Advertisement

Legislative Assembly: ಸದನದಲ್ಲಿ ಮುಖ್ಯಮಂತ್ರಿ Vs ಬಿಜೆಪಿ ರೋಷಾವೇಶ!

01:08 AM Jul 19, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸದನದಲ್ಲಿ ಭಾರೀ ಸದ್ದು ಮಾಡಿದ್ದು, ಗುರುವಾರ ಚರ್ಚೆ ವೇಳೆ, ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.

Advertisement

“ನಿಮ್ಮಲ್ಲಿ ಕೆಲವರದ್ದು ತೆಗೆಯುತ್ತೇನೆ ಈಗ, ಯಾರ ಯಾರ ಕಾಲದಲ್ಲಿ ಏನೇನು ಆಯ್ತು ಎಂಬುದನ್ನು ಬಿಚ್ಚಿಡುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದು, ಸಿಎಂ ಸಿದ್ದರಾಮಯ್ಯ-ಮಾಜಿ ಡಿಸಿಎಂ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಮಧ್ಯೆ ಏಕವಚನ ಪ್ರಯೋಗದೊಂದಿಗೆ ಅಂತ್ಯಕಂಡಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಸಚಿವರ ದಂಡಿನೊಂದಿಗೆ ಸದನಕ್ಕೆ ಬಂದ ಸಿದ್ದರಾಮಯ್ಯ, ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಬಿಚ್ಚಿಡುವ ಅಸ್ತ್ರ ಪ್ರಯೋಗಿಸಿದರು. ಆದರೆ, ಇದಕ್ಕೆ ಸೊಪ್ಪು ಹಾಕದ ಅಶ್ವತ್ಥನಾರಾಯಣ, ಸಿದ್ದರಾಮಯ್ಯ ವಿರುದ್ಧ ಏರಿ ಹೋದರು. ಏನು ಬಿಚ್ಚಿಡುತ್ತೀರಿ? ನಿಮ್ಮದು 100 ಪರ್ಸೆಂಟ್‌ ಸರಕಾರ ಎಂಬುದು ಗೊತ್ತು ಎಂದು ತಿರುಗೇಟು ಕೊಟ್ಟರು.

ಇದು ಸಿದ್ದರಾಮಯ್ಯ ಅವರನ್ನು ಇನ್ನಷ್ಟು ಕೆರಳಿಸಿತು. ಯೇ ಅಶ್ವತ್ಥನಾರಾಯಣ ಗೌಡ, ನಿನಗಿಂತ ದೊಡ್ಡ ಭ್ರಷ್ಟ ಇಲ್ಲ. ನೀನು ಭ್ರಷ್ಟಾಚಾರದ ಪಿತಾಮಹ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಏಕವಚನ ಪ್ರಯೋಗದಿಂದ ಸಿಟ್ಟಿಗೆದ್ದ ಅಶ್ವತ್ಥನಾರಾಯಣ ಅವರು ಸಿದ್ದರಾಮಯ್ಯ ಅವರತ್ತ ಎರಡು ಕೈ ಎತ್ತಿ ಜರಿದು ನೀವು ಪೇಸಿಎಂ ಎಂದರು.

ಬರಬರುತ್ತಾ ಬಹುವಚನವು ಏಕವಚನಕ್ಕೆ ತಿರುಗಿ ನೀನು ಪೇಸಿಎಂ, ನೀನು 100 ಪರ್ಸೆಂಟ್‌ ಪೇಸಿಎಂ. ಏನು ಹೆದರಿಸುತ್ತೀರಾ? ಬೆದರಿಸುತ್ತೀರಾ? ಯಾರೂ ಹೆದರಲ್ಲ ಎಂದು ಗರ್ಜಿಸಿದರು. ಆಗ ಬಿಜೆಪಿ ಸದಸ್ಯರೆಲ್ಲರೂ ಒಟ್ಟಾಗಿ ತಿರುಗಿ ಬಿದ್ದರು. ನೀವೆಲ್ಲರೂ ಎದ್ದು ನಿಂತು ಗಲಾಟೆ ಮಾಡಿದರೆ ನಾನು ಭಯ ಬೀಳುತ್ತೇನೆ ಎಂದುಕೊಂಡಿರಾ? ಎಂದು ಸಿದ್ದರಾಮಯ್ಯ ಹೂಂಕರಿಸಿದರು.

