Advertisement

Congress ಗೆದ್ದರೆ ಶಿಕ್ಷಕರ ಬೇಡಿಕೆ ಈಡೇರಿಕೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್‌

11:44 PM Nov 28, 2023 | Team Udayavani |

ಮಂಗಳೂರು: ಈ ಬಾರಿಯ ವಿಧಾನಪರಿಷತ್‌ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೆ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಮೈಸೂರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಕಾಂಗ್ರೆಸ್‌ ಈಗಾಗಲೇ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕೆ.ಕೆ. ಮಂಜುನಾಥ್‌ ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವುದರಿಂದ ಪರಿಷತ್‌
ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂದರು.

ಶ್ವೇತಪತ್ರ ಹೊರಡಿಸಲಿ
ವಿಧಾನಪರಿಷತ್‌ನ ಹಾಲಿ ಸದಸ್ಯ ಜೆಡಿಎಸ್‌ನ ಭೋಜೇಗೌಡ ಅವರು ಶಿಕ್ಷಕರಿಗಾಗಿ ಏನು ಮಾಡಿದ್ದಾರೆ ಎಂಬಶ್ವೇತಪತ್ರ ಹೊರಡಿಸಲಿ. ಶಿಕ್ಷಕರ ಸಮಸ್ಯೆ ಗಳನ್ನು ಬಗೆಹರಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು. ಜೆಡಿಎಸ್‌, ಬಿಜೆಪಿಯವರು ಶಿಕ್ಷಕರಿಗೆ ಪಾರ್ಟಿ, ಮದ್ಯ ಮೊದಲಾದ ಆಮಿಷಗಳನ್ನು ನೀಡಿ ಅವಮಾನ ಮಾಡಿದ್ದಾರೆ ಎಂದು ಎಂ. ಲಕ್ಷ್ಮಣ್‌ ಹೇಳಿದರು.

ಹೊಸ ಪಿಂಚಣಿ ಯೋಜನೆ ರದ್ದು
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌)ಯಿಂದ ಶಿಕ್ಷಕರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಳಿಸಿದೆ. ನಿವೃತ್ತರಾದ ಮೇಲೆ ಶಿಕ್ಷಕರಿಗೆ ಔಷಧಿಗೂ ಹಣವಿಲ್ಲದ ಸ್ಥಿತಿ ಉಂಟಾಗುತ್ತಿದೆ. ಬಿಜೆಪಿ, ಜೆಡಿಎಸ್‌ನವರು ನೌಕರರ ವಿರೋಧಿಯಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕರು ಆಮಿಷಕ್ಕೆಒಳಗಾಗಬಾರದು ಎಂದರು.

ವಾರದಲ್ಲಿ ಬಿಜೆಪಿ ಸರಕಾರದ ಶ್ವೇತಪತ್ರ
ಕಾಂಗ್ರೆಸ್‌ ಸರಕಾರ ರಾಜ್ಯದ ಆರ್ಥಿಕ ಸ್ಥಿತಿಗತಿಯ ಶ್ವೇತಪತ್ರ ಹೊರಡಿಸುವಂತೆ ವಿಪಕ್ಷ ನಾಯಕ ಅಶೋಕ್‌ ಹೇಳಿದ್ದಾರೆ. ಆದರೆ ನಾವು ಮೊದಲು ಬಿಜೆಪಿಯವರ ಆಡಳಿತದ ಶ್ವೇತಪತ್ರ ಹೊರಡಿಸುತ್ತೇವೆ. ಬಿಜೆಪಿಯವರು ಆಡಳಿತ ಬಿಟ್ಟು ಹೋಗುವಾಗ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಒಂದು ವಾರದೊಳಗೆ ಶ್ವೇತಪತ್ರ ಹೊರಡಿ ಸಲಿದ್ದೇವೆ ಎಂದು ಲಕ್ಷ್ಮಣ್‌ ಹೇಳಿದರು.

Advertisement

ನೋಟೀಸ್‌ಗೆ ಉತ್ತರ
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ನುಡಿದಂತೆ ನಡೆದಿದೆ. ತೆಲಂಗಾಣದಲ್ಲಿ ಅದರ ಬಗ್ಗೆ ಜಾಹೀರಾತು ನೀಡಿರುವುದಕ್ಕೆ ಚುನಾವಣ ಆಯೋಗ ನೀಡಿರುವ ನೋಟೀಸ್‌ಗೆಉತ್ತರ ನೀಡಲಾಗುವುದು. ನಾವು ಸುಳ್ಳು ಹೇಳಿಲ್ಲ. ಜಾಹೀರಾತು ಮುಂದು ವರಿಸುತ್ತೇವೆ ಎಂದು ಲಕ್ಷ್ಮಣ್‌ ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯಿಸಿದರು.

ಗೆಲುವಿನ ಪೂರ್ಣ ವಿಶ್ವಾಸ
ಅಭ್ಯರ್ಥಿ ಕೆ.ಕೆ. ಮಂಜುನಾಥ್‌ ಮಾತನಾಡಿ, ಶಿಕ್ಷಕರ ಸಂಘದಲ್ಲಿದ್ದು ಶಿಕ್ಷಕರ ಸಂಘಟನೆ ಮಾಡಿ ಅವರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸಿದ್ದೇನೆ. ಈ ಹಿಂದಿನ ಚುನಾ ವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮುಖ್ಯಮಂತ್ರಿಗಳು ಶಿಕ್ಷಕರಿಗೆ ಸುಳ್ಳು ಭರವಸೆ ನೀಡಿ ಅವರ ಅಭ್ಯರ್ಥಿಗೆ ಲಾಭ ಮಾಡಿಕೊಟ್ಟರು. ಈಗ ಕಾಂಗ್ರೆಸ್‌ ಸರಕಾರವೇ ಇರುವುದರಿಂದ ಶಿಕ್ಷಕರಿಗೆಭರವಸೆ ಇದೆ. ಹಳೆ ಪಿಂಚಣಿ ವ್ಯವಸ್ಥೆ ಯನ್ನು ಕಾಂಗ್ರೆಸ್‌ ಆರಂಭಿಸಿತ್ತು. ಆದರೆ ಅದನ್ನು ರದ್ದುಗೊಳಿಸಿದ್ದು 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ, ಬಿ.ಎಸ್‌.ಯಡಿಯೂರಪ್ಪ ಉಪಮುಖ್ಯ ಮಂತ್ರಿಯಾಗಿದ್ದಾಗ ರದ್ದು ಮಾಡಿದ್ದರು. ಇದರಿಂದಾಗಿ ಶಿಕ್ಷಕರು ನಿವೃತ್ತರಾದ ಮೇಲೆ ಬರಿಗೈಯಲ್ಲಿ ಮನೆಗೆ ಹೋಗಬೇಕಾದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಜೆ.ಆರ್‌.ಲೋಬೋ, ಕಾಂಗ್ರೆಸ್‌ನ ಪ್ರಮುಖರಾದ ಕೋಡಿಜಾಲ್‌ ಇಬ್ರಾಹಿಂ, ಸಾಹುಲ್‌ ಹಮೀದ್‌,  ಪ್ರವೀಣ್‌ಚಂದ್ರ ಆಳ್ವ, ವಿಶ್ವಾಸ್‌ ದಾಸ್‌, ಉಲ್ಲಾಸ್‌ ಕೋಟ್ಯಾನ್‌, ಆಯಿಶಾ ಫ‌ರ್ಜಾನ್‌, ನೀರಜ್‌ ಪಾಲ್‌, ಸುಹಾನ್‌ ಆಳ್ವ, ಚೆರಿಯನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next