ಬೆಂಗಳೂರು: ಕೋವಿಡ್-19ಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮೇಲ್ವಿಚಾರಣ ಸಮಿತಿ ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ಕೋರ್ಟ್ ಸಿಬಂದಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ್ ಸೂಚನೆ ಹೊರಡಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಎ.21ರಂದು ಸುತ್ತೋಲೆ ಹೊರಡಿಸಿದ್ದ ಹೈಕೋರ್ಟ್ ತನ್ನ ಎಲ್ಲ ಸಿಬಂದಿಗೆ ಸುರಕ್ಷತೆ ದೃಷ್ಟಿಯಿಂದ ಕೆಲವು ಸಲಹೆ ಮತ್ತು ಸೂಚನೆಗಳನ್ನು ನೀಡಿತ್ತು. ಈ ಸಲಹೆ, ಸೂಚನೆಗಳನ್ನು ಹೈಕೋರ್ಟ್ ಸಹಿತ ರಾಜ್ಯದ ಎಲ್ಲ ನ್ಯಾಯಾಲಯಗಳ ಅಧಿಕಾರಿಗಳು ಮತ್ತು ಸಿಬಂದಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿತ್ತು.
ಈಗ ಮತ್ತೊಂದು ಸುತ್ತೋಲೆ ಹೊರಡಿಸಿರುವ ಹೈಕೋರ್ಟ್ ಈ ಹಿಂದೆ ತಿಳಿಸಿರುವ ಸೂಚನೆಗಳನ್ನು ಅಧಿಕಾರಿಗಳು ಅಥವಾ ಸಿಬಂದಿ ಉಲ್ಲಂಘಿಸಿದರೆ ಅದನ್ನು ಸೇವಾ ದುರ್ನಡತೆ ಎಂದು ಪರಿಗಣಿಸಿ ಕಾನೂನು ರೀತಿ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದೆ.
ಅದೇ ರೀತಿ ಮಾ.24ರಂದು ಹೊರಡಿಸಲಾಗಿದ್ದ ಮೊದಲ ಸೂಚನೆಯಲ್ಲಿ ರಾಜ್ಯದ ಎಲ್ಲ ನ್ಯಾಯಾಲಯಗಳ ಅಧಿಕಾರಿಗಳು ಮತ್ತು ಸಿಬಂದಿ ತಮ್ಮ ಕಾರ್ಯಕ್ಷೇತ್ರ (ಕೆಲಸದ ಸ್ಥಳ)ದಿಂದ ಹೊರಹೋಗಬಾರದು ಎಂದು ಸೂಚಿಸಲಾಗಿತ್ತು. ಈಗ ಹೊರಡಿಸಿರುವ ಸೂಚನೆಯಲ್ಲಿ “ಒಂದು ವೇಳೆ ನ್ಯಾಯಾಲಯದ ಅಧಿಕಾರಿಗಳು ಅಥವಾ ಸಿಬಂದಿ ರಜೆ ಮತ್ತಿತರ ಕಾರಣಗಳಿಂದಾಗಿ ಹೊರಹೋಗಿದ್ದರೆ ಕೆಲಸಕ್ಕೆ ಹಾಜರಾಗುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡ ಬೇಕು. ಅನಂತರವಷ್ಟೇ ಕೆಲಸಕ್ಕೆ ಹಾಜರಾಗಬೇಕು ಎಂದು ಸೂಚಿಸಲಾ ಗಿದೆ. ಜಿಲ್ಲಾ ನ್ಯಾಯಾಲಯಗಳ ಅಧಿಕಾರಿಗಳು ಆಯಾ ಜಿಲ್ಲಾ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಬೇಕು. ಅದೇ ರೀತಿ ಹೈಕೋರ್ಟ್ ಅಧಿಕಾರಿ ಮತ್ತು ಸಿಬಂದಿ ಹೈಕೋರ್ಟ್ ಆವರಣದಲ್ಲಿರುವ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಬೇಕು. ಅಗತ್ಯ ಬಿದ್ದರೆ 14 ದಿನ ಹೋಂ ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.