ಯಾದಗಿರಿ: ಸಮಾಜದಲ್ಲಿ ಉತ್ತಮ ಬದುಕು ನಡೆಸಲು ಪ್ರತಿಯೊಬ್ಬರಿಂದಲೂ ಕಾನೂನು ಪಾಲನೆ ಮಾಡುವುದು ಅತೀ ಅಗತ್ಯವಾಗಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಸದಾನಂದ ಎನ್. ನಾಯಕ ಹೇಳಿದರು.
ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯಾದಗಿರಿ, ಜಿಲ್ಲಾ ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಾಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ| ದೇವಿಂದ್ರಪ್ಪ ಹಳಿಮನಿ ಉಪನ್ಯಾಸ ನೀಡಿ, ಸಮಾಜದಲ್ಲಿ ಸಮಾನತೆ ನೋಡಿಕೊಳ್ಳುವುದೇ ಕಾನೂನಿನ ಮುಖ್ಯ ಧ್ಯೇಯವಾಗಿದೆ. ಅಸ್ಪೃಶ್ಯತೆ, ಜಾತಿಯತೆ ಅನುಸರಿಸಿ ನಡೆದುಕೊಂಡವರು ಅಪರಾಧಕ್ಕೆ ಗುರಿಯಾಗುತ್ತಾರೆ. 16 ವಯಸ್ಸಿನೊಳ್ಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೂ ಬಳಸಿಕೊಳ್ಳುವಂತ್ತಿಲ್ಲ. ಒಂದು ವೇಳೆ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಹಕ್ಕು ಇರುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್. ಮಾಲಿಪಾಟೀಲ ಮಾತನಾಡಿ, ಮಹಿಳೆಯರಿಗೆ ವರದಕ್ಷಿಣೆಯಿಂದ ಕಿರುಕುಳ ತಪ್ಪಿಸುವುದಕ್ಕಾಗಿ 1961ರಲ್ಲಿ ವರದಕ್ಷಿಣೆ ಕಾಯ್ದೆ ಜಾರಿಗೆ ತರಲಾಯಿತು. 2006ರಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆ ಜಾರಿ ಮಾಡಲಾಯಿತು. ಹೀಗಾಗಿ ಮಹಿಳೆಯರಿಗಾಗಿ ಹಲವಾರು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಣಪತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧಿಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಭೀಮರಾಯ ಬಿ. ಕಿಲ್ಲನಕೇರಾ, ವಕೀಲರ ಸಂಘದ ಜಿಲ್ಲಾ ಕಾರ್ಯದರ್ಶಿ ನಿರಂಜನ್ ಸಿ. ಯರಗೋಳ ಇತರರು ಇದ್ದರು. ರುದ್ರಗೌಡ ಸ್ವಾಗತಿಸಿ, ನಿರೂಪಿಸಿದರು.
ಕಾನೂನಲ್ಲಿ ಪ್ರತಿಯೊಬ್ಬರು ಸಮಾಜ ಪ್ರತಿಯೊಬ್ಬ ಮನುಷ್ಯನಿಗೆ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಮಾನ ನ್ಯಾಯ ಸಿಕ್ಕಾಗ ಮಾತ್ರ ನ್ಯಾಯ ಎತ್ತಿ ಹಿಡಿದಂತಾಗುತ್ತದೆ. ಹಕ್ಕುಗಳಿಂದ ವಂಚಿತರಾದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ಸಂವಿಧಾನದ ಮೂಲ ಉದ್ದೇಶವಾಗಿದ್ದು, ಸಮಾಜದ ಮುಖ್ಯವಾಹಿನಿಗೆ ಬರಲು ಪ್ರತಿಯೊಂದು ರಂಗದಲ್ಲಿ ಮಹಿಳೆಯರಿಗೂ ಕೂಡ ಸ್ಥಾನಮಾನ ನೀಡಲಾಗಿದೆ. ಹೆಣ್ಣು-ಗಂಡು ಎಂಬ ಬೇಧ-ಭಾವ ಇಲ್ಲ. ಕಾನೂನಿನಲ್ಲಿ ಪ್ರತಿಯೊಬ್ಬರು ಸಮಾನರಾಗಿದ್ದಾರೆ. ಕಾನೂನು ಜನ ಗೌರವಿಸಿರೆ, ಜನರನ್ನು ಕಾನೂನು ರಕ್ಷಣೆ ಮಾಡುತ್ತದೆ.
ಸದಾನಂದ ಎನ್. ನಾಯಕ, ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