ಬೆಳ್ತಂಗಡಿ : ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಕಾನೂನು ಮಾಹಿತಿ ಅತ್ಯಗತ್ಯ ಎಂದು ತಾಲೂಕಿನ ಸಿವಿಲ್ ನ್ಯಾಯಾಧೀಶ, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕೆ.ಎಂ. ಆನಂದ ಹೇಳಿದರು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಸಿ.ಆರ್.ಇ. ವತಿಯಿಂದ ಹಮ್ಮಿಕೊಂಡ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನ ಕಾರ್ಯಕ್ರಮದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತರಬೇತಿ ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಹರಿಪ್ರಕಾಶ್ ಪಿ.ಎನ್. ಮಾತನಾಡಿ, ಕೌಟುಂಬಿಕ ದೌರ್ಜನ್ಯಗಳು ಎದುರಾದಾಗ ಕಾನೂನು ರೀತಿಯಲ್ಲಿ ಯಾವ ಕ್ರಮಕೈಗೊಳ್ಳಬಹುದು ಎಂಬುದರ ಕುರಿತು ತಿಳಿಸಿದರು. ವಕೀಲರ ಸಂಘ ಅಧ್ಯಕ್ಷ ಸೇವಿಯರ್ ಪಾಲೇಲಿ ನೀರಿನ ಮಹತ್ವದ ಕುರಿತು ಮಾಹಿತಿ ನೀಡಿದರು.
ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕ ಕೆ. ಬೂದಪ್ಪ ಗೌಡ, ಪ್ರಾಂಶುಪಾಲ ಚಂದ್ರಶೇಖರ್.ಕೆ. ಉಪಸ್ಥಿತರಿದ್ದರು. ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕ ಕಿರಣ್ ಕುಮಾರ್ ಜಿ.ಕೆ., ವಕೀಲರಾದ ನವೀನ್ ಬಿ.ಕೆ., ಮಮ್ತಾಜ್ ಬೇಗಂ, ಆನಂದ, ಶೈಲೇಶ್ ಠೊಸರ್ ಉಪಸ್ಥಿತರಿದ್ದರು. ಗ್ರಾಮೀಣ ಶ್ರೇಷ್ಠತಾ ಕೇಂದ್ರ ಉಪನ್ಯಾಸಕರಾದ ಬಾಲಕೃಷ್ಣ ಅಳಿಕೆ ಕಾರ್ಯಕ್ರಮ ನಿರ್ವಹಿಸಿದರು.
ಮಾಹಿತಿ ಶಿಬಿರ
ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲಸುವಂತಾಗಲು, ಜಾಗೃತ ಸಮಾಜ ನಿರ್ಮಾಣಕ್ಕಾಗಿ ಸಂಘ ಸಂಸ್ಥೆಗಳಿಂದ ಕಾನೂನು ಅರಿವು ಮಾಹಿತಿ ಶಿಬಿರ ಹಮ್ಮಿಕೊಳ್ಳಬೇಕು.
-ಕೆ.ಎಂ. ಆನಂದ
ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