ಚಂಡೀಗಢ್: ಕೈದಿಗಳ ಆಹಾರಕ್ಕಾಗಿ ಮಂಜೂರಾದ ಹಣದ ದುರುಪಯೋಗ ಹಾಗೂ ನಿಂಬೆ ಹಣ್ಣು ಖರೀದಿಸಿರುವುದಾಗಿ ದಾಖಲೆಯಲ್ಲಿ ನಕಲಿ ನಮೂದು ಸೇರಿಸಿದ ಆರೋಪದಲ್ಲಿ ಪಂಜಾಬ್ ನ ಜೈಲು ಅಧಿಕಾರಿಯನ್ನು ಅಮಾನತುಗೊಳಿಸಿರುವ ಘಟನೆ ನಡೆದಿದೆ.
ಲಿಂಬೆಹಣ್ಣು ಹಗರಣ ಬಯಲಾಗಿದ್ದು ಹೇಗೆ?
ಸುಮಾರು 50 ಕೆಜಿ ಲಿಂಬೆಹಣ್ಣುಗಳನ್ನು ಖರೀದಿಸಲಾಗಿದೆ ಎಂದು ಜೈಲಿನ ದಾಖಲೆಯಲ್ಲಿ ನಮೂದಿಸಲಾಗಿತ್ತು. ಆದರೆ ಕೈದಿಗಳು ನಮಗೆ ಏನನ್ನೂ ನೀಡಿಲ್ಲ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಕಫುರ್ತಲಾ ಮಾಡರ್ನ್ ಜೈಲಿನ ಸೂಪರಿಂಟೆಂಡೆಂಟ್ ಗುರ್ನಮ್ ಲಾಲ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ವೀರಪ್ಪನ್ ಕಾರ್ಯಾಚರಣೆ ಕಥೆ ಹೇಳುವ ಶ್ರೀನಿವಾಸ್ ಜೀಪ್
ಕಳೆದ ತಿಂಗಳು ಲಿಂಬೆಹಣ್ಣು ಕೆಜಿ ಬೆಲೆ 200 ರೂಪಾಯಿಗೆ ಏರಿಕೆಯಾದ ಸಂದರ್ಭದಲ್ಲಿ ಲಿಂಬೆ ಹಣ್ಣು ಖರೀದಿಸಿರುವುದಾಗಿ ನಕಲಿ ನಮೂದುಗಳನ್ನು ದಾಖಲೆಯಲ್ಲಿ ಸೇರಿಸಲಾಗಿತ್ತು. ತಪಾಸಣಾ ತಂಡ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮಗೆ ಪಡಿತರದಲ್ಲಿ ಲಿಂಬೆಹಣ್ಣುಗಳನ್ನು ಕೊಟ್ಟಿಲ್ಲ ಎಂದು ಕೈದಿಗಳು ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಪಂಜಾಬ್ ನ ಜೈಲು, ಗಣಿಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವ ಹರ್ಜೋತ್ ಸಿಂಗ್ ಬೈನ್ಸ್, ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. ತನಿಖೆಯಲ್ಲಿ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದು, ಜೈಲು ಅಧಿಕಾರಿ ಗುರ್ನಾಮ್ ಲಾಲ್ ನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.