Advertisement

ಶಾಸಕಾಂಗ, ಕೋರ್‌ ಕಮಿಟಿ ಸಭೆ ಇಂದು

12:30 AM Feb 05, 2019 | |

ಬೆಂಗಳೂರು: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಬಿಜೆಪಿಯು ಮಂಗಳವಾರ ಶಾಸಕಾಂಗ ಪಕ್ಷದ ಸಭೆ ಹಾಗೂ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಕರೆದಿದ್ದು, ಕುತೂಹಲ ಮೂಡಿಸಿದೆ.

Advertisement

ಇನ್ನೊಂದೆಡೆ ಲೋಕಸಭಾ ಚುನಾವಣೆ ಸಿದ್ಧತಾ ಕಾರ್ಯಕ್ಕೆ ಚುರುಕು ಮುಟ್ಟಿಸುವ ಕಾರ್ಯದ ಭಾಗವೆಂಬಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮಲಾಲ್‌ ಅವರು ಮಂಗಳವಾರ ಸರಣಿ ಸಭೆ ನಡೆಸಲಿದ್ದು, ಸಂಘಟನೆಯನ್ನು ಬಲಗೊಳಿಸಲು ರಾಷ್ಟ್ರೀಯ ಬಿಜೆಪಿ ನೀಡಿರುವ 23 ಅಂಶದ ಕಾರ್ಯ ಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಇಳಿಕೆ ಪ್ರಯತ್ನ ಮುಂದುವರಿದಿದೆ ಎಂಬ ಮಾತುಗಳ ಬೆನ್ನಲ್ಲೇ ಪಕ್ಷದ ಶಾಸಕರನ್ನು ವಿಶ್ವಾಸದಲ್ಲಿರಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಸಂಜೆ 4.30ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ನಡೆಸಬೇಕಾದ ಹೋರಾಟ, ಒಗ್ಗಟ್ಟು ಪ್ರದರ್ಶನ, ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಹೆಣೆಯುವ ಕಾರ್ಯತಂತ್ರಕ್ಕೆ ಸ್ಪಂದನೆ ಇತರೆ ವಿಚಾರಗಳ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಶಾಸಕಾಂಗ ಸಭೆಯ ಬಳಿಕ ಬಿಜೆಪಿ ಕೋರ್‌ ಕಮಿಟಿ ಸಭೆ ಕೂಡ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರದ ಸಂಖ್ಯಾಬಲ ಇಳಿಕೆಗೆ ನಡೆದಿರುವ ಪ್ರಯತ್ನದಲ್ಲೇ ಬಹಳಷ್ಟು ನಾಯಕರು ನಿರತರಾಗಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ರಾಮಲಾಲ್‌ ಅವರ ರಾಜ್ಯ ಭೇಟಿ ಕುತೂಹಲ ಮೂಡಿಸಿದೆ. ಮಂಡಲ ಸ್ತರ ಹಾಗೂ ಮೋರ್ಚಾ ಪದಾಧಿಕಾರಿಗಳಿಗೆ ಐದು ಮತಗಟ್ಟೆ ಜವಾಬ್ದಾರಿ. ಸಾಮಾನ್ಯ ಸದಸ್ಯರ ಪಟ್ಟಿ ಪರಿಷ್ಕರಣೆ. ಹಿಂದಿನ ಎರಡು ಲೋಕಸಭೆ ಹಾಗೂ ಎರಡು ವಿಧಾನಸಭೆ ಚುನಾವಣೆಗಳ ಮತಗಟ್ಟೆವಾರು ಅಂಕಿ ಅಂಶಗಳನ್ನು ಮತಗಟ್ಟೆ ತಂಡಕ್ಕೆ ನೀಡುವುದು. ಬೂತ್‌ ವರ್ಗೀಕರಣ. 20 ಹೊಸ ಸದಸ್ಯರ ನೋಂದಣಿ. ಸಂಘ ಪರಿವಾರದೊಂದಿಗೆ ನಿರಂತರ ಸಂಪರ್ಕ. ನಮೋ ಆ್ಯಪ್‌ ಉತ್ತೇಜನ ಸೇರಿದಂತೆ 23 ಕಾರ್ಯಕ್ರಮ ಪಟ್ಟಿಯನ್ನು ಈಗಾಗಲೇ ನೀಡಲಾಗಿದೆ. ಪ್ರತಿ ಕಾರ್ಯಕ್ರಮಕ್ಕೂ ಸೂಕ್ತ ವ್ಯಕ್ತಿಗಳ ನಿಯೋಜನೆ ಹಾಗೂ ಉತ್ತರದಾಯಿತ್ವದ ಹೊಣೆ ನಿಗದಿಪಡಿಸುವ ಕಾರ್ಯವನ್ನು ರಾಮಲಾಲ್‌ ಅವರು ನಿರ್ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಮೋದಿ ಬಜೆಟ್ ಅಭಿನಂದನೆ ಕಾರ್ಯಕ್ರಮ ಇಂದು
ಬೆಂಗಳೂರು
: ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಬಜೆಟ್‌ನಲ್ಲಿ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಮಂಗಳವಾರ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಬಜೆಟ್ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಾಗೆಯೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ರೈತರಿಗೆ ನೀಡಿರುವ ಕೊಡುಗೆಗಳನ್ನು ರೈತರು, ಜನರಿಗೆ ತಿಳಿಸಲು 10 ತಂಡಗಳನ್ನು ರಚಿಸಿ ಪ್ರವಾಸಕ್ಕೆ ನಿಯೋಜಿಸಿದೆ.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಸವದಿ, ದೇಶದ ರೈತರು ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಒತ್ತು ನೀಡಿದ್ದು, ಸ್ವಾತಂತ್ರ್ಯಾನಂತರ ಕೃಷಿಕರು ಹಾಗೂ ಕೃಷಿ ಚಟುವಟಿಕೆಗೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಪಿಯೂಷ್‌ ಗೋಯೆಲ್‌ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.

