Advertisement

ಶಾಸಕರಿಗೆ ಬೀಚ್‌, ಮಸಾಜ್‌, ನೀರಿನಾಟದ ಮಜಾ

12:10 AM Feb 10, 2017 | Team Udayavani |

ಚೆನ್ನೈ: ಒಂದೆಡೆ ಸಿಎಂ ಗದ್ದುಗೆಗಾಗಿ ಶಶಿಕಲಾ ಹಾಗೂ ಪನ್ನೀರ್‌ಸೆಲ್ವಂ ನಡುವೆ ಪರಸ್ಪರ ಪೈಪೋಟಿ ಆರಂಭಧಿವಾದರೆ, ಇನ್ನೊಂದೆಡೆ ಎಐಎಡಿಎಂಕೆ ಶಾಸಕರು ಕಣ್ಣಾಧಿಮುಚ್ಚಾಲೆ ಆಟ ಆಡಬೇಕಾಗಿದೆ. ಬುಧವಾರ ಇವರಿಬ್ಬರ ಜಗಳ ತಾರಕಕ್ಕೇರಿದ ಬಳಿಕ, ಬಸ್ಸು ಹತ್ತಿ ಹೊರಟಿದ್ದ 131 ಮಂದಿ ಶಾಸಕರು ಈಗೆಲ್ಲಿದ್ದಾರೆ ಗೊತ್ತಾ? ರೆಸಾರ್ಟ್‌ ವೊಂದರಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.

Advertisement

ಹೌದು, ಶಶಿಕಲಾ ಅವರು ಶಾಸಕರ ಕುದುರೆಧಿವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ನಿಟ್ಟಿನಲ್ಲಿ 131 ಮಂದಿಯನ್ನು ಬೇರೆ ಬೇರೆ ಗುಂಪುಗಳಾಗಿ ಮಾಡಿ, ಒಂದೊಂದು ರೆಸಾರ್ಟ್‌ಗೆ ಕಳುಹಿಸಿದ್ದಾರೆ. ಹೀಗೆ ಹೋಗಿರುವ ಒಂದು ಗುಂಪು ಇದೀಗ ಪತ್ತೆಯಾಗಿದೆ.  ಚೆನ್ನೈನಿಂದ 80 ಕಿ.ಮೀ. ದೂರದ ಮಹಾಬಲಿಪುರಂ ಸಮೀಪದ ಗೋಲ್ಡನ್‌ ಬೇ ರೆಸಾರ್ಟ್‌ನಲ್ಲಿ. ಇವರೆಲ್ಲ ಇಲ್ಲಿ ಬೀಚ್‌ನಲ್ಲಿ ಆಡುತ್ತಾ, ವಾಟರ್‌ ಸ್ಕೈಯಿಂಗ್‌ ಮಾಡುತ್ತಾ ಹಾಗೂ ಮಸಾಜ್‌ ಮಾಡಿಸಿಕೊಳ್ಳುತ್ತಾ ಮಜಾ ಮಾಡುತ್ತಿದ್ದಾರೆ. ಶಾಸಕರು ತಮ್ಮ ಕೈತಪ್ಪಿ ಹೋಗಬಾರದು ಎಂಬ ಉದ್ದೇಶದಿಂದ ಇವರಿಗೆ ಶಶಿಕಲಾ ಎಲ್ಲ ರೀತಿಯ ವೈಭೋಗವನ್ನು ಕಲ್ಪಿಸಿಕೊಟ್ಟಿದ್ದಾರೆ.

