Advertisement

ಜೆಎನ್‌ಯು ಹಿಂಸೆಗೆ ಎಡ ಒಕ್ಕೂಟಗಳೇ ಕಾರಣ

10:39 AM Jan 09, 2020 | mahesh |

ಎಡ ವಿದ್ಯಾರ್ಥಿ ಒಕ್ಕೂಟಗಳಿಗೆ ಪರೀಕ್ಷೆ ಬೇಕಿಲ್ಲ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನೆಲ್ಲ ಇವು ಹರಿದುಹಾಕಿವೆ. ಅರ್ಜಿಗಳನ್ನೂ ಈ ಎಡ ನಾಯಕರು ಹರಿದುಹಾಕಿದ್ದಾರೆ. ಒಟ್ಟಲ್ಲಿ ಇವರೆಲ್ಲ ಸೇರಿ ಜವಾಹರ್‌ಲಾಲ್‌ ನೆಹರೂ ವಿ.ವಿ.ಯಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ.

Advertisement

ಜನವರಿ 5ರಂದು ದಿಲ್ಲಿಯ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಮುಖ ಮುಚ್ಚಿಕೊಂಡಿದ್ದ ಕೆಲವರು ಹಲವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ದಾಳಿ ಮಾಡಿದ್ದಾರೆ. ಘಟನೆಯಲ್ಲಿ 26 ಜನ ಗಾಯಗೊಂಡಿದ್ದಾರೆ. ಈ ದಾಳಿ ನಡೆಸಿದ್ದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ) ಎಂದು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ ಆರೋಪಿಸುತ್ತಿದೆ. ಆದರೆ, ಈ ಹಿಂಸಾಚಾರವನ್ನು ಎಡ ವಿದ್ಯಾರ್ಥಿ ಒಕ್ಕೂಟಗಳೇ ನಡೆಸಿದ್ದು, ಸುಖಾಸುಮ್ಮನೆ ನಮ್ಮನ್ನು ದೂಷಿಸುತ್ತಿವೆ ಎನ್ನುತ್ತಾರೆ ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಧಿ ತ್ರಿಪಾಠಿ. ರೆಡಿಫ್ ಜಾಲತಾಣಕ್ಕೆ ಅವರು ನೀಡಿದ ಸಂದರ್ಶನ ಇಲ್ಲಿದೆ…

ಜೆಎನ್‌ಯು ಹಿಂಸಾಚಾರಕ್ಕೆ ಎಬಿವಿಪಿಯನ್ನು ದೂಷಿಸಲಾಗುತ್ತಿದೆ
ಈ ಎಡಪಂಥೀಯ ಒಕ್ಕೂಟಗಳು ಇವೆಯಲ್ಲ, ಇವಕ್ಕೆ ಕೆಸರು ಎರಚಿ, ನಂತರ ಅದಕ್ಕೆ ಎಬಿವಿಪಿಯನ್ನು ದೂಷಿಸುವ ಅಭ್ಯಾಸವಿದೆ.  ನೀವು ಹಿಂದಿನ ವಿಡಿಯೋಗಳನ್ನು ನೋಡಿದರೆ, ಎಡ ವಿದ್ಯಾರ್ಥಿ ಒಕ್ಕೂಟಗಳು ಕ್ಯಾಂಪಸ್‌ನಲ್ಲಿನ ವೈ-ಫೈ ರೂಮ್‌ಗಳನ್ನೆಲ್ಲ ಮುಚ್ಚಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಇವರೆಲ್ಲ ಮಾಸ್ಕ್ ಧರಿಸಿ, ಜೆಎನ್‌ಯುನ ಅಧಿಕಾರವರ್ಗದ ಕೆಲಸಗಳಿಗೆ ಅಡ್ಡಿಪಡಿಸಿದರು(ವಿದ್ಯಾರ್ಥಿಗಳು ಪರೀಕ್ಷೆಗೆ ಕೂರಬಾರದು ಎಂಬ ಕಾರಣಕ್ಕಾಗಿ). ಅಲ್ಲದೆ ಎಲ್ಲೆಡೆಯೂ ವೈರ್‌ಗಳನ್ನು ತುಂಡರಿಸಿದರು. ಇಡೀ ಕೃತ್ಯಗಳನ್ನು ಮುನ್ನಡೆಸಿದ್ದು ಎಡಪಂಥೀಯ ವಿದ್ಯಾರ್ಥಿ ನಾಯಕರು.  ಇದಷ್ಟೇ ಅಲ್ಲದೆ, ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಶೆ ಘೋಷ್‌ ಗುಂಪನ್ನು ಮುನ್ನಡೆಸುತ್ತಿರುವ ವಿಡಿಯೋ ಕೂಡ ಇದೆ. ನೀವು ಪ್ರಶ್ನಿಸಬೇಕಿರುವುದು ಅವರನ್ನು. ಜೆಎನ್‌ಯುನಲ್ಲಿ ದಾಳಿ ಮಾಡಿದವರನ್ನೆಲ್ಲ ಎಡಪಂಥೀಯ ವಿದ್ಯಾರ್ಥಿ ಒಕ್ಕೂಟಗಳೇ ಮುನ್ನಡೆಸಿವೆ ಎಂದು ನನಗೆ ಖಾತ್ರಿಯಿದೆ. ಅವರೆಲ್ಲ ಸೇರಿ ಎಬಿವಿಪಿ ಕಾರ್ಯಕರ್ತರನ್ನೂ ಥಳಿಸಿದ್ದಾರೆ.

