ದೊಡ್ಡಬಳ್ಳಾಪುರ: ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಕಳುಹಿಸುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.
ನಗರದ ಗುರುರಾಜ ಕಲ್ಯಾಣ ಮಂದಿರದಲ್ಲಿ ಈದ್ ಮಿಲಾದ್ ಹಾಗೂ ಅಯೋಧ್ಯೆ ವಿವಾದದ ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿ ಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಿವಿಧ ಸಮುದಾಯದ ಮುಖಂಡರು, ಸಂಘಟನೆಗಳ ಪದಾಕಾರಿಗಳ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡುವ ಮೂಲಕ ಸಮಾಜದಲ್ಲಿ ಅಶಾಂತಿಗೆ ಮುಂದಾದರೆ ಯಾವುದೇ ಕಾರಣಕ್ಕು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಮೊಬೈಲ್ ಬಳಕೆದಾರರು ತಮ್ಮ ವಾಟ್ಸಆ್ಯಪ್, ಪೇಸ್‌ಬುಕ್‌ಗಳಿಗೆ ಸುಳ್ಳು ಸುದ್ದಿಗಳು ಹರಿದು ಬಂದರೆ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿ. ಸಾರ್ವಜನಿಕವಾಗಿ ಯಾವುದೇ ಹಬ್ಬ, ಆಚರಣೆಗಳನ್ನು ಮಾಡುವಂತಹ ಸಂದರ್ಭದಲ್ಲಿ ಆಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖರ ಪಟ್ಟಿಯನ್ನು ಪೊಲೀಸ್ ಠಾಣೆಗೆ ನೀಡುವ ಮೂಲಕ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು.
ಎಲ್ಲಾ ಸಮುದಾಯದ ಧಾರ್ಮಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದರಿಂದ ಕಳ್ಳತನಗಳನ್ನು ತಡೆಯಲು ಹಾಗೂ ಕಾನೂನು ತೊಡಕುಗಳು ಬಂದ ಸಂದರ್ಭದಲ್ಲೂ ಬಗೆಹರಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.ಎಲ್ಲಾ ಸಮುದಾಯದ ಹಿರಿಯರು ಸರಿ ತಪ್ಪುಗಳ ಕುರಿತು ಯುವಕರಿಗೆ ತಿಳಿ ಹೇಳಬೇಕು.ಇತ್ತೀಚೆಗೆ ಮೋಟಾರು ವಾಹನ ಕಾಯಿದೆಯಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಜಾರಿಗೆ ಬಂದಿವೆ.
ಇವುಗಳ ಬಗ್ಗೆ ಎಲ್ಲರು ತಿಳಿದುಕೊಳ್ಳಬೇಕು. ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಸೇರಿದಂತೆ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾದರೆ ಗಂಭೀರ ಶಿಕ್ಷೆ, ದಂಡ ಪಾವತಿಸುವುದು ಅನಿವಾರ್ಯವಾಗಲಿದೆ ಎಂದರು. ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗದಿಂದ ನ12ರಂದು ನಗರದಲ್ಲಿ ಒನಕೆ ಓಬವ್ವ ಪಡೆ, ನಾಗರಿಕ ಬಂದೂಕು ತರಬೇತಿ, ಟ್ರಾಫಿಕ್ ವಾರ್ಡನ್, ವಾಲ್ ಆಫ್ ಯೂನಿಟಿ ಸ್ಥಾಪನೆ ಮಾಡಲಾಗುತ್ತಿದೆ. ಎಂದರು.
ದೇಶದ ಅಥವಾ ವಿಶ್ವದ ಯಾವುದೋ ಭಾಗದಲ್ಲಿ ನಡೆಯುವ ಘಟನೆಗಳಿಗೆ ಇಲ್ಲಿ ಪ್ರತಿಕ್ರಿಯೆ ನೀಡುವಂತಹ ಕೆಲಸ ತಪ್ಪು. ಪೊಲೀಸ್ ಇಲಾಖೆಗೆ ಸರ್ವರೂ ಸಮಾನರು. ಈದ್‌ಮಿಲಾದ್ ರಾಮಜನ್ಮ ಭೂಮಿ ವಿವಾದದ ತೀರ್ಪು ಬರಬಹುದಾದ ಹಿನ್ನೆಲೆ ಎಲ್ಲರು ಒಟ್ಟಾಗಿ ನ್ಯಾಯಾಲಯದ ತೀರ್ಪನ್ನು ಗೌರವಿಸುವ ಮೂಲಕ ಶಾಂತಿ ಕಾಪಾಡಬೇಕಿದೆ ಎಂದರು.
ನ 11ರ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಏಕಮುಖ ವಾಹನ ನಿಲುಗಡೆಗೆ ಕಾರ್ಯಾರಂಭ ಮಾಡುತ್ತಿದ್ದು ಸಾರಿಗೆ ನಿಯಮದ ಕುರಿತು ಜಾಗೃತಿ ಮೂಡಿಸಲಾಗಿದೆ. ಮುಂದಿನ ಹಂತ ನಿಯಮ ಉಲ್ಲಂಘಿಸಿದರೆ ದಂಢ ಅನಿರ್ವಾರ್ಯ ಎಂದು ಎಚ್ಚರಿಸಿದರು.
ಡಿವೈಎಎಸ್ಪಿ ಟಿ.ರಂಗಪ್ಪ ಮಾತನಾಡಿ, ಎಲ್ಲಾ ಧರ್ಮಗಳು ಸಮಾಜಕ್ಕೆ ಶಾಂತಿಯನ್ನು ಬೋಧಿಸಿವೆ. ಆದರೆ ಕೆಲ ಕಿಡಿಗೇಡಿಗಳು ಹುಚ್ಚು ಕಲ್ಪನೆಯಿಂದ ವೈಮನಸ್ಯ ಸೃಷ್ಟಿಸಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿವೆ. ಸಾಮಾಜಿಕ ಜಾಲತಾಣವನ್ನು ನಾಗರೀಕರು ಎಚ್ಚರಿಕೆಯಿಂದ ಬಳಸಬೇಕು, ಯಾವುದೇ ಸಂಗತಿಯನ್ನು ವಿಮರ್ಶಿಸಿ ತಿಳಿದುಕೊಂಡ ನಂತರವೇ ಅದಕ್ಕೆ ಪ್ರತರಿಕ್ರಿಯಿಸಬೇಕೆ ಹೊರತು ಭಾವಾವೇಷಕ್ಕೆ ಒಳಗಾಗಬಾರದು ಎಂದರು.