ದೇವಲಾಪುರದ ಪಂಪಾಪತಿ ಎಂಬುವರ ಪುತ್ರಿ ಜಯಸುಧಾ (12) ಚಿರತೆಗೆ ಬಲಿಯಾದ ಬಾಲಕಿ. ಪೋಷಕರೊಂದಿಗೆ ಹೊಲದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಜಯಸುಧಾ ಮಂಗಳವಾರ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇರುವುದರಿಂದ ಬೆಳಗ್ಗೆ ಪೋಷಕರೊಂದಿಗೆ ಹತ್ತಿ ಹೊಲಕ್ಕೆ ಹೋಗಿದ್ದಳು. ಈ ವೇಳೆ ಹತ್ತಿ ಹೊಲದಲ್ಲಿ ಹೊಂಚು ಹಾಕಿ ಕುಳಿತಿದ್ದ ಚಿರತೆ ಬಾಲಕಿ ಮೇಲೆರಗಿ ಎಳೆದೊಯ್ದಿದೆ. ಬಾಲಕಿ ಚೀರಾಟ ಕಂಡು ಸ್ಥಳದಲ್ಲಿದ್ದ ತಂದೆ-ತಾಯಿ ಹಾಗೂ ಅಕ್ಕಪಕ್ಕದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದವರು ಚಿರತೆಯನ್ನು ಬೆನ್ನಟ್ಟಿದ್ದಾರೆ.
Advertisement
ಜನರನ್ನು ಕಂಡ ಚಿರತೆ ಬಾಲಕಿಯ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿ ಬಳಿಕ ಅಲ್ಲಿಯೇ ಬಿಟ್ಟು ಓಡಿ ಹೋಗಿದೆ. ತಂದೆ ಪಂಪಾಪತಿ ಹಾಗೂ ಗ್ರಾಪಂ ಸದಸ್ಯ ರಾಮನಗೌಡ ಬಾಲಕಿಯನ್ನು ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದರಾದರೂ ಮಾರ್ಗಮಧ್ಯೆ ಬಾಲಕಿ ಅಸುನೀಗಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಡಾ| ಪಿ.ರಮೇಶ್ ಹಾಗೂ ಮಾಜಿ ಶಾಸಕ ಟಿ.ಎಚ್.ಸುರೇಶಬಾಬು ಅವರು ಮೃತ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶಾಸಕ ಜೆ.ಎನ್.ಗಣೇಶ್ ಅರಣ್ಯ ಇಲಾಖೆ ಪರವಾಗಿ ಮೃತ ಬಾಲಕಿ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಚೆಕ್ ಹಸ್ತಾಂತರಿಸಿದರು. ಗ್ರಾಮಸ್ಥರ ಪ್ರತಿಭಟನೆ
ಬಾಲಕಿ ದೇಹವನ್ನು ದೇವಲಾಪುರಕ್ಕೆ ತಂದ ಪೋಷಕರು, ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಪ್ರತಿಭಟಿಸಿದರು. ಚಿರತೆಗಳು ದಾಳಿ ನಡೆಸುವುದರಿಂದ ಜಮೀನುಗಳಿಗೆ ತೆರಳಲು ಭಯ ಎದುರಿಸುವಂತಾಗಿದೆ. ಅರಣ್ಯ ಇಲಾಖೆ
ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವವರೆಗೂ ಮೃತ ಬಾಲಕಿ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದರು.