ಬೆಂಗಳೂರು: ಡ್ರಗ್ಸ್ ಹಾವಳಿ ವಿರುದ್ಧ ನಮ್ಮ ಸರಕಾರ ಸಮರ ಸಾರಿದ್ದು, ಯಾವುದೇ ಕಾರಣಕ್ಕೂ ರಾಜ್ಯವನ್ನು “ಉಡ್ತಾ ಪಂಜಾಬ್’ನಂತೆ “ಉಡ್ತಾ ಕರ್ನಾಟಕ’ ಆಗಲು ಬಿಡುವುದಿಲ್ಲ. ಇದರ ವಿರುದ್ಧ ನಮ್ಮ ಸರಕಾರ ಯುದ್ಧ ಸಾರಿದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಪುನರುಚ್ಚರಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಡಾ.ಧನಂಜಯ ಸರ್ಜಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸುಮಾರು 150 ಕೋಟಿ ರೂ. ಮೌಲ್ಯದ 10 ಟನ್ ಡ್ರಗ್ಸ್‌ಗೆ ಹಾಗೂ 250 ಕೆಜಿಯಷ್ಟು ಸಿಂಥೆಟಿಕ್ ಡ್ರಗ್ಸ್ ಅನ್ನು ಸುಟ್ಟು ಹಾಕಲಾಗಿದೆ. ವಿದೇಶದಿಂದ ವಿದ್ಯಾರ್ಥಿ ವೀಸಾದ ಮೇಲೆ ಬಂದವರು ದಂಧೆಗೆ ಇಳಿಯುತ್ತಿದ್ದು, ಅಂಥ 150 ಮಂದಿಯನ್ನು ಬಂಧಿಸಿ ವಾಪಸ್ ಕಳುಹಿಸಲಾಗಿದೆ.
ಸಿಐಡಿ ಮಾದಕದ್ರವ್ಯ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಎಡಿಜಿಪಿ ಮತ್ತು ಐಜಿಪಿ ಹುದ್ದೆಯನ್ನು ಸೃಜಿಸಲಾಗಿದೆ. ರಾಜ್ಯದಲ್ಲಿ 43 ಸೆನ್ ಸ್ಥಾಪಿಸಲಾಗಿದೆ. ಪ್ರಸಕ್ತ ವರ್ಷ ಜುಲೈ 10ರ ವರೆಗೆ 1,791 ಪ್ರಕರಣಗಳಲ್ಲಿ 1,179 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
182 ಕೋ.ರೂ. ಆನ್‌ಲೈನ್ ವಂಚನೆ
ಬೆಂಗಳೂರು: ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆನ್‌ಲೈನ್ ಮೂಲಕ ವಂಚನೆ ಕುರಿತಾದ ಕಾಂಗ್ರೆಸ್‌ನ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಅವರು, ಆನ್‌ಲೈನ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಮತ್ತು ನಕಲಿ ಲೋನ್ ಆ್ಯಪ್‌ಗ್ಳ ಮೂಲಕ ಈ ವರ್ಷ ಇಲ್ಲಿವರೆಗೆ ವಂಚಿಸಿದ ಮೊತ್ತದ ಪ್ರಮಾಣ 182 ಕೋಟಿ ರೂ. ಎಂದು ತಿಳಿಸಿದರು.
ಈ ವರ್ಷ ಜುಲೈ 10ರ ವರೆಗೆ ಆನ್‌ಲೈನ್ ಉದ್ಯೋಗ ವಂಚನೆಯ 1,820 ಪ್ರಕರಣ ದಾಖಲಾಗಿದ್ದು, ವಂಚನೆಯ ಮೊತ್ತ 178 ಕೋಟಿ ರೂ. ಆಗಿದೆ. ಇದರಲ್ಲಿ 15.71 ಕೋಟಿ ರೂ. ವಸೂಲಿ ಮಾಡಲಾಗಿದೆ. 13 ಮಂದಿಯನ್ನು ಬಂಧಿಸಿದ್ದು, 68 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅದೇ ರೀತಿ ನಕಲಿ ಲೋನ್ ಆ್ಯಪ್ ವಂಚನೆಯ 134 ಪ್ರಕರಣಗಳ ದಾಖಲಾಗಿದ್ದು, ವಂಚನೆಯ ಮೊತ್ತ 4.61 ಕೋಟಿ ರೂ. ಆಗಿದೆ. ಇದರಲ್ಲಿ 32 ಲಕ್ಷ ರೂ. ವಸೂಲಿ ಮಾಡಲಾಗಿದ್ದು ಒಬ್ಬರನ್ನು ಬಂಧಿಸಲಾಗಿದೆ ಎಂದರು.