Advertisement

ಇಂಥ ಭ್ರಷ್ಟ ಮುಖ್ಯಮಂತ್ರಿ ರಾಜ್ಯ ದಲ್ಲಿ ಮತ್ಯಾರೂ ಇಲ್ಲ, ಬೇರೆ ಯಾರೂ ಗತಿ ಇಲ್ಲ, ಪರ್ಯಾಯ ಇಲ್ಲ ಎಂದು ನಿಮ್ಮನ್ನು ಇಟ್ಟುಕೊಂಡಿದ್ದಾರೆ. ನೀವು ಭ್ರಷ್ಟ, ಭ್ರಷ್ಟ ಎಂದು ಅಶ್ವತ್ಥನಾರಾಯಣ ಹಂಗಿಸಿದಾಗ ಸಿದ್ದರಾಮಯ್ಯ ಮೌನಕ್ಕೆ
ಶರಣಾದರು. ಸಿದ್ದರಾಮಯ್ಯ ನೆರವಿಗೆ ಧಾವಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಒಬ್ಬ ಮಾಜಿ ಡಿಸಿಎಂ ಆಗಿ ಏನೇನೋ ಮಾತನಾಡುತ್ತೀರಲ್ಲ, ನಿಮಗೇನೂ ಗೊತ್ತಿಲ್ಲ. ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀವು ಮಾತ್ರ ಜ್ಞಾನಿಗಳು. ನಿಮಗೆ ನಾಚಿಕೆಯಾಗಬೇಕು. ಅವರನ್ನು ಸಮರ್ಥನೆ ಮಾಡಿದರೆ ಮುಖ್ಯಮಂತ್ರಿ ಮಾಡುವುದಿಲ್ಲ. ನಿಮ್ಮ ಬುಡ ಗಟ್ಟಿ ಇಟ್ಟುಕೊಳ್ಳಿ ಎಂದು ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು.

ನೀವು ನಿಜಕ್ಕೂ ಡಾಕ್ಟ್ರಾ ?
ಇದರಿಂದ ಸಿಟ್ಟಿಗೆದ್ದ ದಿನೇಶ್‌ ಗುಂಡೂರಾವ್‌, ನೀವು ಮನಸ್ಸಿಗೆ ಬಂದಂತೆ ಮಾತನಾಡಬೇಡಿ. ನಿಮ್ಮ ಹಿನ್ನೆಲೆ ನೋಡಿಕೊಳ್ಳಿ. ನೀವು ನಿಜಕ್ಕೂ ವೈದ್ಯ ಪದವಿ ಪಡೆದಿದ್ದೀರೋ, ಇಲ್ಲವೋ ಎಂಬ ಅನುಮಾನ ಎಂದಾಗ, ನೀವು ಡೆಂಗ್ಯೂ ನಿಯಂತ್ರಣ ಮಾಡಲಾಗದ ಆರೋಗ್ಯ ಸಚಿವ. ವೈಯಕ್ತಿಕ ಟೀಕೆಗೆ ಬರಬೇಡಿ ಎಂದು ಅಶ್ವತ್ಥನಾರಾಯಣ ತಿರುಗೇಟು ನೀಡಿದರು.

ಬಿಎಸ್‌ವೈ ಪ್ರಸ್ತಾವಕ್ಕೆ ಸುನಿಲ್‌ ವಿರೋಧ
ಒಂದೆಡೆ ಈ ವಾಗ್ವಾದ ನಡೆಯುತ್ತಿರುವಾಗ ನಿಮ್ಮ ಮಾಜಿ ಸಿಎಂ ಹಾಗೂ ಮಾಜಿ ರಾಜ್ಯಾಧ್ಯಕ್ಷರ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಿ ಎಂದು ಬಿ.ಎಸ್‌. ಯಡಿಯೂರಪ್ಪನವರ ಹೆಸರು ಉಲ್ಲೇಖೀಸದೇ ಪ್ರಿಯಾಂಕ್‌ ಖರ್ಗೆ, ಯಡಿಯೂರಪ್ಪನವರೂ ಬಂಧನಕ್ಕೆ ಒಳಗಾಗಿದ್ದರು. ಆ ಬಗ್ಗೆ ಮಾತನಾಡಿ ಎಂದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ನಿಮ್ಮ ಡಿಸಿಎಂ ಕೂಡಾ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಭ್ರಷ್ಟಾಚಾರ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next