Advertisement

ಎಡ-ಐಕ್ಯರಂಗಗಳಿಗೆ ಮತದಾರರಿಂದ ತಕ್ಕ ಶಾಸ್ತಿ: ಕೆ.ಪಿ. ಶ್ರೀಶನ್‌ 

01:00 AM Mar 08, 2019 | Team Udayavani |

ಕಾಸರಗೋಡು: ಕೇರಳದಲ್ಲಿ ಇದುವರೆಗೆ ಆಡಳಿತ ನಡೆಸಿದ ಎಡರಂಗ ಮತ್ತು ಐಕ್ಯರಂಗವು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಈ ಎರಡೂ ಒಕ್ಕೂಟಗಳಿಗೆ ಇದುವರೆಗೆ ರಾಜ್ಯದಲ್ಲಿ  ಯಾವುದೇ ಸಮರ್ಪಕ ಅಭಿವೃದ್ಧಿಯನ್ನು  ಮಾಡಲು ಸಾಧ್ಯವಾಗಿಲ್ಲ  ಎಂದು ರಾಜ್ಯದ ಜನರು ಈಗಾಗಲೇ ಅರ್ಥೈಸಿದ್ದಾರೆ. ಇದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ  ರಾಜ್ಯದ ಮತದಾರರು ಈ ಎರಡೂ ಒಕ್ಕೂಟಗಳಿಗೆ ತೀವ್ರ ತಿರುಗೇಟು ನೀಡಲಿದ್ದಾರೆ ಎಂದು ಬಿಜೆಪಿ ಕೇರಳ ರಾಜ್ಯ ಉಪಾಧ್ಯಕ್ಷ ಕೆ.ಪಿ.ಶ್ರೀಶನ್‌ ಮಾಸ್ತರ್‌ ಹೇಳಿದ್ದಾರೆ.

Advertisement

ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್‌ ನೇತೃತ್ವದಲ್ಲಿ ಕುಂಬಳೆಯಿಂದ ಆರಂಭಗೊಂಡ ಉತ್ತರ ವಲಯ ಪರಿವರ್ತನಾ ಯಾತ್ರೆಗೆ ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ನೀಡಿದ ಭವ್ಯ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಶ್ಚಿಮ ಬಂಗಾಲ ಸಹಿತ ಉತ್ತರ ಭಾರತದ ವಿವಿಧೆಡೆ ಸಿಪಿಎಂ ಮತ್ತು ಕಾಂಗ್ರೆಸ್‌ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಇದರಿಂದ ಮುಂದಿನ ದಿನಗಳಲ್ಲಿ  ನಡೆಯುವ ಚುನಾವಣೆಯಲ್ಲಿ  ಈ ಎರಡೂ ಪಕ್ಷಗಳು ಕೇರಳದಲ್ಲಿಯೂ ಪರಸ್ಪರ ಸೀಟು ಹೊಂದಾಣಿಕೆ ಮಾಡಿದರೆ ಯಾವುದೇ ಅಚ್ಚರಿಪಡಬೇಕಾಗಿಲ್ಲ  ಎಂದು ಶ್ರೀಶನ್‌ ಮಾಸ್ತರ್‌ ಹೇಳಿದರು.

ಕಳೆದ 60 ವರ್ಷಗಳ ಕಾಲ ನಮ್ಮ ದೇಶವನ್ನು ಆಳಿದ ಕಾಂಗ್ರೆಸ್‌ ಪಕ್ಷಕ್ಕೆ ಈ ದೇಶದಲ್ಲಿ  ಮಾಡಲು ಸಾಧ್ಯವಾಗದ ಸಾಧನೆಯನ್ನು  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ನಾಲ್ಕೂವರೆ ವರ್ಷಗಳಲ್ಲಿ  ಸಾಧಿಸಿದೆ. ಉದ್ಯೋಗ ಖಾತರಿ ಯೋಜನೆಗಳನ್ನು  ಕೇಂದ್ರ ಸರಕಾರವು ಸ್ಥಗಿತಗೊಳಿಸಲು ಮುಂದಾಗುತ್ತಿದೆ ಎಂದು ಸಿಪಿಎಂ ಮತ್ತು  ಕಾಂಗ್ರೆಸ್‌ ವ್ಯಾಪಕ ಅಪಪ್ರಚಾರ ನಡೆಸುತ್ತಿದೆ. ಇದು ಅಪ್ಪಟ ಸುಳ್ಳು. ಕೇಂದ್ರ ಸರಕಾರವು ದೇಶದ ಸಾಮಾನ್ಯ ವರ್ಗದ ಜನರಿಗೆ ಇದುವರೆಗೆ ಹೆಚ್ಚಿನ ಸವಲತ್ತುಗಳನ್ನು ನೀಡಿದೆಯೇ ಹೊರತು, ಇರುವ ಸವಲತ್ತುಗಳನ್ನು  ರದ್ದುಗೊಳಿಸಿಲ್ಲ. ಈ ನಿಟ್ಟಿನಲ್ಲಿ  ಜನರು ಇಂತಹ ಅಪಪ್ರಚಾರಗಳಿಗೆ ಕಿವಿಗೊಡದೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಮತ್ತೆ ಅಧಿಕಾರಕ್ಕೇರಲು ಬೇಕಾದ ಪರಿಪೂರ್ಣ ಬೆಂಬಲ ನೀಡಬೇಕೆಂದು ಅವರು ಮತದಾರರಲ್ಲಿ ವಿನಂತಿಸಿದರು.

