Advertisement
ವಿಷಯ ಮಂಡಿಸಿದ ಸಿ.ಟಿ. ರವಿ, ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಮಾತೆತ್ತಿದರೆ ನಾವು ದಮನಿತರ ಪರ, ಪ್ರಾಮಾಣಿಕ ಮತ್ತು ಪಾರದರ್ಶಕ ಸರಕಾರ ಎಂದು ಹೇಳುತ್ತೀರಿ. ಪಾರದರ್ಶಕ ಎಂದರೆ ಇದುವೆಯಾ? ಅಹಿಂದ ಎನ್ನುವವರು ಈಗ ದಲಿತರ ಹಣ ಲೂಟಿ ಮಾಡಿದ್ದಾರೆ. “ಹೈದ್ರಾಬಾದ್ ಗ್ಯಾಂಗ್’ ಜತೆ ಸೇರಿ ಯೋಜಿತ ಸಂಚು ನಡೆಸಿದ್ದಾರೆ. ಇದು ಹಗಲು ದರೋಡೆಯಾಗಿದ್ದು, ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳಿಗೆ ಗೊತ್ತಿರಲಿಲ್ಲವೇ? ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಿಮಗದ ಅಧಿಕಾರಿ ಚಂದ್ರಶೇಖರ್ ಅವರ ಡೆತ್‌ನೋಟ್ ಅಂಶಗಳನ್ನು, ಶಾಂಗ್ರಿಲಾ ಹೊಟೇಲ್‌ನಲ್ಲಿ ನಡೆದಿದೆ ಎನ್ನಲಾದ ಅಧಿಕಾರಿಗಳ ಸಂಭಾಷಣೆಗಳನ್ನು, ಬ್ಯಾಂಕ್ ಖಾತೆಗಳಲ್ಲಿ ನಡೆದ ಅವ್ಯವಹಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಪರಿಶಿಷ್ಟ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕಿದ್ದ 94 ಕೋಟಿ ರೂ. ಬೇನಾಮಿ ಖಾತೆಗಳಿಗೆ ವರ್ಗಾವಣೆಯಾಗಿದೆ. ಒಂದು ವೇಳೆ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಈ ಸರಕಾರದಲ್ಲಿ ಭ್ರಷ್ಟರಿಗೆ ರಾಜಯೋಗ, ಪ್ರಾಮಾಣಿಕರಿಗೆ “ಆತ್ಮಹತ್ಯೆಗೆ ಭಾಗ್ಯ’ ಎಂದು ಕುಟುಕಿದರು. ಯಾರಧ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಯಾರಧ್ದೋ ದುಡ್ಡು ಎಂದರೆ ಬೇನಾಮಿ ಹಣ ಅಲ್ಲ, ಸರಕಾರದ ಹಣ. ಗೂಗಲ್ ಪೇ, ಫೋನ್ ಪೇ ಸೇರಿ ಬೇರೆ ಬೇರೆ ಮೂಲಗಳಲ್ಲಿ ಮನಸ್ಸಿಗೆ ಬಂದಂತೆ ವರ್ಗಾವಣೆ ಮಾಡಲಾಗಿದೆ. ತೆಲಂಗಾಣ ವಿಧಾನಸಭೆ ಚುನಾವಣೆ, ರಾಜ್ಯದಲ್ಲಿ ನಡೆದ ಲೋಕಸಭೆ ಚುನಾವಣೆಗೆ, ಆಸ್ತಿ, ಚಿನ್ನ, ಲ್ಯಾಂಬರ್ಗಿನಿ ಕಾರು, ಜಮೀನು ಖರೀದಿಗೆ ಬಳಸಲಾಗಿದೆ ಎಂದು ಟೀಕಿಸಿದರು. ಹಣಕಾಸು ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದರ ಹಿಂದಿರುವ ಕಸ್ಟೋಡಿಯನ್ ಯಾರು? ಹೈದ್ರಾಬಾದ್ ಗ್ಯಾಂಗ್‌ಗೆ ಸಹಕರಿಸಿದ್ದು ಯಾರು ಎಂಬುದನ್ನು ಸರಕಾರ ಹೇಳಬೇಕಿದೆ ಎಂದರು.
Related Articles
Advertisement
ಕೂಡಲೇ ಕಾಂಗ್ರೆಸ್ ಶಾಸಕರು ಎದ್ದು ನಿಂತು ಮಾಜಿ ಸಚಿವ ಶ್ರೀರಾಮಲು ಮತ್ತು ಆನಂದ್ ಸಿಂಗ್ ಜತೆ ನೆಕ್ಕುಂಟಿ ನಾಗರಾಜ್ ಇರುವ ಮತ್ತು ಬಿಜೆಪಿ ಶಾಲು ಹಾಕಿರುವ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಿ ಇದಕ್ಕೇನು ಹೇಳುತ್ತೀರಿ ಎಂದು ಗದ್ದಲ ಎಬ್ಬಿಸಿದರು. ಬಿಜೆಪಿ ಸದಸ್ಯರು ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ಇಡೀ ಸದನ ಗದ್ದಲದ ಗೂಡಾಯಿತು. ತಹಬದಿಗೆ ತರುವಲ್ಲಿ ವಿಫಲರಾದ ಸಭಾಪತಿಗಳು ಗುರುವಾರಕ್ಕೆ ಸದನವನ್ನು ಮುಂದೂಡಿದರು.
“ವೆಂಕಟೇಶಣ್ಣ ನನ್ನ, ನಿನ್ನ ಜಾತಕ ಸರಿಹೊಂದುತ್ತಿಲ್ಲ’: ಸಿ.ಟಿ.ರವಿವೆಂಕಟೇಶ್ ಅಣ್ಣ, ನನ್ನ-ನಿನ್ನ ಜಾತಕ ಸರಿ ಹೊಂದುವುದಿಲ್ಲ. ಹಾಗಾಗಿ ನಾನು ಈಲ್ಡ್ ಆಗುವುದಿಲ್ಲ (ಮಾತು ನಿಲ್ಲಿಸುವುದಿಲ್ಲ) ಎಂದು ಹೇಳಿ ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಸದನವನ್ನು ನಗೆಗಡಲಲ್ಲಿ ತೇಲಿಸಿದ ಪ್ರಸಂಗ ನಡೆ ಯಿತು. ವಾಲ್ಮೀಕಿ ನಿಗಮದಲ್ಲಿ ನಡೆದ ಹಣ ದುರುಪಯೋಗದ ಬಗ್ಗೆ ಸಿ.ಟಿ. ರವಿ ಮಾತನಾಡುತ್ತಿರುವ ವೇಳೆ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಪದೇಪದೆ ಮಧ್ಯಪ್ರವೇಶಿಸುವ ಪ್ರಯತ್ನ ಮಾಡಿದರು. ಆಗ ರವಿ ಮೇಲಿನಂತೆ ಪ್ರತಿಕ್ರಿಯಿಸಿ ಮಾತು ಮುಂದುವರಿಸಿದರು. ಸಭಾಪತಿಗಳ ಪೀಠದಲ್ಲಿದ್ದ ಉಪಸಭಾತಿ ಪ್ರಾಣೇಶ್, ರೀ… ವೆಂಕಟೇಶ್ ನೀವು ಪದೇಪದೆ ಮಾತನಾಡಿ ಕಲಾಪಕ್ಕೆ ಅಡ್ಡಿ ತರಬೇಡಿ ಎಂದರು.