ಗಂಗಾವತಿ (ಕೊಪ್ಪಳ): ಚಿರತೆಯೊಂದು ಯುವಕನ ಮೇಲೆ ದಾಳಿ ನಡಸಿ ಹೊತ್ತೊಯ್ದು ಯುವಕನ ತೊಡೆ ಮತ್ತು ಕುತ್ತಿಗೆಯ ಭಾಗವನ್ನು ತಿಂದು ಹಾಕಿದ ಘಟನೆ ತಾಲೂಕಿನ ಆನೆಗೊಂದಿ ಮೇಗೋಟ ವಾಲೀಕಿಲ್ಲಾ ಆದಿಶಕ್ತಿ ದೇಗುಲದ ಗೋಶಾಲೆ ಹತ್ತಿರ ಗುರುವಾರ ಬೆಳಗಿನ ಜಾವ ನಡೆದಿದೆ.
ಹುಲುಗೇಶ ದೊಡ್ಡೀರಪ್ಪ (23) ಎಂಬ ಯುವಕ ಚಿರತೆಯ ದಾಳಿಗೆ ಬಲಿಯಾಗಿದ್ದು ಆದಿಶಕ್ತಿ ದೇಗುಲದಲ್ಲಿ ಅಡುಗೆ ಮಾಡುವ ಕೆಲಸ ಮತ್ತು ಗೋಶಾಲೆಯಲ್ಲಿ ದನ ಕರುಗಳನ್ನು ನೋಡಿಕೊಳ್ಳುತ್ತಿದ್ದ. ರಾತ್ರಿ ವೇಳೆ ಗೋಶಾಲೆ ಹತ್ತಿರ ಮಲಗಿದ್ದ ವೇಳೆ ಚಿರತೆ ದಾಳಿ ಮಾಡಿ ಹತ್ತಿರದ ಗುಹೆಗೆ ಹೊತ್ತೊಯ್ದಿದ್ದು ಯುವಕ ಬಲಗಾಲಿ ತೊಡೆ ಭಾಗ ಮತ್ತು ಕುತ್ತಿಗೆಯನ್ನು ತಿಂದು ಹಾಕಿದೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಪಿಎಸ್ಐ ಜೆ.ದೊಡ್ಡಪ್ಪ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಒಂದು ತಿಂಗಳ ಅವಧಿಯಲ್ಲಿ ಜಂಗ್ಲಿ ರಂಗಾಪೂರ ಗ್ರಾಮದ ಮಹಿಳೆ, ಹೈದರಾಬಾದಿನ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿತ್ತು. ಈ ಭಾಗದಲ್ಲಿ ಪದೇ ಪದೇ ಚಿರತೆ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು ಬೇರೆಡೆಯಿಂದ ಇಲ್ಲಿಗೆ ಕರೆತಂದು ಬಿಟ್ಟಿರಬಹುದೆಂದು ಸ್ಥಳೀಯರು ಅನುಮಾನ ಪಡುತ್ತಿದ್ದಾರೆ.
ಅಗಳಕೇರಾ, ಹರ್ಲಾಪೂರ, ಹಿಟ್ನಾಳ ಮತ್ತು ಏಳುಗುಡ್ಡ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗಾಗಿ ಡೈನಾಮೆಟ್ ಸ್ಪೋಟಕ್ಕೆ ಹೆದರಿ ಪ್ರಾಣಿಗಳು ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಪ್ರದೇಶಕ್ಕೆ ವಲಸೆ ಬಂದಿರಬಹುದೆಂದೂ ಜನರು ಹೇಳುತ್ತಿದ್ದಾರೆ.