Advertisement
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಜುಲೈ 2 ರಂದು ನಡೆಯಲಿರುವ ಪ್ರಾಧಿಕಾರ ಹಾಗೂ ಸಮಿತಿಗೆ ರಾಜ್ಯ ಸರ್ಕಾರದಿಂದ ನೇಮಿಸಿರುವ ಪ್ರತಿನಿಧಿಗಳು ಭಾಗವಹಿಸಲು ಅನುಮತಿ ನೀಡಿತು. ಅಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ವಾದ ಮಂಡಿಸಲು ಸೂಚಿಸಲಾಯಿತು.ಪ್ರಾಧಿಕಾರ ಹಾಗೂ ಸಮಿತಿ ರಚನೆ ವಿಚಾರ ಸಂಸತ್‌ನಲ್ಲಿ ಮಂಡನೆಯಾದಾಗ ರದ್ದತಿಗೆ ಆಗ್ರಹಿಸಿ ಪಕ್ಷಬೇಧ ಮರೆತು ರಾಜ್ಯದ ಹಿತ ಕಾಪಾಡಲು ಹೋರಾಟ ಮಾಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಯಿತು.
Related Articles
ಕಾವೇರಿ ವಿಚಾರದಲ್ಲಿ ಸಂಸತ್‌ನಲ್ಲಿ ಎಲ್ಲರೂ ಒಟ್ಟುಗೂಡಿ ಹೋರಾಟ ನಡೆಸಲು ಸಭೆಯಲ್ಲಿ ಒಕ್ಕೊರಲ ನಿರ್ಣಯವಾಗಿದೆ. ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡರು ಸಹ ರಾಜ್ಯದ ಹಿತಾಸಕ್ತಿ ಕಾಪಾಡಲು ನಾವು ಬದ್ಧರಿದ್ಧೇವೆ. ರಾಜ್ಯ ಸರ್ಕಾರದ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ ಎಂದು ಹೇಳಿದ್ದಾರೆ.
Advertisement
ಅದೇ ರೀತಿ ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿರುವ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸಹ ರಾಜ್ಯದ ಹಿತಾಸಕ್ತಿ ಕಾಪಾಡಲು ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೂ ಬೆಂಬಲ ಇದೆ ಎಂದು ತಿಳಿಸಿದ್ದಾರೆ ಎಂದರು.ನ್ಯಾಯಾಲಯಕ್ಕೆ ಸಲ್ಲಿಸುವ ನಮ್ಮ ಮೂಲದಾವೆ ಪ್ರಾಧಿಕಾರ ರಚನೆ ವಿರೋಧಿಸಿ ಅಲ್ಲ. ರಾಜ್ಯದ ನೀರಿನ ಹಕ್ಕು ಪ್ರಾಧಿಕಾರದ ಮೂಲಕ ಕಸಿದುಕೊಳ್ಳಲಾಗಿದೆ. ಇದನ್ನು ನಾವು ಪ್ರಶ್ನಿಸುತ್ತೇವೆ ಎಂದು ಹೇಳಿದರು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ನಮಗೆ ಹದಿನಾಲ್ಕು ಮುಕ್ಕಾಲು ಟಿಎಂಸಿ ನೀರು ಹೆಚ್ಚುವರಿಯಾಗಿ ದೊರೆತಿದೆಯಾದರೂ ನ್ಯಾಯ ಸಿಕ್ಕಿಲ್ಲ. ತರಾತುರಿಯಲ್ಲಿ ನಿರ್ವಹಣಾ ಪ್ರಾಧಿಕಾರ ರಚಿಸಲಾಗಿದೆ. ಹೀಗಾಗಿ, ಮುಖ್ಯಮಂತ್ರಿಯವರು ಪ್ರಧಾನಿ ಹಾಗೂ ಕೇಂದ್ರ ನೀರಾವರಿ ಸಚಿವರ ಭೇಟಿಗೆ ಸಮಯ ಕೇಳಿದ್ದರು. ನೀರಾವರಿ ಸಚಿವರ ಜತೆ ಮಾತನಾಡಿ ನಮ್ಮ ಆಕ್ಷೇಪವನ್ನೂ ತಿಳಿಸಿದ್ದರು ಎಂದು ಹೇಳಿದರು. ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಕೀಲರ ತಂಡ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಸಭೆಯಲ್ಲಿ ಕೆಲವರು ಅಪಸ್ವರ ಎತ್ತಿದರು ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ರೀತಿಯ ಯಾವುದೇ ಪ್ರಸಂಗ ನಡೆಯಲಿಲ್ಲ. ಕೆಲವರು ವೈಯಕ್ತಿಕ ಅಭಿಪ್ರಾಯ ಹೇಳಿದರು. ಆದರೆ, ನಮ್ಮ ಅಧಿಕಾರಿಗಳು, ಕಾನೂನು ತಂಡದ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ. ಅವರೂ ಸಹ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶಹಬ್ಟಾಸ್‌ಗಿರಿ ನೀಡಿದರು.
ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ, ಉಪ ಮುಖ್ಯಮಂತ್ರಿ ಡಾ. ಜಿ,ಪರಮೇಶ್ವರ್, ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರ ವಕೀಲ ಮೋಹನ್ ಕಾತರಕಿ, ಸಂಸದರಾದ ಕೆ.ಎಚ್.ಮುನಿಯಪ್ಪ, ಡಿ.ಕೆ.ಸುರೇಶ್, ಪ್ರತಾಪ್ ಸಿಂಹ, ಕರಡಿ ಸಂಗಣ್ಣ, ಮುದ್ದಹನುಮೇಗೌಡ, ಸಿದ್ದರಾಮಯ್ಯ ಪುತ್ರ ಶಾಸಕ ಡಾ.ಯತೀಂದ್ರ ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿದ್ದರಾಮಯ್ಯ ಗೈರು
ಕಾವೇರಿ ಕುರಿತ ಸರ್ವಪಕ್ಷ ಸಭೆಗೆ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರು ಹಾಜರಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಿಗೂ ಸಭೆಗೆ ಆಹ್ವಾನ ನೀಡಲಾಗಿತ್ತು. ಬೇರೆ ಕಾರ್ಯದ ಒತ್ತಡ ಕಾರಣ ಬರಲು ಸಾಧ್ಯವಾಗದು ಎಂದು ಮೊದಲೇ ಹೇಳಿದ್ದರು ಎಂದು ಸಮಜಾಯಿಷಿ ನೀಡಿದರು. ಎಚ್‌ಡಿಕೆ-ಬಿಎಸ್‌ವೈ ಮುಖಾಮುಖೀ
ಕಾವೇರಿ ಕುರಿತ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮುಖಾಮುಖೀಯಾದರು. ಸಭೆಗೆ ಆಗಮಿಸಿ ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಕೈ ಕುಲುಕಿದರು. ನಂತರ ಇಬ್ಬರೂ ಕೈ ಗಟ್ಟಿಯಾಗಿ ಹಿಡಿದುಕೊಂಡು ಮಾಧ್ಯಮಗಳತ್ತ ನೋಡಿ ಮುಗುಳ್ನಕ್ಕರು. ಜುಲೈ 2 ರಂದು ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಗೆ ರಾಜ್ಯದಿಂದ ನಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ಅಷ್ಟೇ ಅಲ್ಲ, ನಮಗೆ ಆಗಿರುವ ಅನ್ಯಾಯವನ್ನು ಕೇಂದ್ರದ ಮುಂದೆ ಪ್ರತಿಭಟಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.ಅಂತಿಮ ಹಂತದ ನ್ಯಾಯಾಲಯ ಹೋರಾಟದಲ್ಲಿ ಹೇಗೆ ವಾದ ಮಂಡನೆ ಮಾಡಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಗಿದೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿರುವ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಚರ್ಚಿಸಲು ತೀರ್ಮಾನ ಮಾಡಲಾಗಿದೆ. ನಮ್ಮ ಕೇಂದ್ರ ಸಚಿವರೂ ಸಹಕಾರ ನೀಡಲಿದ್ದಾರೆ. ಸಾಧ್ಯವಾದರೆ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠದಲ್ಲೂ ಪ್ರಶ್ನೆ ಮಾಡಲು ಸಿದ್ಧರಿದ್ದೇವೆ. ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೂ ಸಲಹೆ ನೀಡಿದ್ದೇನೆ. ಸಭೆಯಲ್ಲಿ ಉತ್ತಮ ಚರ್ಚೆಯಾಗಿದೆ. ನಾಡು-ನುಡಿ ವಿಚಾರದಲ್ಲಿ ನಾವು ಯಾವಲೂ ಸರ್ಕಾರ ಜತೆ ಇದ್ದೇವೆ.
– ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