ಒಬ್ಬರು ಪರಾರಿ: ಇಷ್ಟೆಲ್ಲ ಮಾಡಿದರೂ, ಒಬ್ಬ ಶಾಸಕ ಈ ಲಕ್ಸುರಿ ಜೈಲಿನಿಂದ  ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ಸಲ್ಲಿ ತೆರಳುತ್ತಿರುವಾಗಲೇ ನನಗೆ “ಸ್ವಲ್ಪ ಅರ್ಜೆಂಟಿದೆ'(ಶೌಚ) ಎಂದು ಹೇಳಿ, ಕೆಳಗಿಳಿದ ಶಾಸಕ ಎಸ್ಪಿ ಷಣ್ಮುಗನಾಥನ್‌ ಅಲ್ಲಿಂದ ಕಾಲ್ಕಿತ್ತು, ಪನ್ನೀರ್‌ಸೆಲ್ವಂ ಬಳಿಗೆ ಧಾವಿಸಿದ್ದಾರೆ. ಇದೇ ವೇಳೆ, ಇನ್ನೂ 19 ಮಂದಿ ಶಾಸಕರು ರೆಸಾರ್ಟ್‌ನಿಂದ ತಪ್ಪಿಸಿಕೊಂಡಿರುವ ಬಗ್ಗೆಯೂ ಮಾಧ್ಯಮಗಳು ವರದಿ ಮಾಡಿವೆ. ಒಟ್ಟಿನಲ್ಲಿ, ಈ ಆಟದಲ್ಲಿ ಕೊನೆಗೆ ಯಾರು ಗೆಲ್ಲುತ್ತಾರೋ ಕಾದು ನೋಡಬೇಕು.

ಶಾಸಕರನ್ನು ಕೂಡಿಹಾಕಿಲ್ಲ: ಸರ್ಕಾರ‌
ಎಐಎಡಿಎಂಕೆಯ 130 ಶಾಸಕರನ್ನು ಅಕ್ರಮವಾಗಿ ಕೂಡಿಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ತ್ವರಿತ ವಿಚಾರಣೆಗೆ ಮದ್ರಾಸ್‌ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ. ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್‌ ರಾಮಸ್ವಾಮಿ, ಪಿಎಂಕೆ ನಾಯಕ ಕೆ ಬಾಲು ಈ ಅರ್ಜಿ ಸಲ್ಲಿಸಿದ್ದರು. ಶಾಸಕರನ್ನು ಯಾರೂ ಕೂಡಿಹಾಕಿಲ್ಲ. ಎಲ್ಲರೂ ಶಾಸಕರ ಭವನದಲ್ಲಿದ್ದಾರೆಂದು ಸರ್ಕಾರ ಹೇಳಿದ್ದರಿಂದ ಕೋರ್ಟ್‌ ಈ ನಿರ್ಧಾರ ಕೈಗೊಂಡಿದೆ.

ಪಿಐಎಲ್‌ ವಿಚಾರಣೆ ಅನಿಶ್ಚಿತ
ಶಶಿಕಲಾ ಅವರು ಸಿಎಂ ಆಗಿ ಪ್ರಮಾಣ ಸ್ವೀಕರಿಸುವುದಕ್ಕೆ ತಡೆ ತರುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಕುರಿತು ಅನಿಶ್ಚಿತತೆ ಮುಂದುವರಿದಿದೆ. ತುರ್ತು ವಿಚಾರಣೆ ವಿಭಾಗದಲ್ಲಿ ಈ ಕೇಸನ್ನು ಸೇರಿಸುವಂತೆ ಅರ್ಜಿದಾರರು ಕೋರಿದ್ದರಾದರೂ, ಅದಕ್ಕೆ ನ್ಯಾಯಾಲಯ ಸಮ್ಮತಿಸಿಲ್ಲ. ಪ್ರಮಾಣವಚನ ದಿನಾಂಕ ನಿಗದಿಯಾಗದ ಕಾರಣ, ಈ ಅರ್ಜಿಯ ತುರ್ತು ವಿಚಾರಣೆಯ ಅಗತ್ಯವೇನೂ ಇಲ್ಲ ಎಂದು ಸುಪ್ರೀಂ ಹೇಳಿದೆ.

Advertisement

ಮೊಬೈಲ್‌, ಟಿವಿಗೆ ಶಾಸಕರ ಬೇಡಿಕೆ
ಶಶಿಕಲಾ ನಟರಾಜನ್‌ ಬೆಂಬಲಿಗ ಶಾಸಕರು ಇರುವ ಹೊಟೇಲ್‌ ಮತ್ತು ರೆಸಾರ್ಟ್‌ಗಳಲ್ಲಿ ಬಿಡಾರ ಹೂಡಿರುವಲ್ಲಿ ಪಂಚತಾರಾ ಸೌಲಭ್ಯಗಳಿವೆ. ಆದರೆ ಮೊಬೈಲ್‌ ಮತ್ತು ಟಿವಿ ಸೌಲಭ್ಯ ಕಡಿತಗೊಳಿಸಲಾಗಿದೆ. ರೆಸಾರ್ಟ್‌ ಒಂದರಲ್ಲಿ ಈ ಎರಡೂ ಸೌಲಭ್ಯಗಳು ನೀಡದ ಹೊರತಾಗಿ ಆಹಾರ ಸೇವಿಸುವುದಿಲ್ಲವೆಂದು ಶಾಸಕರು ಹಠ ಹಿಡಿದರೆಂದು ವರದಿಯಾಗಿದೆ. ಇತರ 30 ಮಂದಿ ಶಾಸಕರನ್ನು ಕಲಪ್ಪಾಕಂ ಸಮೀಪದ ರೆಸಾರ್ಟ್‌ ಒಂದರಲ್ಲಿ ಇರಿಸಲಾಗಿದೆ.

