Advertisement

ಪ್ರಗತಿಗೆ ಕಾನೂನು ಅರಿವು ಮುಖ್ಯ

03:21 PM Nov 10, 2017 | Team Udayavani |

ದಾವಣಗೆರೆ: ಪ್ರತಿಯೊಬ್ಬರಿಗೂ ಕಾನೂನು ಸವಲತ್ತು ನೀಡುವ, ಕಾನೂನು ಅರಿವು ಮೂಡಿಸುವ ಜವಾಬ್ದಾರಿ ನ್ಯಾಯಾಲಯ, ವಕೀಲರದ್ದು ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಶ್ರೀದೇವಿ ಹೇಳಿದ್ದಾರೆ.

Advertisement

ಗುರುವಾರ ರಾ.ಲ. ಕಾನೂನು ಕಾಲೇಜಿನಲ್ಲಿ ಕಾನೂನು ಸೇವಾ ದಿನಾಚರಣೆ ಉದ್ಘಾಟಿಸಿ, ಮಾತನಾಡಿದ ಅವರು, ಕಾನೂನು ಅರಿವು-ಜಾಗೃತಿ ಮೂಡಿಸುವ ಜೊತೆಗೆ ಪ್ರತಿಯೊಬ್ಬರಿಗೂ ಕಾನೂನು ಸವಲತ್ತು, ನೆರವು ಸಿಗುವಂತೆ ಮಾಡುವುದು ನ್ಯಾಯಾಲಯ, ವಕೀಲರ ಕೈಯಲ್ಲಿದೆ ಎಂದರು. ದೇಶ ಎಲ್ಲಾ ರಂಗದಲ್ಲಿ ಪ್ರಗತಿ ಸಾಧಿಸಬೇಕಾದರೆ ಕಾನೂನು ಅರಿವು ಮುಖ್ಯ. ಈ ನಿಟ್ಟಿನಲ್ಲಿ ಪ್ರತೀ ಮನೆ ಬಾಗಿಲಿಗೆ ಕಾನೂನು ಅರಿವು ಮೂಡಿಸುವ ಹೊಣೆಗಾರಿಕೆ ನ್ಯಾಯಾಂಗ, ವಕೀಲರ ಮೇಲಿದೆ ಎಂದ ಅವರು, ಇಂದು ದೇಶದಲ್ಲಿ ಲಿಂಗಾನುಪಾತ ಅಂತರ ಇದೆ. ಇದಕ್ಕೆ ಭ್ರೂಣಹತ್ಯೆ ಪ್ರಮುಖ ಕಾರಣವಾಗಿದೆ. ಭ್ರೂಣ ಹತ್ಯೆಗೆ ಕಾರಣವಾಗಿರುವುದು ಜನರಲ್ಲಿ ಇರುವ ಜಾಗೃತಿ ಕೊರತೆ ಜೊತೆಗೆ ಕಾನೂನಿನಲ್ಲಿರುವ ಶಿಕ್ಷೆ ಕುರಿತು ತಿಳಿವಳಿಕೆ ಇಲ್ಲದ್ದು. ಸಂವಿಧಾನ ಸರ್ವರಿಗೂ ಸಮಬಾಳು, ಸಮ ಪಾಲು ಎಂದು ಹೇಳುತ್ತದೆ. ಆದರೆ, ಇದುವರೆಗೆ ಆಶಯ ಈಡೇರಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಈವರೆಗೆ ಜಾರಿಯಾಗಿಲ್ಲ.
ಸ್ತ್ರಿ, ಮಕ್ಕಳ ಮೇಲಿನ ದೌರ್ಜನ್ಯ ಇದುವರೆಗೆ ತಡೆಯಲಾಗಿಲ್ಲ ಎಂದು ಅವರು ಹೇಳಿದರು. 

ಇದೀಗ ಮನೆ ಮನೆಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ಉದ್ದೇಶ ಎಲ್ಲರಿಗೂ ಕಾನೂನು ಮಾಹಿತಿ ತಲುಪಬೇಕು. ಸರ್ಕಾರದಿಂದ ಕಾನೂನಾತ್ಮಕವಾಗಿ ಸಿಗುವ ಸವಲತ್ತುಗಳನ್ನು ಕೊಡಿಸಿಕೊಡಬೇಕು. ಶೋಷಣೆಗೆ ಒಳಗಾದವರಿಗೆ  ಅಗತ್ಯವಿರುವ ಕಾನೂನು ಸವಲತ್ತು ನೀಡಬೇಕು. ಆ ಮೂಲಕ ಸುಸ್ಥಿರ ಸಮಾಜ ನಿರ್ಮಾಣ ಮಾಡಬೇಕೆಂಬುದಾಗಿದೆ
ಎಂದು ಅವರು ತಿಳಿಸಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣ್‌ಕುಮಾರ್‌ ಮಾತನಾಡಿ, ಕಾನೂನು ಕಾಲೇಜು,
ನ್ಯಾಯಾಲಯಗಳು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಎರಡೂ ಸಂಸ್ಥೆಗಳು ಸೇರಿಕೊಂಡು ದೇಶಾದ್ಯಂತ ಕಾನೂನು ಅರಿವು ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ಕೆ 50 ವಿದ್ಯಾರ್ಥಿಗಳನ್ನು ಮನೆ ಮನೆಗೆ ತೆರಳಿ ಕಾನೂನು ಅರಿವು ಮೂಡಿಸಲು ಬಳಕೆ  ಮಾಡಿಕೊಳ್ಳಲಾಗುತ್ತಿದೆ. ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಗುರುತಿಸಿ, ನೀಡಿರುವುದು ಶ್ಲಾಘನೀಯ ಎಂದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ವಾರದ ಕಾಲ ಮನೆ ಮನೆಗೆ ನಮ್ಮ ತಂಡ ತೆರಳಲಿದೆ. 7 ಗಂಪುಗಳನ್ನು ಅದಕ್ಕಾಗಿ ರಚಿಸಲಾಗಿದೆ. 10 ಜನರ ತಂಡ ಮನೆ ಮನೆಗೆ ತೆರಳಿ, ಕಾನೂನು ಅರಿವು ಮೂಡಿಸಲಿದೆ. ಯಾವುದೇ ಸಮಸ್ಯೆ ಇದ್ದರೂ ಅವರಿಗೆ ನೆರವು ನೀಡಲಿದ್ದಾರೆ. ಯಾರೂ ಸಹ ನ್ಯಾಯದಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶ ಎಂದರು.

Advertisement

ಪ್ರಾಂಶುಪಾಲ ಡಾ| ಬಿ.ಎಸ್‌. ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ಧಪ್ಪ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ಎಲ್‌. ಜಿನಾರಾಳ್ಕರ್‌ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next