Advertisement

ನೇತ್ರದಾನಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಿ

03:17 PM Sep 06, 2019 | Team Udayavani |

ಯಾದಗಿರಿ: ಮರಣ ಹೊಂದಿದ ಮೇಲೂ ನಾವು ಜಗತ್ತು ನೋಡಬೇಕಾದರೆ ಪ್ರತಿಯೊಬ್ಬರೂ ನೇತ್ರದಾನಕ್ಕೆ ಸಂಕಲ್ಪ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾಚಪ್ಪ ಕೆ. ತಾಳಿಕೋಟಿ ಕರೆ ನೀಡಿದರು.

Advertisement

ನಗರದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನೇತ್ರದಾನದ ಮಹತ್ವ, ಮಾನಸಿಕ ಆರೋಗ್ಯ ಮತ್ತು ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಹ ಸದೃಢ ಇದ್ದರಷ್ಟೇ ಸಾಲದು. ಮಾನಸಿಕ ಆರೋಗ್ಯವೂ ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವಿಸಿ ದೇಹದ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೆಟ್ಟ ಹವ್ಯಾಸಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್‌. ಪಾಟೀಲ ಮಾತನಾಡಿ, ಮಹಿಳೆ ಗರ್ಭ ಧರಿಸಿದ ದಿನದಿಂದಲೂ ಅವರಿಗೆ ಪೌಷ್ಟಿಕ ಆಹಾರ ಕೊಡಬೇಕು. ಇದರಿಂದ ಆರೋಗ್ಯವಂತ ಮಗು ಜನಿಸಲು ಸಾಧ್ಯ. ಕಾಲಕಾಲಕ್ಕೆ ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕು. ಸುಖ ಸಂಸಾರಕ್ಕೆ 1 ಅಥವಾ 2 ಮಕ್ಕಳು ಸಾಕು ಎಂಬುದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ| ಭಗವಂತ ಅನವಾರ ಮಾತನಾಡಿ, ಜಿಲ್ಲೆಯಲ್ಲಿ 34ನೇ ರಾಷ್ಟ್ರೀಯ ನೇತ್ರದಾನದ ಪಾಕ್ಷಿಕ ದಿನವನ್ನು ಆಗಸ್ಟ್‌ 25ರಿಂದ ಸೆಪ್ಟೆಂಬರ್‌ 8ರ ವರೆಗೆ ಆಚರಿಸಲಾಗುತ್ತಿದೆ. ನೇತ್ರದಾನಕ್ಕೆ ವಯೋಮಿತಿ ಇಲ್ಲ. ವ್ಯಕ್ತಿಯ ಮರಣದ 4-5 ಗಂಟೆಯೊಳಗೆ ನೇತ್ರ ಸಂಗ್ರಹಿಸಲಾಗುವುದು. ನೇತ್ರ ಸಂಗ್ರಹಣೆಗೆ ಕೇವಲ 20 ನಿಮಿಷ ಸಾಕು. ಒಬ್ಬ ವ್ಯಕ್ತಿ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ನೀಡುತ್ತವೆ. ನೇತ್ರ ಸಂಗ್ರಹಣೆ ನಂತರ ಮೃತರ ಮುಖ ವಿಕಾರವಾಗುವುದಿಲ್ಲ. ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು, ಯಾವುದೇ ಭೇದ-ಭಾವವಿಲ್ಲದೆ ಎಲ್ಲರೂ ನೇತ್ರದಾನ ಮಾಡಬಹುದು ಎಂದು ವಿವರಿಸಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಮಾತನಾಡಿ, ಸೆಪ್ಟೆಂಬರ್‌ ತಿಂಗಳಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಹಾಗೂ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ. ಪೌಷ್ಟಿಕ ಆಹಾರ ಕುರಿತಂತೆ ಅಂಗನವಾಡಿಗಳಲ್ಲಿ ಈ ಮೊದಲು ಗರ್ಭಿಣಿಯರಿಗೆ ಮಾತ್ರ ಮಾಹಿತಿ ಕೊಡಲಾಗುತ್ತಿತ್ತು. ಈಗ ಗರ್ಭಿಣಿ ಪತಿ, ಅತ್ತೆ, ಮಾವಂದಿರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ ಸಂಪನ್ಮೂಲ ವ್ಯಕ್ತಿ ಡಾ| ಉಮೇಶ, ಆಲೋಚನೆ, ಭಾವನೆ, ನಡವಳಿಕೆ ಚೆನ್ನಾಗಿದ್ದರೆ ಮಾನಸಿಕವಾಗಿ ಆರೋಗ್ಯದಿಂದಿರಲು ಸಾಧ್ಯ. ಮಾನಸಿಕ ಕಾಯಿಲೆ ಬರಲು ಶ್ರೀಮಂತ, ಬಡವ, ಉದ್ಯೋಗಿ, ನಿರುದ್ಯೋಗಿ ಎಂದು ಭೇದ ಇಲ್ಲ. ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಒತ್ತಡ ನಿರ್ವಹಣೆ ಕೌಶಲ ಬೆಳೆಸಿಕೊಂಡರೆ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ಮೊಬೈಲ್ ಬಳಕೆ ಮಾಡಬಾರದು ಮತ್ತು ಮಾದಕ ವಸ್ತುಗಳನ್ನು ಸೇವಿಸಬಾರದು ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಕ್ಯಾತನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮನೋಚೈತನ್ಯ ಕಾರ್ಯಕ್ರಮದಡಿಯಲ್ಲಿ 1ನೇ ಮಂಗಳವಾರ ಶಹಾಪುರ, 2ನೇ ಮಂಗಳವಾರ ಸುರಪುರ, 3ನೇ ಮಂಗಳವಾರ ಗುರುಮಠಕಲ್, 4ನೇ ಮಂಗಳವಾರ ಹುಣಸಗಿ ಹಾಗೂ 1ನೇ ಶುಕ್ರವಾರ ವಡಗೇರಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾನಸಿಕ ತಜ್ಞರಿಂದ ಸಲಹೆ, ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಕೆ. ಸಾಲಮಂಟಪಿ, ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ, ಸಿವಿಲ್ ನ್ಯಾಯಾಧೀಶ ಲೋಕೇಶ ಧನಪಾಲ ಹವಲೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ಮೀತಾ ಮಾಲಗಾಂವೆ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್‌. ಮಾಲಿಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜೆ. ಮಣ್ಣೂರು ಇದ್ದರು.

ವಕೀಲರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಾರ್ವತಿ ಪ್ರಾರ್ಥಿಸಿದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ನಾಗಯ್ಯ ಗುತ್ತೇದಾರ ಸ್ವಾಗತಿಸಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ವಿನಯಕುಮಾರ ಕುಲಕರ್ಣಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next