ಬೆಂಗಳೂರು: ಬೊಮ್ಮನಹಳ್ಳಿ ಸಿಂಗ ಸಂದ್ರಲ್ಲಿರುವ ಎಸಿಅಸ್ ಲೇಔಟ್ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ವೊಂದರ ಮುಂದೆ ಚಿರತೆ ರಾಜಾರೋಷವಾಗಿ ಓಡಾಡುತ್ತಿದ್ದು, ಸಾಮಾಜಿಕ ಜಾಲತಾಣ ದಲ್ಲಿ ಭಯಾನಕ ದೃಶ್ಯ ವೈರಲ್ ಆಗಿದೆ.
ಚಿರತೆಯೊಂದು ಕೂಡ್ಲುಗೇಟ್ ಬಳಿಯ ಸಲಾರ್‌ಪುರಿಯ ಸತ್ವ ಕ್ಯಾಡೆನಾj ಅಪಾರ್ಟ್‌ಮೆಂಟ್ ಒಳಗೆ ನುಗ್ಗಿತ್ತು. ಅಪಾರ್ಟ್ ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ. ಬೊಮ್ಮನಹಳ್ಳಿ ಸಿಂಗಸಂದ್ರ, ಹೊಸಪಾಳ್ಯ, ಕೂಡ್ಲು ಸೇರಿ ಹಲವು ಭಾಗದಲ್ಲಿ ಚಿರತೆ ಓಡಾಟ ನಡೆಸಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಕೊಟ್ಟ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆಗೆ ಮುಂದಾಗಿದ್ದಾರೆ.
ಚಿರತೆ ಸೆರೆಯಾದ ವಿಡಿಯೋದಲ್ಲೇನಿದೆ ?: ಅ.28ರಂದು ಮುಂಜಾನೆ ಚಿರತೆ ಅಪಾರ್ಟ್‌ಮೆಂಟ್ ಒಳಕ್ಕೆ ಪ್ರವೇಶಿಸುತ್ತದೆ. ಆನಂತರ ಮೆಟ್ಟಿಲುಗಳನ್ನೇರಿ ಮೊದಲ ಮಹಡಿಗೆ ಹೋಗುತ್ತದೆ. ಅಲ್ಲಿದ್ದ ಲಿಫ್ಟ್ ಬಳಿ ಸುತ್ತ-ಮುತ್ತ ಓಡಾಡಿದೆ. ಮತ್ತೆ ಕೆಳಕ್ಕೆ ಇಳಿದು ಬಂದು ಅಲ್ಲಿಂದ ಏಕಾಏಕಿ ಓಡಿ ಹೋಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಡ್ರೋಣ್ ಮೂಲಕ ಚಿರತೆ ಪತ್ತೆ ಮಾಡಲು ಮುಂದಾಗಿದ್ದಾರೆ.
ಚಿರತೆ ಪತ್ತೆ ಯಾಗಿರುವ ಆಪಾರ್ಟ್‌ಮೆಂಟ್‌ಗಳ ಬಳಿ ನಾಲ್ಕೂವರೆ ಎಕರೆಯಷ್ಟು ಅರಣ್ಯ ಪ್ರದೇಶ ವಿದೆ. ಚಿರತೆ ಅಲ್ಲಿಂದಲೇ ಬಂದಿರಬಹುದು ಅಥವಾ ಅಲ್ಲೇ ಅಡಗಿರ ಬಹದು ಎಂಬ ಭೀತಿ ಎದುರಾಗಿದೆ. ಬೆಳಗಿನ ಜಾವದಲ್ಲಿ ಸಾಮಾನ್ಯ ವಾಗಿ ವಯಸ್ಕರು ವಾಯು ವಿಹಾರಕ್ಕೆ ಹೊರ ಹೋಗುತ್ತಾರೆ. ಗೃಹಿಣಿಯರು ಹಾಲು, ದಿನಸಿ ವಸ್ತು ಖರೀದಿಗೆ ಇಲ್ಲಿ ಓಡಾಡುತ್ತಾರೆ. ಇದೀಗ ಬೊಮ್ಮನಹಳ್ಳಿ, ಎಚ್‌ಎಸ್‌ಆರ್, ಬಿಟಿಎಮ್ ಲೇಔಟ್ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.