ರಾಜ್ಯಾದ್ಯಂತ ಅಭಿನಂದನಾ ಕಾರ್ಯಕ್ರಮ: ಮಂಗಳವಾರ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೋದಿ ಬಜೆಟ್ ಅಭಿನಂದನಾ ಕಾರ್ಯಕ್ರಮ ನಡೆಸಲಾಗುವುದು. ಎತ್ತಿನಗಾಡಿಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವಿಟ್ಟು ರ್ಯಾಲಿ ನಡೆಸಲಾಗುವುದು. ರೈತರಿಗೆ ಕೇಂದ್ರ ಸರ್ಕಾರದ ಕೊಡುಗೆಗಳ ಬಗ್ಗೆ ಕೃಷಿಕರು ಹಾಗೂ ಸಾರ್ವಜನಿಕರಿಗೆ ತಿಳಿಸಲು ರಾಜ್ಯ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು 10 ತಂಡಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.

ಫೆ. 18ಕ್ಕೆ ಗೋ ಪೂಜೆ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಸ್ವದೇಶಿ ಗೋ ತಳಿಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ ಕಲ್ಪಿಸಿ ಕಾಮಧೇನು ಆಯೋಗ ರಚಿಸುವುದಾಗಿ ಘೋಷಿಸಿರುವುದು ಶ್ಲಾಘನೀಯ. ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 4000 ತಾಲೂಕು ಪಂಚಾಯ್ತಿ ಕ್ಷೇತ್ರಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಗೋ ಭಕ್ತರೆಲ್ಲಾ ಸೇರಿ ಫೆ. 18ಕ್ಕೆ ಗೋ ಪೂಜೆ ಸಲ್ಲಿಸಿ ಗೊವಿನ ಮಹತ್ವ ಸಾರಲಿದ್ದಾರೆ ಎಂದು ತಿಳಿಸಿದರು.

