ಉಡುಪಿ: ವಿಧಾನ ಪರಿಷತ್ತಿಗೆ ವಿಕಲಚೇತನ ಪ್ರತಿನಿಧಿಯನ್ನು ನೇಮಿಸಬೇಕು ಹಾಗೂ ಸರ್ಕಾರಿ ವಿಕಲಚೇತನ ನೌಕರರಿಗೆ ಸುಪ್ರೀಂಕೋರ್ಟಿನ ಆದೇಶದಂತೆ ಶೇ. 3ರಷ್ಟು ಬಡ್ತಿ ಮಿಸಲಾತಿ ಆದೇಶವನ್ನು ಶೀಘ್ರ ಜಾರಿಗೊಳಿಸುವಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯಿಸಿದ್ದಾರೆ.
ಅವರು ಉಡುಪಿಯ ಸರಕಾರಿ ನೌಕರರ ಭವನದಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ವಿಕಲಚೇತನ ನೌಕರರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟಿನ ಆದೇಶದಂತೆ ಸರ್ಕಾರಿ ಅಂಗವಿಕಲ ನೌಕರರಿಗೆ ಬಡ್ತಿಯಲ್ಲಿ ಶೇ. 3ರಷ್ಟು ಮಿಸಲಾತಿಯನ್ನು ಶೀಘ್ರ ಜಾರಿಗೊಳಿಸಬೇಕು. ಇಲ್ಲದಿದ್ದರೆ ಸಂಘದ ಸದಸ್ಯರೆಲ್ಲ ಎ. 1ರಂದು ರಾಜ್ಯದಾದ್ಯಂತ ಕಪ್ಪು$ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುವುದರ ಜತೆಗೆ ಪ್ರತೀ ತಾಲೂಕಿನಲ್ಲಿ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಡ ಹಾಕಲಾಗುವುದು. ನಕಲಿ ವಿಕಲಚೇತನರನ್ನು ಪತ್ತೆ ಹಚ್ಚಲು ಒಂದು ಸಮಿತಿ ನೇಮಕ ಮಾಡಬೇಕು. ಅಂತಹ ಪ್ರಮಾಣ ಪತ್ರವನ್ನು ಪಡೆದವರ ಮೇಲೆ ಹಾಗೂ ನಕಲಿ ಪ್ರಮಾಣ ಪತ್ರ ನೀಡಿದ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ಜಿಲ್ಲಾ ಸಂಘದ ನಿರ್ದೇಶಕ ಪ್ರಶಾಂತ ಶೆಟ್ಟಿ, ನಾಗೇಶ, ಎಚ್. ರಾಮಾಂಜಯ್ನಾ, ಗುಣವತಿ, ಗೋಪಾಲ ಮೊಗೇರ, ಉದಯಕುಮಾರ ಶೆಟ್ಟಿ, ಅನಿತಾ ಉಪಸ್ಥಿತರಿದ್ದರು.