ಹೊಸ ಪಕ್ಷ ಆರಂಭಿಸುವ ಯೋಚನೆ ಇಲ್ಲ
ಹೊಸ ಪಕ್ಷ ಆರಂಭಿಸುವ ಇರಾದೆ ಇಲ್ಲವೆಂದು ಹಂಗಾಮಿ ಸಿಎಂ ಪನೀರ್‌ಸೆಲ್ವಂ ಹೇಳಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು ತಾವು ಎಐಎಡಿಎಂಕೆಯ ಸಾಮಾನ್ಯ ಕಾರ್ಯಕರ್ತ. ಕೊನೆವರೆಗೆ ಹಾಗೆಯೇ ಮುಂದುವರಿಯುತ್ತೇನೆ. ಪಕ್ಷಕ್ಕಾಗಿ ಅಮ್ಮಾ ದುಡಿದಿದ್ದಾರೆ. ಅವರಿಗೆ ಅವಮಾನವಾಗುವಂತೆ ನಡೆಕೊಳ್ಳುವುದಿಲ್ಲ ಎಂದಿದ್ದಾರೆ.  ಜಯಾ ಅವರು ವಿಲ್‌ ಬರೆದಿಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ  ಆ ಬಗ್ಗೆ ಮಾಹಿತಿ ಕಲೆ ಹಾಕಿಲ್ಲ. ಅವರು ಹೇಳಿದ್ದನ್ನು ಮಾತ್ರ ಮಾಡುತ್ತಿದ್ದೇನೆ ಎಂದು ಪನ್ನೀರ್‌ ಸೆಲ್ವಂ ಹೇಳಿದ್ದಾರೆ. 

ರಾಜಕೀಯಕ್ಕೆ ಬರಲ್ಲ; ಶಶಿಕಲಾ  ಪತ್ರ ಪ್ರದರ್ಶಿಸಿದ ಸೆಲ್ವಂ
ನಾನು ರಾಜಕೀಯಕ್ಕೆ ಎಂಟ್ರಿ ಆಗಲ್ಲ ಎಂದು ಸ್ವತಃ ಶಶಿಕಲಾ ಅವರೇ ಹೇಳಿದ್ದ ಮಾತು ಇದೀಗ ಅವರಿಗೆ ಉಲ್ಟಾ ಹೊಡೆದಿದೆ. 2011ರಲ್ಲಿ  ಪಕ್ಷದಿಂದ ಉಚ್ಚಾಟನೆಗೊಂಡು ನಂತರ ಪಕ್ಷಕ್ಕೆ ಮರಳುವ ವೇಳೆ  ಶಶಿಕಲಾ ಜಯಲಲಿತಾಗೆ ಬರೆದಿದ್ದ ಪತ್ರವನ್ನು ಪನ್ನೀರ್‌ಸೆಲ್ವಂ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಶಶಿಕಲಾ ಅವರು, “ನಾನು ರಾಜಕೀಯಕ್ಕೆ ಬರುವುದಿಲ್ಲ. ನನಗೆ ಯಾವ ಹುದ್ದೆಯೂ ಬೇಡ. ಯಾರ ಮೇಲೂ ಪ್ರಭಾವ ಬೆಳೆಸುವುದಿಲ್ಲ,’ ಎಂದಿದ್ದರು. ಅದನ್ನು ತೋರಿಸಿರುವ ಪನ್ನೀರ್‌ಸೆಲ್ವಂ, “ಅಮ್ಮನಿಗೆ ಮೋಸ ಮಾಡಿದ್ದು ಯಾರು ಎಂದು ಈಗ ಹೇಳಿ,’ ಎಂದಿದ್ದಾರೆ.

ಪೋಯೆಸ್‌ ಗಾರ್ಡನ್‌ ಇನ್ನು ಜಯಾ ಸ್ಮಾರಕ
ಬುಧವಾರದಷ್ಟೇ ಜಯಾ ಸಾವಿನ ಬಗ್ಗೆ ತನಿಖೆಗೆ ಆದೇಶಿಸಿ ಶಶಿಕಲಾಗೆ ಬಿಸಿ ಮುಟ್ಟಿಸಿದ್ದ ಪನ್ನೀರ್‌ಸೆಲ್ವಂ ಇದೀಗ ಅವರಿಗೆ ಮತ್ತೂಂದು ಟಾಂಗ್‌ ನೀಡಿದ್ದಾರೆ. ಜಯಲಲಿತಾ ಅವರ ಪೋಯೆಸ್‌ ಗಾರ್ಡನ್‌ ನಿವಾಸವನ್ನು ಸ್ಮಾರಕವಾಗಿ ಬದಲಾಯಿಸುವುದಾಗಿ ಪನ್ನೀರ್‌ಸೆಲ್ವಂ ಗುರುವಾರ ಘೋಷಿಸಿದ್ದಾರೆ. ಈಗ ಶಶಿಕಲಾ ಅವರು ಪೋಯೆಸ್‌ ಗಾರ್ಡನ್‌ನಲ್ಲೇ ನೆಲೆಸಿರುವ ಕಾರಣ, ಸೆಲ್ವಂರ ಈ ನಡೆ ಕುತೂಹಲ ಮೂಡಿಸಿದೆ. ಏಕೆಂದರೆ, ನಿವಾಸವು ಸ್ಮಾರಕವಾದರೆ, ಶಶಿಕಲಾ ಆ ಮನೆಯನ್ನು ತ್ಯಜಿಸಲೇಬೇಕಾಗುತ್ತದೆ.

ಸೆಲ್ವಂಗೆ ಆನೆ ಬಲ:  ಮಹತ್ವದ ಬೆಳವಣಿಗೆಯಲ್ಲಿ, ಪಕ್ಷದ ಪ್ರಮುಖ ನಾಯಕ ಇ ಮದುಸೂಧನ್‌ ಅವರು ಪನ್ನೀರ್‌ಸೆಲ್ವಂ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದ ಸೆಲ್ವಂರಿಗೆ ಆನೆಬಲ ಬಂದಂತಾಗಿದೆ. ಇದೇ ವೇಳೆ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಪುದುಚೇರಿಯ ನಾಯಕ ಓಂ ಶಕ್ತಿ ಸೇಗಾರ್‌ರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಶಶಿಕಲಾ ವಜಾ ಮಾಡಿದ್ದಾರೆ. ಸೇಗಾರ್‌ ಅವರು ಪನ್ನೀರ್‌ಸೆಲ್ವಂಗೆ ಬೆಂಬಲ ಸೂಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮತ್ತೂಂದೆಡೆ, ಲಕ್ಷ್ಮ ಡಿಎಂಕೆ ಮುಖ್ಯಸ್ಥ, ನಟ-ನಿರ್ದೇಶಕ ಟಿ ರಾಜೇಂದರ್‌ ಅವರೂ ಶಶಿಕಲಾ ಸಿಎಂ ಆಗುವುದನ್ನು ವಿರೋಧಿಸಿದ್ದಾರೆ. ಜನರು ಆಯ್ಕೆ ಮಾಡಿದ್ದು ಜಯಾರನ್ನು ಹೊರತು ಶಶಿಕಲಾರನ್ನಲ್ಲ ಎಂದಿದ್ದಾರೆ.

ದಕ್ಷಿಣ ಭಾರತದ ರೆಸಾರ್ಟ್‌ ಪುರಾಣ
 1984   ಆಂಧ್ರಪ್ರದೇಶದಲ್ಲಿ ಎನ್‌ ಟಿ ರಾಮರಾವ್‌ ಮತ್ತು ಎನ್‌ ಭಾಸ್ಕರರಾವ್‌ ನಡುವೆ ತಿಕ್ಕಾಟ ಶುರುವಾದಾಗ ಶಾಸಕರನ್ನು ಮೈಸೂರಿನ ರೆಸಾರ್ಟ್‌ನಲ್ಲಿರಿಸಿದ್ದ ಎನ್‌ಟಿಆರ್‌. ಇದಕ್ಕೆ ಕರ್ನಾಟಕ ಸಿಎಂ ರಾಮಕೃಷ್ಣ ಹೆಗಡೆ ಸಾಥ್‌
 1995  ಎನ್‌ಟಿಆರ್‌ ಅಳಿಯ ಚಂದ್ರಬಾಬು ನಾಯ್ಡು ಕ್ಷಿಪ್ರಕ್ರಾಂತಿ. 200 ಶಾಸಕರನ್ನು ಹೈದರಾಬಾದ್‌ನ ಪಂಚತಾರಾ ಹೋಟೆಲ್‌ನಲ್ಲಿಟ್ಟ ನಾಯ್ಡು. ಒಳಗಿದ್ದವರು ಹೊರಬರಲಿ ಎಂದು ಹೋಟೆಲ್‌ ಗೇಟ್‌ ಹೊರಗೇ ಕಾದುನಿಂತ ಎನ್‌ಟಿಆರ್‌ ಮತ್ತು ಪತ್ನಿ ಲಕ್ಷ್ಮಿಪಾರ್ವತಿ.

 1990  ಕರ್ನಾಟಕದಲ್ಲಿ ವೀರೇಂದ್ರ ಪಾಟೀಲ್‌ ಸಿಎಂ ಆಗುತ್ತಾರೆಂದಾಗ ಕಾಂಗ್ರೆಸ್‌ ಶಾಸಕರನ್ನು ರೆಸಾರ್ಟ್‌ನಲ್ಲಿಟ್ಟ ಕೃಷಿ ಸಚಿವ ಎಸ್‌ ಬಂಗಾರಪ್ಪ 
 2002  ಬಹುಮತ ಸಾಬೀತುಪಡಿಸುವ ಮುನ್ನ ಶಾಸಕರನ್ನು ಕರ್ನಾಟಕಕ್ಕೆ ಕರೆತಂದಿದ್ದ ಮಹಾರಾಷ್ಟ್ರ ಸಿಎಂ ವಿಲಾಸ್‌ರಾವ್‌ ದೇಶ್‌ಮುಖ್‌

 2008- 09  ಬಿಎಸ್‌ವೈರನ್ನು ಸಿಎಂ ಸ್ಥಾನದಿಂದ ಕಿತ್ತುಹಾಕಲೆಂದು ಶಾಸಕರನ್ನು ಹೈದರಾಬಾದ್‌ಗೆ ಕರೆದೊಯ್ದಿದ್ದ ಬಳ್ಳಾರಿಯ ರೆಡ್ಡಿ ಬ್ರದರ್ಸ್‌
 2011  ಸದಾನಂದ ಗೌಡರನ್ನು ಸಿಎಂ ಮಾಡಲೆಂದು ಶಾಸಕರನ್ನು ಬೆಂಗಳೂರು ಹೊರವಲಯದ ರೆಸಾರ್ಟ್‌ಗೆ ಕರೆದೊಯ್ದಿದ್ದ ಬಿಎಸ್‌ವೈ. ಇದಾದ 6 ತಿಂಗಳ ಬಳಿಕ ಇದೇ ಸದಾನಂದಗೌಡರನ್ನು ಸಿಎಂ ಸ್ಥಾನದಿಂದ ಇಳಿಸಲು ಮತ್ತೆ ರೆಸಾರ್ಟ್‌ ಮೊರೆಹೋಗಿದ್ದ ಯಡಿಯೂರಪ್ಪ
 2015  ಮೇಯರ್‌ ಚುನಾವಣೆಗೆ  ಕುದುರೆ ವ್ಯಾಪಾರ ಆಗದಂತೆ ತಪ್ಪಿಸಲು ಬಿಬಿಎಂಪಿ ಸದಸ್ಯರನ್ನು ಕೇರಳದ ರೆಸಾರ್ಟ್‌ಗೆ ಕರೆದೊಯ್ದ ಸ್ವತಂತ್ರ ಕಾರ್ಪೊರೇಟರ್‌

Advertisement

Udayavani is now on Telegram. Click here to join our channel and stay updated with the latest news.

Next