ಒಬಿಸಿ ಸಮಾವೇಶ: ಬೆಂಗಳೂರು: ಪಾಟ್ನಾದಲ್ಲಿ ಫೆ. 15 ಹಾಗೂ 16ರಂದು ಅಖೀಲ ಭಾರತ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದ್ದು, ರಾಜ್ಯ ಬಿಜೆಪಿಯಿಂದ 150ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಪಾಟ್ನಾದಲ್ಲಿ ಫೆ. 15ರಿಂದ ಎರಡು ದಿನ ಅಖೀಲ ಭಾರತ ಮಟ್ಟದ ಸಮಾವೇಶ ನಡೆಯಲಿದೆ. ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರ ಏನೆಲ್ಲಾ ಸೌಲಭ್ಯ ಕಲ್ಪಿಸಿದೆ ಎಂಬ ವಿಚಾರ ಸೇರಿ ಮುಂದೆ ಆಗಬೇಕಿರುವ ಸೌಲಭ್ಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ರಾಜ್ಯದಿಂದ 150ಕ್ಕೂ ಹೆಚ್ಚು ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಜಮೀರ್‌ ಅಹ್ಮದ್‌ ಹೇಳಿಕೆಗೆ ಖಂಡನೆ
ಬೆಂಗಳೂರು
: ಬಿಜೆಪಿಗೆ ಮತ ಹಾಕುವವರು ಮುಸ್ಲಿಮರೇ ಅಲ್ಲ ಎಂದು ಸಚಿವ ಜಮೀರ್‌ ಅಹ್ಮದ್‌ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು ಬೆಂಬಲಿಸದಂತೆ ಒಡ್ಡುತ್ತಿರುವ ಬೆದರಿಕೆ ಫ‌ಲ ನೀಡದಿರುವುದರಿಂದ ಈಗ ಕಾಂಗ್ರೆಸ್‌ ಪಕ್ಷ ಹೊಸ ವರಸೆ ಆರಂಭಿಸಿದೆ.

ಆದರೆ ಸ್ವಾತಂತ್ರ್ಯಾನಂತರ ಮುಸ್ಲಿಮರ ಏಳಿಗೆಗೆ ಕಾಂಗ್ರೆಸ್‌ ಮಾಡಿರುವುದು ಏನು ಎಂದು ಮುಸ್ಲಿಮರು ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌ ಎನ್ನುವುದನ್ನು ಅನುಷ್ಠಾನಗೊಳಿಸಿದ್ದಾರೆ. ಮತ ಬ್ಯಾಂಕ್‌ ಆಗಿ ಮುಸ್ಲಿಮರನ್ನು ಪರಿಗಣಿಸಿದ್ದ ಕಾಂಗ್ರೆಸ್‌ಗೆ ಆ ಮತ ಬ್ಯಾಂಕ್‌ ಕೂಡ ಕರಗುತ್ತಿರುವ ಚಿಂತೆ ಆರಂಭವಾಗಿದೆ. ತ್ರಿವಳಿ ತಲಾಖ್‌ ನಿಷೇಧ ಮೊದಲಾದ ಕ್ರಾಂತಿಕಾರಕ ಕ್ರಮಗಳಿಂದ ಕೇಂದ್ರ ಸರ್ಕಾರ ಎಲ್ಲರ ಮನ ಗೆದ್ದಿದೆ. ಕಾಂಗ್ರೆಸ್‌ ನೇತಾರರಿಗೆ ಬಿಜೆಪಿ ಬಗ್ಗೆ ಯಾವ ಮಟ್ಟದ ಭಯವಿದೆ ಎನ್ನುವುದು ಜಮೀರ್‌ ಅವರ ಹೇಳಿಕೆಯಿಂದ ಅರ್ಥವಾಗುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹಾಗೂ ವಕ್ತಾರ ಡಾ.ವಾಮನ ಆಚಾರ್ಯ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಗಂಡು ಹೆಣ್ಣಿಗೆ ಒಪ್ಪಿಯಿಲ್ಲದ ಮದುವೆಯಂತಾಗಿದೆ.ಕಾಂಗ್ರೆಸ್‌  ಜೆಡಿಎಸ್‌ ಸಚಿವರಿಗೆ “ಫ‌ಲವತ್ತಾದ’ಖಾತೆಗಳೇ ಬೇಕು. ಹಣ ಗಳಿಸುವ ಲೆಕ್ಕಾಚಾರದಲ್ಲೇ ತೊಡಗಿದ್ದು, ಇವರಿಂದಾಗಿ ರಾಜ್ಯದ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಹಾಗಾಗಿ ಗಂಡು  ಹೆಣ್ಣಿಗೆ ವಿಚ್ಛೇದನವಾಗಿ ಸರ್ಕಾರ ಪತನಗೊಂಡರೆ ಯಡಿಯೂರಪ್ಪ ಅವರ ಕಾಲದ ರಾಜ್ಯದ ಅಭಿವೃದದ್ಧಿ ಕಾಣಬಹುದು.
– ಬಿ.ಜೆ.ಪುಟ್ಟಸ್ವಾಮಿ, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next