Advertisement

ಪರಿಷತ್‌ ಫ‌ಲಿತಾಂಶ: ಜೆಡಿಎಸ್‌2 ಬಿಜೆಪಿ 1

06:00 AM Jun 13, 2018 | Team Udayavani |

ಕಲಬುರಗಿ/ಮೈಸೂರು/ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ನ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೇಲುಗೈ ಸಾಧಿಸಿವೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೇಲ್ಮನೆ ಉಪ ಸಭಾಪತಿ, ಜೆಡಿಎಸ್‌ನ ಮರಿತಿಬ್ಬೇಗೌಡ ಸತತ ನಾಲ್ಕನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಸ್‌.ಎಲ್‌.ಭೋಜೇಗೌಡ ಮೊದಲ ಜಯ ಸಾಧಿಸಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಗೆಲ್ಲುವ ಮೂಲಕ ವಿಧಾನ ಸಭೆಯ ಸೋಲಿನ ನೋವನ್ನು ಮರೆತಿದ್ದಾರೆ. 

Advertisement

ಉಳಿದ ಮೂರು ಕ್ಷೇತ್ರಗಳ ಮತ ಎಣಿಕೆ ಮಧ್ಯರಾತ್ರಿ ತನಕವೂ ಮುಂದುವರಿದಿದ್ದು, ಈಶಾನ್ಯ ಪದವೀಧರ ಮತಕ್ಷೇತ್ರದಲ್ಲಿ ಬಿಜೆಪಿಯ ಕೆ.ಬಿ.ಶ್ರೀನಿವಾಸ ಮುನ್ನಡೆ ಸಾಧಿಸಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ ಮುನ್ನಡೆ ಕಾಯ್ದು ಕೊಂಡಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್‌ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಎಸ್‌.ಪಿ.ದಿನೇಶ್‌ ನಂತರದ ಸ್ಥಾನದಲ್ಲಿದ್ದಾರೆ.

ನಾರಾಯಣಸ್ವಾಮಿ ಗೆಲುವು: ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಮೊದಲ ಪ್ರಾಶಸ್ಥ್ಯದ ಮತ ಎಣಿಕೆಯಲ್ಲಿ ಗೆಲುವಿಗೆ ಅಗತ್ಯವಾದಷ್ಟು ಮತ ಪಡೆಯದ ಕಾರಣ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಮಾಡಲಾಯಿತು. ಆ ಸುತ್ತಿನಲ್ಲಿ 2 ಸಾವಿರ ಮತಗಳ ಅಂತರದಿಂದ ನಾರಾಯಣಸ್ವಾಮಿ ಗೆಲುವು ಸಾಧಿಸಿದರೆ, ಇವರಿಗೆ ಪೈಪೋಟಿ ನೀಡಿದ್ದ ಜೆಡಿಎಸ್‌ನ ರಮೇಶ್‌ಬಾಬು ಪರಾಭವಗೊಂಡಿದ್ದಾರೆ. ಆ ಮೂಲಕ ಬಿಜೆಪಿ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆದಿದೆ. ಈ ಮಧ್ಯೆ, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅ. ದೇವೇಗೌಡ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಅವರು 1,700 ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಮತ ಎಣಿಕೆ ಕಾರ್ಯ ಮುಂದುವರಿದಿದೆ. ತಡರಾತ್ರಿಗೆ ಫ‌ಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಈ ಕ್ಷೇತ್ರವನ್ನು ಹಿಂದೆ ಬಿಜೆಪಿಯ ರಾಮಚಂದ್ರಗೌಡ ಪ್ರತಿನಿಧಿಸುತ್ತಿದ್ದರು. 

ಮರಿತಿಬ್ಬೇಗೌಡ ಪುನರಾಯ್ಕೆ: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯ ಮೆರೆದಿದ್ದು, ಮೇಲ್ಮನೆ ಉಪ ಸಭಾಪತಿ ಮರಿತಿಬ್ಬೇಗೌಡ ಸತತ ನಾಲ್ಕನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ 7933 ಮತಗಳ ನಿಗದಿತ ಕೋಟಾ ತಲುಪದಿದ್ದರೂ, ಅಲ್ಪ ಮುನ್ನಡೆ
ಕಾಯ್ದುಕೊಂಡಿದ್ದ ಮರಿತಿಬ್ಬೇಗೌಡ ಅವರು, ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆದು, 489 ಮತಗಳ ಮುನ್ನಡೆ ಪಡೆದು ಗೆಲುವು ಸಾಧಿಸಿದರು. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಸ್‌.ಎಲ್‌.ಭೋಜೇಗೌಡ 8647 ಮತಗಳ ಅಂತರದಿಂದ ಅಂತಿಮವಾಗಿ ಗೆಲುವು
ಸಾಧಿಸಿದ್ದಾರೆ. ಹಾಲಿ ಸದಸ್ಯ ಬಿಜೆಪಿಯ ಕ್ಯಾ.ಗಣೇಶ್‌ ಕಾರ್ಣಿಕ್‌ ಸೋಲುಂಡಿದ್ದಾರೆ. 11ನೇ ಸುತ್ತಿನ ಮತ ಎಣಿಕೆ ಮುಗಿದಾಗ ಎಸ್‌.ಎಲ್‌.ಭೋಜೇಗೌಡ 7,310 ಮತಗಳಿ ಸಿದ್ದರೆ, ಕ್ಯಾ.ಗಣೇಶ್‌ ಕಾರ್ಣಿಕ್‌ 5,812 ಮತ ಗಳಿಸಿದ್ದಾರೆ. ಬಿಜೆಪಿ ಮುನ್ನಡೆ: ಈಶಾನ್ಯ ಪದವೀಧರ ಮತಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ನಂತರ 583 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಕೆ.ಬಿ. ಶ್ರೀನಿವಾಸ ಮುನ್ನಡೆ ಸಾಧಿಸಿದ್ದಾರೆ. ಅವರು 11,661 ಮತ ಪಡೆದರೆ, ಜೆಡಿಎಸ್‌ನ ಎನ್‌. ಪ್ರತಾಪರೆಡ್ಡಿ 11,078 ಹಾಗೂ ಕಾಂಗ್ರೆಸ್‌ ಅಭ್ಯರ್ಥಿ 9,478 ಮತ ಪಡೆದು ನಂತರದ ಸ್ಥಾನಗಳಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next