Advertisement

ಪರಿಷತ್‌ ಅವಿಶ್ವಾಸ ಸಮರ

01:02 AM Dec 15, 2020 | mahesh |

ಬೆಂಗಳೂರು: ಮಂಗಳವಾರದ ಒಂದು ದಿನದ ವಿಧಾನಪರಿಷತ್‌ ಕಲಾಪದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಸಭಾಪತಿ ಅವಿಶ್ವಾಸ ವಿಷಯ ಪ್ರಮುಖವಾಗಿ ಪ್ರಸ್ತಾವಗೊಂಡು ಸದನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಕೋಲಾಹಲ ಉಂಟಾಗುವ ನಿರೀಕ್ಷೆಯಿದೆ.

Advertisement

ಕಲಾಪದ ಕಾರ್ಯಸೂಚಿಯಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ಚರ್ಚೆ ವಿಚಾರ ಸೇರಿಸದ ಕಾರಣ ಮತ್ತೂಮ್ಮೆ ಕಲಾಪ ಸಲಹಾ ಸಮಿತಿ ಸಭೆ ನಡೆಸುವಂತೆ ಬಿಜೆಪಿ ಮನವಿ ಮಾಡಿದೆ. ಮತ್ತೂಂದೆಡೆ ಸಭಾಪತಿಯವರು ವಿಶ್ವಾಸ ಕಳೆದುಕೊಂಡಿರುವುದರಿಂದ ಕಲಾಪವನ್ನು ಉಪ ಸಭಾಪತಿ ನಡೆಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಕಾರ್ಯಸೂಚಿಯಲ್ಲಿ ಅವಿಶ್ವಾಸ ಇರದ ಮತ್ತು ನಿಯಮಾವಳಿ ಪ್ರಕಾರ ಅವಿಶ್ವಾಸ ನಿರ್ಣಯ ಇಲ್ಲ ಎಂದು ಈ ಹಿಂದೆಯೇ ಸಭಾಪತಿ ತಿರಸ್ಕರಿಸಿರುವುದರಿಂದ ಮತ್ತೆ ಅದನ್ನು ಪ್ರಸ್ತಾವಿಸುವಂತಿಲ್ಲ. ಒಂದೊಮ್ಮೆ ಪ್ರಸ್ತಾವಿಸಿದರೆ ವಿರೋಧಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. ಇದರ ನಡುವೆ ಜೆಡಿಎಸ್‌ ತನ್ನ ನಿಲುವೇನು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಮೂರೂ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್‌ ನೀಡಿವೆ.

ಗೋಹತ್ಯೆ ನಿಷೇಧ ಮಸೂದೆಯನ್ನು ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆಯಾದರೂ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ವಿಚಾರವೇ ಪ್ರಮುಖವಾಗಿ ಪ್ರಸ್ತಾವಗೊಳ್ಳಲಿದೆ. ಒಂದು ದಿನದ ಅಧಿವೇಶನದ ಕಾರ್ಯ ಕಲಾಪದ ಕಾರ್ಯ ಸೂಚಿಯಲ್ಲಿ ಅವಿಶ್ವಾಸದ ಕಾರ್ಯಸೂಚಿಯನ್ನೇ ನೀಡಿಲ್ಲ. ಈ ಮೂಲಕ ಸಭಾಪತಿ ವಿರುದ್ಧ ಬಿಜೆಪಿ ಸದಸ್ಯರು ನೀಡಿದ್ದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಸಭಾಪತಿ ರವಾನಿಸಿದ್ದಾರೆ.

ಬಿಜೆಪಿ ತಂತ್ರಗಾರಿಕೆ
ಸಭಾಪತಿ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಸೂಚನೆ ಬಗ್ಗೆ ಚರ್ಚಿಸಲು ಮಂಗಳವಾರ ಬೆಳಗ್ಗೆ ಕಲಾಪ ಸಲಹಾ ಸಮಿತಿ ಸಭೆ ನಡೆಸುವಂತೆ ಬಿಜೆಪಿ ಮನವಿ ಮಾಡಿದೆ. ಸಭೆ ನಡೆಸದಿದ್ದರೆ ಕಲಾಪ ಪಟ್ಟಿಯಲ್ಲಿ ಇಲ್ಲದಿದ್ದರೂ ಅವಿಶ್ವಾಸ ನಿರ್ಣಯ ಸೂಚನೆ ಮೇಲಿನ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿಯಲು ಮತ್ತು ಸದನದ ಸದಸ್ಯರಲ್ಲಿ ತಮಗೆ ವಿಶ್ವಾಸವಿದೆ ಎಂಬುದನ್ನು ಸಾಬೀತುಪಡಿಸುವಂತೆ ಸಭಾಪತಿ ಮೇಲೆ ಒತ್ತಾಯ ಹೇರಲು ನಿರ್ಧರಿಸಿದೆ.

Advertisement

ಕಾಂಗ್ರೆಸ್‌ ಪ್ರತಿತಂತ್ರ
ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ವಿಷಯವನ್ನು ಕಾಂಗ್ರೆಸ್‌ ಪ್ರಧಾನ ಅಂಶವಾಗಿ ಬಳಸಲು ಯೋಚಿಸಿದೆ. ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡದಂತೆ ಆಗ್ರಹಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಜೆಡಿಎಸ್‌ ತಟಸ್ಥ?
ಜೆಡಿಎಸ್‌ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಬಸವರಾಜ ಹೊರಟ್ಟಿ ಅವರು ಈ ಕುರಿತು ದೇವೇಗೌಡ ಮತ್ತು ಎಚ್‌.ಡಿ.ಕೆ. ಜತೆ ಚರ್ಚೆ ನಡೆಸಿದ್ದಾರೆ. ಜೆಡಿಎಸ್‌ ಬಿಜೆಪಿ ಪರ ನಿಲ್ಲಬಹುದು ಇಲ್ಲವೇ ತಟಸ್ಥವಾಗಿದ್ದು ಪರೋಕ್ಷ ಬೆಂಬಲಿಸಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next