೇಶ್ವರ, ರಾಜೂರ, ನಾಗೇಂದ್ರಗಡ, ಮಾಲಗಿತ್ತಿ ಭಾಗದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಅನೇಕ ದನಕರು ಹಾಗೂ ನಾಯಿಗಳನ್ನು ಬೇಟೆಯಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಸಧ್ಯ ಚಿರತೆ ಸೆರೆಯಾಗಿದ್ದು, ಸ್ಥಳೀಯರು ಆತಂಕದಿಂದ ಹೊರಬಂದಿದ್ದಾರೆ.
ಇದನ್ನೂ ಓದಿ:2,500 ವರ್ಷಗಳಷ್ಟು ಹಳೆಯ ಸಂಸ್ಕೃತ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ
ಗಜೇಂದ್ರಗಡ ತಾಲೂಕಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಸಾಮಾನ್ಯವಾಗಿದೆ. ಕಳೆದ ಎರಡು ತಿಂಗಳ ಹಿಂದೆ ಪಕ್ಕದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗಡಿ ಗ್ರಾಮದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು.