ಐಜ್ವಾಲ್: ಮಯಾನ್ಮಾರ್ ಮಿಲಿಟರಿ ವಿಮಾನವೊಂದು ಮಿಜೋರಾಂನ ಲೆಂಗ್ ಪುಯಿ ವಿಮಾನ ನಿಲ್ದಾಣದ ರನ್ ವೇಯಲ್ಲಿ ಜಾರಿದ ಘಟನೆ ಮಂಗಳವಾರ ನಡೆದಿದೆ. ಲೆಂಗ್ ಪುಯಿಯಲ್ಲಿನ ಟೇಬಲ್ ಟಾಪ್ ರನ್ ವೇಯು ಸವಾಲಿನ ಸ್ವಭಾವಕ್ಕೆ ಹೆಸರುವಾಸಿಯಾಗಿದೆ, ಮಯಾನ್ಮಾರ್ ವಿಮಾನವು ತನ್ನ ಲ್ಯಾಂಡಿಂಗ್ ಸಮಯದಲ್ಲಿ ರನ್ ವೇಯಿಂದ ಸ್ಕಿಡ್ ಆಗಿದೆ ಎಂದು ವರದಿಯಾಗಿದೆ.
ತಮ್ಮ ದೇಶದಲ್ಲಿನ ಬಂಡುಕೋರ ಗುಂಪುಗಳೊಂದಿಗೆ ತೀವ್ರವಾದ ಘರ್ಷಣೆಯ ನಂತರ ಈಶಾನ್ಯ ರಾಜ್ಯದಲ್ಲಿ ಆಶ್ರಯ ಪಡೆದಿದ್ದ ಮಯಾನ್ಮಾರ್ ಸೇನಾ ಸಿಬ್ಬಂದಿಯನ್ನು ಏರ್ ಲಿಫ್ಟ್ ಮಾಡುವ ಕಾರ್ಯಾಚರಣೆಯ ಸಮಯದಲ್ಲಿ ಈ ಘಟನೆ ನಡೆದಿದೆ.
ಸೋಮವಾರ 184 ಮಯಾನ್ಮಾರ್ ಯೋಧರನ್ನು ಭಾರತವು ಕಳುಹಿಸಿಕೊಟ್ಟಿದೆ. ಕಳೆದ ವಾರದಲ್ಲಿ ಒಟ್ಟು 276 ಮಯಾನ್ಮಾರ್ ಯೋಧರು ಮಿಜೋರಾಂ ಪ್ರವೇಶಿಸಿದ್ದರು, ಅವರಲ್ಲಿ ಸೋಮವಾರ 184 ಮಂದಿಯನ್ನು ತವರಿಗೆ ಕಳುಹಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಖಚಿತಪಡಿಸಿದೆ.
ಸೈನಿಕರು ಜನವರಿ 17 ರಂದು ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯ ಭಾರತ-ಮ್ಯಾನ್ಮಾರ್-ಬಾಂಗ್ಲಾದೇಶ ಟ್ರೈ ಜಂಕ್ಷನ್ ನಲ್ಲಿರುವ ಬಂಡುಕ್ಬಂಗಾ ಗ್ರಾಮವನ್ನು ಪ್ರವೇಶಿಸಿದರು. ಸಹಾಯಕ್ಕಾಗಿ ಅಸ್ಸಾಂ ರೈಫಲ್ಸ್ ಅನ್ನು ಸಂಪರ್ಕಿಸಿದರು.
ಸ್ವತಂತ್ರ ರಾಖೈನ್ ರಾಜ್ಯಕ್ಕಾಗಿ ಹೋರಾಡುತ್ತಿರುವ ಮಯಾನ್ಮಾರ್ ದಂಗೆಕೋರ ಗುಂಪು ‘ಅರಾಕನ್ ಆರ್ಮಿ’ಗೆ ಸೇರಿದ ಹೋರಾಟಗಾರರು ಸೈನಿಕರ ಕ್ಯಾಂಪ್ ಗಳನ್ನು ಅತಿಕ್ರಮಿಸಿ ವಶಪಡಿಸಿಕೊಂಡ ಕಾರಣ ಅವರು ಮಿಜೋರಾಂಗೆ ಪಲಾಯನ ಮಾಡಿದ್ದರು.