ಬೆಂಗಳೂರು:ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಕಾನೂನು ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ವಿಚಾರವಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೂ ಆ ಬಗ್ಗೆ ನಿರ್ದೇಶನ ನೀಡಲಾಗಿದ್ದು ಅವರು ಸೂಕ್ತ ಕ್ರಮ ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಯಾವುದೇ ರೀತಿಯ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡುವುದಿಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಲಿದೆ ಎಂದು ತಿಳಿಸಿದರು.
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಕಾವಲ್‌ನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಸಂಚಕಾರ ಎದುರಾಗಿದೆ. ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ವಯ ಗಣಿಗಾರಿಕೆ ಮೇಲೆ ಸಂಪೂರ್ಣ ನಿಷೇಧ ಹೇರುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹೀಗಾಗಿ ಜಿಲ್ಲೆಯ ಜನರ ಧ್ವನಿಯಾಗಿ ಇಂದಿನಿಂದ “ಕೆಆರ್‌ಎಸ್ ಉಳಿಸಿ’ ಸರಣಿ ವರದಿ ಪ್ರಕಟಿಸಿತ್ತು.
ಕೃಷ್ಣ ರಾಜಸಾಗರ ಜಲಾಶಯ ವ್ಯಾಪ್ತಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಸಹ ಹೊರಡಿಸಿದ್ದರು.