Advertisement
ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಾಲುಕ್ಯ, ದ್ರಾವಿಡ ಶೈಲಿಯ ನೂರಾರು ದೇವಸ್ಥಾನಗಳು ಈಗಲೂ ಕಾಣಸಿಗುತ್ತವೆ. ಆದರೆ 12ನೇ ಶತ
Related Articles
Advertisement
ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ 5 ವರ್ಷಗಳಲ್ಲಿ 250ಕ್ಕೂ ಅಧಿಕ ಶಿಲಾ ದೇವಾಲಯಗಳು ನಿರ್ಮಾಣಗೊಳ್ಳುತ್ತಿವೆ. ಇವುಗಳ ಕೆತ್ತನೆ ಮತ್ತು ನಿರ್ಮಾಣಕ್ಕೆ ಕರಾವಳಿ ಭಾಗದ ಶಿಲಾ ದೇವಾಲಯಗಳ ನಿರ್ಮಾಣಗಾರರು ಬಂದಿದ್ದಾರೆ.
ಒಂದು ತಂಡದಲ್ಲಿ 20 ಶಿಲ್ಪಿಗಳು ಇರಲಿದ್ದು, ಯಂತ್ರಗಳನ್ನು ಬಳಸಿ ಕಲ್ಲು ಕೊರೆದು ಕಂಬ, ಕಿಟಕಿ, ಗದ್ದುಗೆ ಮತ್ತು ಒಟ್ಟಾರೆ ದೇವಸ್ಥಾನಗಳನ್ನು ಕಲಾತ್ಮಕವಾಗಿ ನಿರ್ಮಿಸುತ್ತಿದ್ದಾರೆ. ಆನೆ ಸಾಲು, ಕುದುರೆ ಸಾಲು, ಚೌಕಾಬಾರಾ ಕಮಾನುಗಳು, ಕೊರೆದ ಪುಷ್ಯ, ಗೋಮೇಧಕಗಳು, ಕೆತ್ತನೆಯ ಕಳಸ ಮತ್ತು ಸುಂದರ ಎ ಲೆ ಬಳ್ಳಿಗಳು ಸಹಿತ ಎಲ್ಲ ಬಗೆಯ ಕಲೆಗಳು ಶಿಲೆಯಲ್ಲಿ ಅರಳಿ ನಿಲ್ಲುತ್ತಿವೆ.
ರಾಜ್ಯದಲ್ಲಿ ಒಟ್ಟು 159 ಶಿಲ್ಪಿಗಳ ತಂಡಗಳು ಶಿಲಾ ದೇಗುಲ ನಿರ್ಮಿಸುತ್ತಿವೆ. ಹುಬ್ಬಳ್ಳಿ ತಾಲೂಕಿನ ಬಿಡ್ನಾಳ ವೀರಭದ್ರೇಶ್ವರ ದೇಗುಲ, ಹೆಬಸೂರು ಹೆಮರಡ್ಡಿ ಮಲ್ಲಮ್ಮ ದೇವಸ್ಥಾನ, ವಿಜಯಪುರ ಜಿಲ್ಲೆಯ ಜಮಖಂಡಿ ಕಡಪಟ್ಟಿ ಬಸವೇಶ್ವರ ದೇಗುಲ, ಬಸವನ ಬಾಗೇವಾಡಿಯಲ್ಲಿ ಮಹಾಲಕ್ಷ್ಮೀ ದೇವಸ್ಥಾನ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಬನಶಂಕರಿ ದೇವಸ್ಥಾನ, ಸುಂಕಲ ಬಿದರೆ ಬಸವೇಶ್ವರ ದೇವಸ್ಥಾನ, ಹಾನಗಲ್ ಹೊಂಕಣದ ನಂಜುಂಡೇಶ್ವರ ಮಠ ಶಿಲೆಯ ಕಲೆಯ ಬಲೆಯಾಗಿ ನಿರ್ಮಾಣವಾಗಿವೆ.
ಕೋಟಿ ಕೋಟಿ ರೂ. ಖರ್ಚು:
ನೆರೆ ಹಾವಳಿಗೆ ಬಿದ್ದ ದೇವಸ್ಥಾನದ ಗೋಡೆಗಳು, ಪುನರುತ್ಥಾನಕ್ಕೆ ಲಭಿಸದ ಅನುದಾನ, ಗ್ರಾಮಸ್ಥರೇ ಪ್ರತಿವರ್ಷ ಸುಗ್ಗಿ ಸಮಯಕ್ಕೆ ಭಕ್ತಿ ಪಟ್ಟಿ ಹಾಕಿ ಕಟ್ಟುವ ಸಂಪ್ರದಾಯ, ಒಂದೊಂದು ಗುಡಿ ಕಟ್ಟಲು ದಶಕಗಳ ಸಮಯ. ಒಟ್ಟಿನಲ್ಲಿ ಕೊನೆಗೆ ಸಿಮೆಂಟ್, ಗಾರೆ ಸೇರಿಸಿ ಕಬ್ಬಿಣದ ಗ್ರಿಲ್ ಬಳಸಿ ಸುಣ್ಣಬಣ್ಣದ ದೇವಸ್ಥಾನ ಸಿದ್ಧಗೊಳಿಸುತ್ತಿದ್ದ ಭಕ್ತ ಸಮೂಹ, ಇಂದು ಗ್ರಾಮಗಳ ಮಧ್ಯೆ ಜಿದ್ದಾಜಿದ್ದಿ ಎನ್ನುವಂತೆ ಕೋಟಿ ಕೋಟಿ ರೂ.ಗಳನ್ನು ಖರ್ಚು ಮಾಡಿ ಸುಂದರ ದೇವಸ್ಥಾನಗಳನ್ನು ನಿರ್ಮಿಸುತ್ತಿದೆ.
ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕಾವಲವಾಡದಲ್ಲಿ ಸೋಮೇಶ್ವರ ಐತಿಹಾಸಿಕ ದೇವಸ್ಥಾನವನ್ನು 3 ಕೋಟಿ ರೂ.ಗಳ ವೆಚ್ಚದಲ್ಲಿ ಸುಂದರ ಶಿಲಾ ದೇವಾಲಯವನ್ನಾಗಿ ರೂಪಿಸಲಾಗುತ್ತಿದೆ. ಕಾಮಗಾರಿ ಶೇ.70ರಷ್ಟು ಮುಗಿದಿದೆ. ಹೆಬ್ಬಳ್ಳಿಯ ಮೂಗ ಬಸವೇಶ್ವರ ದೇವಸ್ಥಾನ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.
ಉಕ್ಕಡಗಾತ್ರಿ ಕಲ್ಲಿನ ಗೋಪುರ ರಾಜ್ಯದಲ್ಲೇ ದೊಡ್ಡದು :
ಈಗ ಇದೆಲ್ಲದಕ್ಕೂ ಕಳಶ ಪ್ರಾಯವಾಗಿ ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನ 75 ಅಡಿ ರಾಜಗೋಪುರ ನಿರ್ಮಾಣವಾಗುತ್ತಿದ್ದು, ಇದು ರಾಜ್ಯದಲ್ಲೇ ಅತೀ ದೊಡ್ಡ ಕಲ್ಲಿನ ಗೋಪುರ ಎಂಬ ಹೆಗ್ಗಳಿಕೆ ಪಡೆಯಲಿದೆ.
ಸರಕಾರದ ಅನುದಾನ ಬಲ :
2018ಕ್ಕೂ ಮೊದಲು ಅನೇಕ ದೇವಾಲಯಗಳಿಗೆ ಹಣಕಾಸು ನೆರವು ಸಿಕ್ಕಿತ್ತಾದರೂ 2019ರಿಂದ 2023ರ ಅವಧಿಯಲ್ಲಿ ಮಾತ್ರ ಈ ಪ್ರಮಾಣ 4 ಪಟ್ಟು ಅಧಿಕವಾಗಿದೆ. ಸರಕಾರ ಈಗ ಉತ್ತರ ಕರ್ನಾಟಕಕ್ಕೆ ಮತ್ತೆ 22.32 ಕೋಟಿ ರೂ.ಗಳ ಅನುದಾನವನ್ನು ಮಠ ಮಾನ್ಯಗಳ ಅಭಿವೃದ್ಧಿಗೆ ನೀಡಿದೆ. ಸರಕಾರದ ಈ ನಡೆ ಉತ್ತಮ ದೇವಸ್ಥಾನಗಳನ್ನು ನಿರ್ಮಿಸಿಕೊಳ್ಳುವ ಭಕ್ತ ಸಮೂಹಕ್ಕೆ ಆನೆ ಬಲ ನೀಡಿದೆ.
ಮೊದಲು ನಾವು ಗಾರೆ, ಸಿಮೆಂಟ್ ಬಳಸಿಯೇ ದೇವಸ್ಥಾನ ಕಟ್ಟುತ್ತಿದ್ದೆವು. ಇತ್ತೀಚೆಗಿನ ವರ್ಷಗಳಲ್ಲಿ ಗ್ರಾಮಸ್ಥರು ಶಿಲಾ ದೇಗುಲ ನಿರ್ಮಿಸಿ ಕೊಡಲು ಹೇಳುತ್ತಿದ್ದಾರೆ. ನಾವೇ ಉತ್ತರ ಕರ್ನಾಟಕದಲ್ಲಿ 45ಕ್ಕೂ ಅಧಿಕ ಶಿಲಾ ದೇವಸ್ಥಾನ ನಿರ್ಮಿಸಿ ಕೊಟ್ಟಿದ್ದೇವೆ. ಇನ್ನೂ ಬೇಡಿಕೆ ಬರುತ್ತಲೇ ಇದೆ. – ಜಯಂತ, ಶಿಲಾ ದೇಗುಲ ಶಿಲ್ಪಿ, ಮುರುಡೇಶ್ವರ ನಿವಾಸಿ
-ಬಸವರಾಜ ಹೊಂಗಲ್