ಧಾರವಾಡ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿ.ಶ್ರೀಶಾನಂದ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಪ್ರಾಧಿಕಾರದ ದ್ವೈಮಾಸಿಕ ಸಭೆ ಸೋಮವಾರ ಸಂಜೆ ಜರುಗಿತು.
ಬಡತನ ನಿವಾರಣೆಗೆ ಸಂಬಂಧಿಸಿದ ಸರಕಾರಿ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವುದು, ಕಾನೂನಿನೊಂದಿಗೆ ಸಂಘರ್ಷಕ್ಕೊಳಪಟ್ಟಿರುವ ಮಕ್ಕಳಿಗೆ ಕಾನೂನು ಅರಿವು ನೀಡುವುದು. ಫೆ.20ರಂದು ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ, ಪೊಲೀಸ್ ದೂರು ಪ್ರಾಧಿಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪ್ರೌಢಶಾಲಾ ಮಕ್ಕಳಿಗೆ ಮೂಲಭೂತ ಕರ್ತವ್ಯಗಳ ಕುರಿತ ಕಾರ್ಯಕ್ರಮ, ವಕೀಲರಿಗೆ ಮತ್ತು ಅರೆ ಕಾನೂನು ಸ್ವಯಂ ಸೇವಕರಿಗೆ ತರಬೇತಿ, ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜನೆ, ಮಾರ್ಚ್ 15 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನ ಅಂಗವಾಗಿ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ಸೂಚಿಸಲಾಯಿತು.
ಮಾರ್ಚ್ 11ರಂದು ಬಿಟ್ಟು ಹೋದ ಎಲ್ಲ ಪ್ರಕರಣಗಳ ಕುರಿತು ಮಾಸಿಕ ಲೋಕ ಅದಾಲತ್ ಕಾರ್ಯಕ್ರಮ ಏರ್ಪಡಿಸುವುದು. ಮಾರ್ಚ್ 22 ರಂದು ವಿಶ್ವ ಜಲದಿನ ಅಂಗವಾಗಿ ನೀರಸಾಗರ ಜಲಾಶಯದ ಹೂಳೆತ್ತಿ ಅಕ್ಕಪಕ್ಕದ ಗ್ರಾಮಗಳ ರೈತರ ಹೊಲಗಳಿಗೆ ಮಣ್ಣು ಸಾಗಿಸುವ ಕಾರ್ಯ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಡಾ|ಎಸ್.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಸ್ನೇಹಲ್ ಆರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರಡ್ಡಿ ಸೇರಿದಂತೆ ಜಿಲ್ಲೆಯ ನ್ಯಾಯಾಧೀಶರು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಎನ್.ಹೆಗಡೆ ಸ್ವಾಗತಿಸಿ, ವಂದಿಸಿದರು.