Advertisement

ದೇವರಾಜ, ಲ್ಯಾನ್ಸ್‌ಡೌನ್‌ ಕಟ್ಟಡ ನೆಲಸಮಕ್ಕೆ ಪಾರಂಪರಿಕ ಸಮಿತಿ ನಿರ್ಣಯ

03:36 PM Apr 15, 2022 | Team Udayavani |

ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಹೆಗ್ಗುರುತಾದ ಲ್ಯಾನ್ಸ್‌ಡೌನ್‌ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ನೆಲಸಮಗೊಳಿಸಿ ಅದೇ ಮಾದರಿಯಲ್ಲಿ ಮರು ನಿರ್ಮಾಣಕ್ಕೆ ಪಾರಂಪರಿಕ ಸಮಿತಿ ನಿರ್ಧರಿಸಿದೆ.

Advertisement

ಲ್ಯಾನ್ಸ್‌ಡೌನ್‌ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಉಳಿಸುವ ಅಥವಾ ನೆಲಸಮಗೊಳಿಸುವ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಸರ್ಕಾರ ನೇಮಿಸಿದ್ದ ಜಿಲ್ಲಾಧಿಕಾರಿ ನೇತೃತ್ವದ ಪಾರಂಪರಿಕ ಸಮಿತಿ ಎರಡು ವರ್ಷಗಳ ಕಾಲ ಪರಿಶೀಲನೆ ನಡೆಸಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅಧ್ಯಕ್ಷತೆಯಲ್ಲಿ ನಡೆದ ಪಾರಂಪರಿಕ ಸಮಿತಿ ಸಭೆಯಲ್ಲಿ ಎರಡೂ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲವಾಗಿರುವುದರಿಂದ ಕಟ್ಟಡಗಳನ್ನು ನವೀಕರಣ ಮಾಡಿ ಉಳಿಸಿಕೊಳ್ಳುವುದು ಕಟ್ಟ. ಈ ಹಿನ್ನೆಲೆ ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಿ ಈಗಿರುವ ಕಟ್ಟಡ ಶೈಲಿ, ಪದ್ಧತಿ ಹಾಗೂ ಅದೇ ಸಾಮಗ್ರಿ ಬಳಿಸಿ ಪುನರ್‌ ನಿರ್ಮಾಣ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.

ಏನಿದು ವಿವಾದ: ಮೈಸೂರಿನ ಹೃದಯ ಭಾಗದಲ್ಲಿರುವ 138 ವರ್ಷ ಹಳೆಯದಾದ ಲ್ಯಾನ್ಸ್ ಡೌನ್‌ ಕಟ್ಟಡದ ಸಮರ್ಪಕ ನಿರ್ವಹಣೆ ಕೊರತೆಯಿಂದ 2012ರಲ್ಲಿ ಕಟ್ಟಡದ ಕೆಲವು ಭಾಗ ಕುಸಿದು ನಾಲ್ಕು ಮಂದಿ ಮೃತಪಟ್ಟಿದ್ದರು. ನಂತರ ಇಡೀ ಕಟ್ಟಡದಲ್ಲಿದ್ದ ಬಾಡಿಗೆದಾರರನ್ನು ತೆರವುಗೊಳಿಸಿ, ಕಟ್ಟಡದ ಮುಂಭಾಗ ತಾತ್ಕಾಲಿಕ ಶೆಡ್‌ ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸಲು ಅಲ್ಲಿದ್ದ ಬಾಡಿಗೆದಾರರು ಮತ್ತು ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.

ಕಟ್ಟಡ ಕುಸಿದು ಬಿದ್ದ ನಂತರ ಪಾಲಿಕೆ ನವೀಕರಣ ಕೆಲಸ ಆರಂಭಿಸಿತ್ತಾದರೂ 112 ವರ್ಷ ಹಳೆಯದಾದ ದೇವರಾಜ ಮಾರುಕಟ್ಟೆಯ ಒಂದು ಭಾಗ 2016ರಲ್ಲಿ ಕುಸಿದು ಬಿದ್ದಿತು. ಪರಿಣಾಮ ಲ್ಯಾನ್ಸ್‌ಡೌನ್‌ ಕಟ್ಟಡದ ನವೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಲ್ಯಾನ್ಸ್‌ಡೌನ್‌ ಕಟ್ಟಡ ನಿರ್ವಹಣೆ ಇಲ್ಲದೇ, ಪಾಳು ಬಿದ್ದಿದ್ದರೆ, ದೇವರಾಜ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ.

Advertisement

ಈ ಎರಡೂ ಕಟ್ಟಡಗಳು ಶಿಥಿಲವಾಗಿರುವುದರಿಂದ ತೆರವು ಮಾಡಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲು ಸರ್ಕಾರ ರಚಿಸಿದ್ದ ಕಾರ್ಯಪಡೆ ಸಮಿತಿಯು ಸದರಿ ಕಟ್ಟಡಗಳನ್ನು ಬಳಸಲು ಸಾಧ್ಯವಿಲ್ಲ. ಕೆಡವಿ ಹೊಸದಾಗಿ ನಿರ್ಮಿಸುವುದು ಸೂಕ್ತ ಎಂದು ಅಭಿಪ್ರಾಯಿಸಿತ್ತು. ಆದರೆ ಪಾರಂಪರಿಕ ತಜ್ಞರು ಈ ಎರಡೂ ಕಟ್ಟಡಗಳೂ ಸದೃಢವಾಗಿದ್ದು, ದುರಸ್ತಿ ಮಾಡಿ ನವೀಕರಿಸುವ ಮೂಲಕ ಸಂರಕ್ಷಿಸಬಹುದು ಎಂದು ವರದಿ ನೀಡಿತ್ತು. ಈ ವಿಭಿನ್ನ ಅಭಿಪ್ರಾಯಗಳಿದ್ದ ಕಾರಣ ಬಾಡಿಗೆದಾರರೂ ಸಹ ಹಳೇ ಕಟ್ಟಡವನ್ನೇ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರಲ್ಲದೆ, ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸುವುದರ ವಿರುದ್ಧ ಕೋರ್ಟ್‌ನ ಬಾಗಿಲು ತಟ್ಟಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಪ್ರತ್ಯೇಕ ಪಾರಂಪರಿಕ ತಜ್ಞರ ಸಮಿತಿಯಿಂದ ವರದಿ ಪಡೆಯಬೇಕೆಂದು ನಿರ್ದೇಶನ ನೀಡಿತ್ತು. ಅದರಂತೆ ಮೂರು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪಾರಂಪರಿಕ ಸಮಿತಿ ರಚನೆಯಾಗಿತ್ತು. ಈ ನಡುವೆ ಕೊರೊನಾ ಸೋಂಕು ವ್ಯಾಪಿಸಿದ್ದರಿಂದ ಸಮಿತಿ ಕಾರ್ಯಚಟುವಟಿಕೆ ಸ್ತಬ್ಧವಾಗಿತ್ತು. ಇತ್ತ ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್‌ನಲ್ಲಿ ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಿ ಅದೇ ಮಾದರಿಯಲ್ಲಿ ಹೊಸ ಕಟ್ಟಡ ಮರು ನಿರ್ಮಾಣಕ್ಕೆ ನಿರ್ಣಯ ಕೈಗೊಂಡಿರುವುದು ಎರಡೂ ಕಟ್ಟಡಗಳ ನೆಲಸಮಕ್ಕೆ ನಾಂದಿ ಹಾಡಿದಂತಾಗಿದೆ.

ದೇಶದಲ್ಲಿ ಸಾವಿರ ವರ್ಷದಷ್ಟು ಹಳೆಯದಾದ ಕಟ್ಟಡಗಳನ್ನು ಸಂರಕ್ಷಿಸಲಾಗಿದೆ. ಅಂತಹದ್ದರಲ್ಲಿ 130 ವರ್ಷದ ಸುಭದ್ರ ಕಟ್ಟಡವನ್ನು ಸಂರಕ್ಷಿಸಲು ಕಷ್ಟವೇನಿಲ್ಲ. ಆದರೆ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಸಮಿತಿಯ ನಿರ್ಣಯದ ಬಗ್ಗೆ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡುತ್ತೇವೆ. -ಎಸ್‌. ಮಹದೇವ್‌, ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next