ಪರಿವರ್ತನ ಯಾತ್ರೆಯ ನಾಯಕ ಎಂ.ಟಿ. ರಮೇಶ್‌ ಮಾತನಾಡಿ, ಶಬರಿಮಲೆಗೆ ಯುವತಿ ಯರನ್ನು  ಪ್ರವೇಶಿಸುವಂತೆ ಮಾಡಲು ಮುಂದಾದ ಸಿಪಿಎಂ ಪಕ್ಷದ ಧೋರಣೆಯನ್ನು ಆ ಪಕ್ಷದ ಹಲವು ಮಂದಿ ಕಾರ್ಯಕರ್ತರೇ ವಿರೋಧಿಸಿದ್ದಾರೆ. ತನ್ಮೂಲಕ ಮುಂದಿನ ಚುನಾವಣೆಯಲ್ಲಿ  ಸಿಪಿಎಂ ಕಾರ್ಯಕರ್ತರು, 
ಸಿಪಿಎಂ ಹಿತೈಷಿಗಳು ತಮ್ಮ ಉತ್ತಮ ಅಭ್ಯರ್ಥಿಗಳ ಹುಡುಕಾಟಕ್ಕಾಗಿ ತಲೆಕೆಡಿಸಿಕೊಂಡಿದ್ದಾರೆ. ಅಭ್ಯರ್ಥಿಗಳ ಆಯ್ಕೆಯ ಮೊದಲ ಸುತ್ತಿನಲ್ಲಿ  ಸಿಪಿಎಂ ಈಗಾಗಲೇ ಸೋತಿದೆ ಎಂದು ಎಂ.ಟಿ.ರಮೇಶ್‌ ಹೇಳಿದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ  ಎಂ. ಸುಧಾಮ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. 

Advertisement

ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ  ಕೆ.  ಶ್ರೀಕಾಂತ್‌, ರಾಷ್ಟ್ರೀಯ ಸಮಿತಿ  ಸದಸ್ಯ ಎಂ. ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ  ಸುರೇಶ್‌ ಕುಮಾರ್‌ ಶೆಟ್ಟಿ   ಪೂಕಟ್ಟೆ, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಕುಂಟಾರು ರವೀಶ ತಂತ್ರಿ, ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ. ನಾೖಕ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ರಮೇಶ್‌, ಮಧೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ  ಮಾಲತಿ ಸುರೇಶ್‌, ನೇತಾರರಾದ  ನ್ಯಾಯವಾದಿ ಎ. ಸದಾನಂದ ರೈ, ಪದ್ಮಿನಿ ಟೀಚರ್‌, ಅಭಿಲಾಷ್‌, ಎಂ. ಜನನಿ ಮತ್ತಿತರರು ಉಪಸ್ಥಿತರಿದ್ದರು. 

ಸುಕುಮಾರ ಕುದ್ರೆಪ್ಪಾಡಿ ಸ್ವಾಗತಿಸಿ, ಹರೀಶ್‌ ಗೋಸಾಡ ವಂದಿಸಿದರು.
ಬಳಿಕ ಕಾಸರಗೋಡು ಜಿಲ್ಲೆಯ ಪೆರಿಯ, ಕಾಞಂಗಾಡು, ತೃಕ್ಕರಿಪುರ ಮುಂತಾದೆಡೆಗಳಲ್ಲಿ  ಪರಿವರ್ತನ ಯಾತ್ರೆಗೆ ಭವ್ಯ ಸ್ವಾಗತ ದೊರಕಿತು.

ಮತ್ತೆ  ಮೋದಿ ಸರಕಾರ : ಎಂ.ಟಿ.ರಮೇಶ್‌
 ಪರಿವರ್ತನ ಯಾತ್ರೆಯ ನಾಯಕ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ  ನರೇಂದ್ರ ಮೋದಿ ಸರಕಾರವು ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ  ಯಾವುದೇ ಸಂಶಯವಿಲ್ಲ. ಇದನ್ನು ಅರ್ಥೈಸಿದ ವಿಪಕ್ಷಗಳು ಹೇಗಾದರೂ ಮಾಡಿ ಬಿಜೆಪಿ ಸರಕಾರವನ್ನು ಪರಾಭವಗೊಳಿಸುವ ಸಲುವಾಗಿ ಎಲ್ಲರೂ ಸೇರಿ ಮಹಾಘಟ್‌ಬಂಧನ್‌ ರಚಿಸಿದ್ದಾರೆ. ಆದರೆ ಮುಂದಿನ ಚುನಾವಣೆಯ ಬಳಿಕ ನಮ್ಮ  ದೇಶದ ಹಲವು ಪಕ್ಷಗಳು ಕಣ್ಮರೆಯಾಗಲಿವೆ. ಅದರಲ್ಲಿ  ಸಿಪಿಎಂ ಕೂಡಾ ಒಂದು ಎಂದು ಲೇವಡಿ ಮಾಡಿದರು.
-ಎಂ.ಟಿ.ರಮೇಶ್‌  ಪರಿವರ್ತನ ಯಾತ್ರೆಯ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next