ಬೆಂಗಳೂರು: ಕೊವಿಡ್-19 ಸೋಂಕು ಹಿನ್ನೆಲೆ ಆಸ್ಪತ್ರೆಗಳಲ್ಲಿ ಅತ್ಯವಶ್ಯಕ ಸೇವೆ ಸಲ್ಲಿಸುತ್ತಿರುವ ವೈದ್ಯರು ಸೇರಿದಂತೆ ಆರೋಗ್ಯ ವಲಯದ ಸಿಬ್ಬಂದಿಗಳು ವಾಸ ಮಾಡುತ್ತಿರುವ ಬಾಡಿಗೆ ಮನೆಗಳನ್ನು ಕೂಡಲೇ ಖಾಲಿ ಮಾಡುವಂತೆ ಮನೆ ಮಾಲೀಕರು ಒತ್ತಡ ಹೇರುತ್ತಿದ್ದು, ಇಂತಹವರ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ರಾಜ್ಯದಲ್ಲಿ ಕೋವಿಡ್-19 ಸೋಂಕು ವ್ಯಾಪಿಸುತ್ತಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ನರ್ಸ್ ಗಳು, ಆಸ್ಪತ್ರೆ ಸಿಬ್ಬಂದಿಗಳು ಶಂಕಿತರ ತಪಾಸಣೆ, ಸೋಂಕಿತರ ಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ.
ಎಲ್ಲಾ ಫಾರ್ಮಸಿಟಿಕಲ್ ಸಿಬ್ಬಂದಿ ಔಷಧ ವಿತರಣೆಯಲ್ಲಿ ತೊಡಗಿದ್ದಾರೆ. ಆದರೆ, ಇಂತಹ ಆರೋಗ್ಯ ವಲಯದ ಸಿಬ್ಬಂದಿಗಳು ವಾಸ ಮಾಡುತ್ತಿರುವ ಬಾಡಿಗೆ ಮನೆಗಳ ಮಾಲೀಕರು “ನೀವು ಸೋಂಕಿತರೊಂದಿಗೆ ಇದ್ದು ಬರುತ್ತೀರಾ, ನಮಗೂ ಸೋಂಕು ತಗುಲಬಹುದು, ನಮ್ಮ ಮನೆ ಖಾಲಿ ಮಾಡಿ” ಎಂದು ತಕರಾರು ತೆಗೆಯುತ್ತಿದ್ದಾರೆ. ಈ ವೇಳೆ ಆರೋಗ್ಯ ವಲಯದ ಸಿಬ್ಬಂದಿಗಳು ತಾವು ತೆಗೆದುಕೊಂಡ ಸುರಕ್ಷತಾ ಕ್ರಮಗಳ ಬಗ್ಗೆ ಎಷ್ಟೇ ಮಾಹಿತಿ ನೀಡಿ, ಮನವರಿಕೆ ಮಾಡಿದರೂ ಮಾಲೀಕರು ಒಪ್ಪದೇ ಕೂಡಲೇ ಬಾಡಿಗೆ ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. ಇದರಿಂದ ಆರೋಗ್ಯ ವಲಯದ ಸಿಬ್ಬಂದಿಗಳು ಕಂಗಾಲಾಗಿದ್ದು, ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ.
ಇಂತಹ ವಸತಿ ಮಾಲೀಕರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ಕಾಯಿಲೆ (ಕೋವಿಡ್ -19) ಕಾಯ್ದೆ- 2020 ಅಡಿ ಕೂಡಲೇ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು, ಪಾಲಿಕೆಗಳ ಆಯುಕ್ತರು, ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಿಗರ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸೂಚನೆ ನೀಡಿದ್ದಾರೆ.
ಜತಗೆ ಇಂತಹ ಪ್ರಕರಣಗಳ ಕುರಿತು ರಾಜ್ಯ ಗೃಹ ಇಲಾಖೆಗೆ ನಿತ್ಯ ವರದಿ ನೀಡುವಂತೆ ಆದೇಶಿಸಿದ್ದಾರೆ.