Advertisement

ಅಜ್ಜಾವರ ಪರಿಸರದಲ್ಲಿ ಬೀಡುಬಿಟ್ಟ ಚಿರತೆ

10:21 AM Oct 03, 2018 | |

ಅಜ್ಜಾವರ: ಕಾಡಾನೆಗಳ ದಾಳಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿ ಸುಧಾರಿಸಿಕೊಂಡಿರುವಾಗ ಅಜ್ಜಾವರಕ್ಕೆ ಇನ್ನೊಂದು ತೊಂದರೆ ಎದುರಾಗಿದೆ. ಗ್ರಾಮದ ಹಲವು ಪ್ರದೇಶಗಳಲ್ಲಿ ಚಿರತೆ ಬೀಡು ಬಿಟ್ಟಿದೆ. ದಾಳಿ ಭೀತಿಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಅಜ್ಜಾವರ ಗ್ರಾಮದ ಪಡಂಬೈಲು, ಕರ್ಲಪ್ಪಾಡಿ, ಮೇದಿನಡ್ಕ ಹಾಗೂ ಅಲೆಟ್ಟಿಯ ಕುಡೆಂಬಿ ಭಾಗಗಳಲ್ಲಿ ಚಿರತೆಗಳು ಕಂಡುಬಂದಿದೆ. ಸುಮಾರು ನಾಲ್ಕು ತಿಂಗಳಿನಿಳಿಂದ ಚಿರತೆಯ ಚಲನವಲನ ಈ ಭಾಗದಲ್ಲಿದೆ.

Advertisement

ಕಣ್ಮರೆಯಾಗುತ್ತಿರುವ ಸಾಕುಪ್ರಾಣಿಗಳು
ದಿನದಿಂದ ದಿನಕ್ಕೆ ಚಿರತೆಯ ಓಡಾಟ ಹೆಚ್ಚುತ್ತಿರುವುದು ಈ ಪ್ರದೇಶದ ನಿವಾಸಿಗಳ ನಿದ್ದೆಗೆಡಿಸಿದೆ. ಸಾಕು ಪ್ರಾಣಿಗಳು ಚಿರತೆಗೆ ಆಹಾರವಾಗುತ್ತಿವೆ. ಈಗಾಗಲೇ ಎರಡು ಹಸು, ಒಂದು ಕರು, ಒಂದು ಆಡು ಹಾಗೂ ಏಳು ನಾಯಿಗಳನ್ನು ಚಿರತೆ ಹೊತ್ತೂಯ್ದು ತಿಂದು ಹಾಕಿದೆ. ಹೂವಯ್ಯ ಗೌಡ ಅವರ ಮನೆಯ ಕೊಟ್ಟಿಗೆಗೆ ನುಗ್ಗಿದ ಚಿರತೆಯೊಂದು ಹಸುವಿನ ಮೇಲೆ ಆಕ್ರಮಣ ನಡೆಸಿದೆ. ಹಸು ಗಂಭೀರವಾಗಿ ಗಾಯಗೊಂಡಿದೆ. ಸಿಆರ್‌ಸಿ ಮೇರಿನಡ್ಕ ಕಾಲನಿಯಲ್ಲೂ ಮನೆಗಳಲ್ಲಿದ್ದ ಆಡುಗಳು ನಾಪತ್ತೆಯಾಗುತ್ತಿವೆ ಎನ್ನುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಬೋನಿಗೂ ಅಂಜದ ಚಿರತೆ!
ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸೂಕ್ಷ್ಮ ಪ್ರದೇಶಗಳಲ್ಲಿ ಬೋನು ಇಟ್ಟಿದೆ. ತಿರುಗಾಡುವಾಗ ಎಚ್ಚರಿಕೆಯಿಂದಿರಿ ಎಂದು ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಚಿರತೆಯ ಚಲನವಲನವಿರುವ ಕರ್ಲಪ್ಪಾಡಿಯಲ್ಲಿ ಬೋನು ಇಟ್ಟಿದ್ದರೂ, ಈವರೆಗೆ ಚಿರತೆ ಅದಕ್ಕೆ ಬಿದ್ದಿಲ್ಲ. ಮನೆಯಲ್ಲಿರುವ ಮಕ್ಕಳು ಹೊರಗಡೆ ಹೋದಾಗ ಏನಾಗುತ್ತದೋ ಎನ್ನುವ ಭಯ ಮಕ್ಕಳ ಹೆತ್ತವರನ್ನು ಕಾಡುತ್ತಲಿದೆ.

ಆಲೆಟ್ಟಿ, ಕರ್ಲಪ್ಪಾಡಿ ಭಾಗದಲ್ಲಿ ಚಿರತೆ ದಾಳಿ ನಿರಂತರವಾಗಿದೆ. ಅರಣ್ಯಾಧಿಕಾರಿಗಳು ಶೀಘ್ರವಾಗಿ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರಾದ ಮಿಥುನ್‌ ಕರ್ಲಪ್ಪಾಡಿ ಅವರು ಆಗ್ರಹಿಸಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳುತ್ತೇವೆ
ಚಿರತೆಯ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬೋನು ಇಡಲಾಗಿದೆ. ಆದರೆ ಚಿರತೆ ಓಡಾಡುವ ಕುರುಹು ನಮಗೆ ಎಲ್ಲಿಯೂ ಪತ್ತೆಯಾಗುತ್ತಿಲ್ಲ. ಸ್ಥಳೀಯರ ಮಾಹಿತಿ ಪ್ರಕಾರ ಬೋನುಗಳನ್ನು ಇಡಲಾಗುತ್ತಿದೆ. ಚಿರತೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
 – ಮಂಜುನಾಥ್‌,
ವಲಯ ಅರಣ್ಯಾಧಿಕಾರಿ

Advertisement

 ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next