ಬೆಂಗಳೂರು: ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿಗೊಳಿಸಲು ರೈತರನ್ನು ಗುಂಪು ಕೃಷಿ ಪದ್ಧತಿಗೆ ಒಳಪಡಿಸಲು ಸೂಕ್ತ ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಚಿಂತಿಸಿದೆ. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಶಿವಶಂಕರ ರೆಡ್ಡಿ, ರಾಜ್ಯದಲ್ಲಿ ಈ ಪದ್ಧತಿ ಜಾರಿಗೊಳಿಸಲು ಇಸ್ರೇಲ್ ತಂತ್ರಜ್ಞಾನ ಮಿಷನ್ ಸ್ಥಾಪಿಸಲಾಗಿದ್ದು, ಐಎಎಸ್ ಅಧಿಕಾರಿ ಮನೋಜ್ ರಾಜನ್ ಅವರನ್ನು ಮಿಷನ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಈ ವ್ಯವಸ್ಥೆ ಜಾರಿಗೆ ತರುವ ಕುರಿತಂತೆ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದ್ದು, ಮುಂಬರುವ ಅಧೀವೇಶನದಲ್ಲಿ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಲು ಕೋಲಾರ, ಚಿತ್ರದುರ್ಗ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ 5 ಸಾವಿರ ಹೆಕ್ಟೇರ್ ಒಣ ಭೂಮಿಯಲ್ಲಿ ನೀರಾವರಿ ಸೌಲಭ್ಯ ಒದಗಿಸಲು 145 ಕೋಟಿ ರೂ.ಒದಗಿಸಲಾಗಿದೆ ಎಂದರು.
ಈ ಮಾದರಿಯ ಕೃಷಿ ಪದ್ಧತಿ ಅಳವಡಿಸಲು ರೈತರು ಗುಂಪು ಕೃಷಿ ವ್ಯವಸ್ಥೆಗೆ ಒಪ್ಪಿಗೆ ನೀಡಬೇಕು. ಈ ನಿಟ್ಟಿನಲ್ಲಿ ರೈತರ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ರೈತರು 2 ರಿಂದ 3 ಸಾವಿರ ಎಕರೆ ಪ್ರದೇಶದಲ್ಲಿ ಇಸ್ರೇಲ್ ಮಾದರಿಯ ಗುಂಪು ಕೃಷಿ ಪದ್ಧತಿಗೆ ಒಪ್ಪಿಗೆ ನೀಡಿದರೆ, ಅಂತಹ ಪ್ರದೇಶದಲ್ಲಿ ಉದ್ದಿಮೆದಾರರು ತಂತ್ರಜ್ಞಾನ ಬಳಕೆಗೆ ಬಂಡವಾಳ ಹೂಡುತ್ತಾರೆ. ಅಲ್ಲದೇ ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿ ಮಾಡಿ ಮಾರುಕಟ್ಟೆ ವ್ಯವಸ್ಥೆಯನ್ನೂ ಅವರೇ ಒದಗಿಸುತ್ತಾರೆ. ಇದರಿಂದ ರೈತರ ಬೆಳೆಗೆ ಸೂಕ್ತ ಬೆಲೆಯೂ ಸಿಗುತ್ತದೆ ಎಂದರು.
ರಾಮಥಾಳ ಮಾದರಿ: ವಿಜಯಪುರ ಜಿಲ್ಲೆಯ ರಾಮಥಾಳದಲ್ಲಿ ಹನಿ ನೀರಾವರಿ ಅಳವಡಿಸುವ ಮೂಲಕ ಕಡಿಮೆ ನೀರು ಬಳಸಿ ಕೃಷಿ ಮಾಡುವ ಪದ್ಧತಿ ಜಾರಿಗೊಳಿಸಲಾಗಿದೆ. ಆದರೆ, ಬೆಳೆ ಪದ್ಧತಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಶೀಘ್ರವೇ ಅಲ್ಲಿಗೆ ಭೇಟಿ ನೀಡಿ, ಇಸ್ರೇಲ್ ಮಾದರಿ ಪದ್ಧತಿಯಲ್ಲಿಯೇ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಪರ್ಯಾಯ ಬೆಳೆ ವಿಮಾ ಯೋಜನೆಗೆ ಚಿಂತನೆ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಿಂದ ರೈತರಿಗಿಂತ ವಿಮಾ ಕಂಪನಿಗಳಿಗೆ ಹೆಚ್ಚಿನ ಲಾಭವಾಗುತ್ತಿರುವುದರಿಂದ ಆ ಯೋಜನೆಯನ್ನು ಕೈ ಬಿಟ್ಟು ರಾಜ್ಯ ಸರ್ಕಾರವೇ ಪರ್ಯಾಯ ಬೆಳೆ ವಿಮಾ ಯೋಜನೆ ಜಾರಿಗೆ ಚಿಂತನೆ ನಡೆಸಿದೆ ಎಂದು ಶಿವಶಂಕರ ರೆಡ್ಡಿ ಹೇಳಿದರು. ಅದಕ್ಕಾಗಿ ಬಿಹಾರ ಮಾದರಿ ಅಳವಡಿಕೊಳ್ಳಲು ಅಧಿಕಾರಿಗಳ ತಂಡ ಕಳುಹಿಸಿಕೊಡಲಾಗಿತ್ತು.
ಆದರೆ, ಬಿಹಾರದಲ್ಲಿ ಕೇವಲ ಭತ್ತ ಹಾಗೂ ಮುಸುಕಿನ ಜೋಳಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆ ಪದ್ಧತಿ ನಮ್ಮ ರಾಜ್ಯಕ್ಕೆ ಅನ್ವಯಿಸಲು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪರ್ಯಾಯ ಬೆಳೆ ವಿಮಾ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ರೈತರಿಗೆ ಇಸ್ರೇಲ್ ಪದ್ಧತಿ ಬಗ್ಗೆ ಮನವರಿಕೆ ಮಾಡಿಕೊಡಲು ಶೀಘ್ರವೇ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಜಿಲ್ಲೆಗಳ ರೈತರೊಂದಿಗೆ ಸಂವಾದ ನಡೆಸಲು ಗ್ರಾಮ ವಾಸ್ತವ್ಯ ಕೈಗೊಳ್ಳಲಾಗುವುದು.
-ಮನೋಜ್ ರಾಜನ್, ಇಸ್ರೇಲ್ ಟೆಕ್ನಾಲಜಿ ಮಿಷನ್ ನಿರ್ದೇಶಕ
ಸೋಯಾಬಿನ್ ಹಾಗೂ ಕಡಲೆ ಬೀಜಗಳಿಗೆ ಬಣ್ಣ ಹಾಗೂ ರಾಸಾಯನಿಕ ಬಳಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜೀವ ವೈವಿಧ್ಯ ಹಾಗೂ ಮಣ್ಣಿಗೂ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಬೆಂಗಳೂರಿನ ಜಿಕೆವಿಕೆ ಈ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಕೃಷಿ ಇಲಾಖೆಯಲ್ಲಿ ಈ ಪ್ರಯೋಗ ಮಾಡಲಾಗುತ್ತಿದೆ.
-ಬ್ರಿಜೇಶ್ ಕುಮಾರ್ ದೀಕ್ಷಿತ್, ಕೃಷಿ ಇಲಾಖೆ ಆಯುಕ್ತ