ಹುಣಸಗಿ: ಕಳೆದ ವರ್ಷ ನವೀಕರಿಸಲಾಗಿದ್ದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಭಾಗ, ಸಮೀಪದ ಅಗ್ನಿ ಗ್ರಾಮದ
ಬಳಿ ಕಾಲುವೆಯ 61.500ನೇ ಕಿ.ಮೀಟರ್‌ನ ಸುಮಾರು 50 ಮೀಟರ್‌ನಷ್ಟು ಆರ್‌ಸಿಸಿ ಲೈನಿಂಗ್‌ನಲ್ಲಿ ಕುಸಿದಿದೆ.
ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ಶನಿವಾರ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿತ್ತು.
ನಂತರ ಸೋಮವಾರ ಕಾಲುವೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ.
ಸ್ಥಳಕ್ಕೆ ಶಾಸಕ ರಾಜುಗೌಡ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಗ್ನಿ ಗ್ರಾಮದ ಎಡದಂಡೆ ಮುಖ್ಯ ಕಾಲುವೆ ಪದೆ ಪದೆ ಕುಸಿಯುತ್ತಿದ್ದು, ಶಾಶ್ವತ ಪರಿಹಾರಕ್ಕೆ ನಿಗಮ ಮುಂದಾಗಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯ ರಾಜಶೇಖರಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಭತ್ತ ಕಾಳು ಕಟ್ಟುವ ಹಂತದಲ್ಲಿದ್ದು, ಅಧಿಕಾರಿಗಳು ತಾತ್ಕಾಲಿಕ ದುರಸ್ತಿಗೆ ಮುಂದಾಗಿ ರೈತರ ಹಿತ ಕಾಪಾಡಬೇಕು. ಇಲ್ಲವಾದಲ್ಲಿ ರೈತರ ಅಪಾರ ಭತ್ತ ಬೆಳೆ ಹಾನಿಯಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧೀಕ್ಷಕ ಇಂಜಿನಿಯರ್ ಕಮಲಾಕ್ಷಿ ಕೋರ್ಪಡೆ, ರೈತರ ಹಿತದೃಷ್ಟಿಯಿಂದ ಶೀಘ್ರದಲ್ಲಿಯೇ ದುರಸ್ತಿಗೊಳಿಸಿ ಮುಖ್ಯ ಕಾಲುವೆಗೆ ನೀರು ಹರಿಸಲಾಗುವುದು, ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
ಶೀಘ್ರದಲ್ಲಿ ಮರಳು ಚೀಲಗಳನ್ನು ಇಟ್ಟು ನೀರು ಹರಿಸುವ ಕುರಿತು ಯೋಚಿಸಲಾಗುತ್ತಿದೆ ಎಂದು ತಿಳಿಸಿದರು. ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ಕೃಷ್ಣೇಗೌಡ ಹಾಗೂ ಅನೇಕ ಮುಖಂಡರು ಇದ್ದರು.