ಆದರೆ ಖುದ್ದು ಐಶೆ ಘೋಷ್‌ ಗಾಯಗೊಂಡರಲ್ಲ? ಹೀಗಿರುವಾಗ, ಈ ದಾಳಿಯನ್ನು ಎಡಪಂಥೀಯ ಒಕ್ಕೂಟಗಳೇ ನಡೆಸಿದ್ದೆಂದು ಹೇಗೆ ಹೇಳಬಲ್ಲಿರಿ?
ಐಶೆ ಘೋಷ್‌ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕಾಗಿ ಟಿಕೆಟ್‌ ಪಡೆದದ್ದು ಜೆಎನ್‌ಯುನಲ್ಲಿನ‌ ವಿವಿಧ ಎಡ ಒಕ್ಕೂಟಗಳಿಗೆ ಇಷ್ಟವಿರಲಿಲ್ಲ (ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಫೆಡರೇಷನ್‌, ಆಲ್‌ ಇಂಡಿಯಾ ಸ್ಟೂಡೆಂಟ್ಸ್‌ ಅಸೋಸಿಯೇಷನ್‌). ಆಕೆ ಅಧ್ಯಕ್ಷೆ ಆಗಬಾರದು ಎಂದೇ ಈ ಒಕ್ಕೂಟಗಳ ವಿದ್ಯಾರ್ಥಿಗಳು ಬಯಸಿದ್ದರು. ಒಟ್ಟಾರೆ ಎಬಿವಿಪಿಯನ್ನು ದೂಷಿಸುವುದಕ್ಕಾಗಿ ಈ ಇಡೀ ಹಿಂಸಾ ಪ್ರಕರಣವನ್ನು ಎಡ ಗುಂಪುಗಳೇ ಪ್ಲ್ರಾನ್‌ ಮಾಡಿವೆ.

ಎಬಿವಿಪಿಯೇ ಈ ದಾಳಿಗಳ ಹಿಂದಿದೆ ಎಂದು ಸಾಬೀತು ಮಾಡಲು ಅವರ ಬಳಿ ಪುರಾವೆ ಇದೆಯೇ? ಇದು ಅಂತರ್‌-ಒಕ್ಕೂಟಗಳ ನಡುವಿನ ಹಗೆತನ.  ಇನ್ನು ಎಬಿವಿಪಿ ನಾಯಕರನ್ನು ಥಳಿಸಬೇಕು ಎನ್ನುತ್ತಾ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದೇ ಐಶೆ ಘೋಷ್‌. ಆಕೆಗೆ ಹಿಂಸೆಯಲ್ಲಿ ಭಾಗಿಯಾಗಬೇಕಿದೆ.

Advertisement

ಬಿಜೆಪಿಯು ಕೇಂದ್ರ ಗೃಹಸಚಿವಾಲಯದ ಮೂಲಕ ಜೆಎನ್‌ಯುನಲ್ಲಿ ಹಿಂಸೆಗೆ ಪ್ರೋತ್ಸಾಹಿಸುತ್ತಿದೆ ಎನ್ನಲಾಗುತ್ತಿದೆಯಲ್ಲ?
ಇದು ಸತ್ಯವಲ್ಲ. ನಾನನ್ನುತ್ತೇನೆ, ಎಬಿವಿಪಿ ಕಾರ್ಯಕರ್ತರನ್ನು ಥಳಿಸಲು ಎಡ ಒಕ್ಕೂಟಗಳಿಗೆ ದೆಹಲಿ ಪೊಲೀಸರು ಅವಕಾಶ ಕೊಟ್ಟರು ಎಂದು. ಈ ದಾಳಿಗಳಲ್ಲಿ ನಮ್ಮ ವಿದ್ಯಾರ್ಥಿ ನಾಯಕರು ಗಾಯಗೊಂಡಿದ್ದಾರೆ. ನಮ್ಮನ್ನೆಲ್ಲ ಥಳಿಸಲಾಗಿದೆ. ಈಗ ಈ ಎಡ ಒಕ್ಕೂಟಗಳು, ಎಬಿವಿಪಿಯು ತಮ್ಮದೇ ವಿದ್ಯಾರ್ಥಿ ನಾಯಕರನ್ನು ಥಳಿಸಿದೆ ಎಂದು ಕಥೆ ಕಟ್ಟುತ್ತಿವೆ. ಸುಳ್ಳುಗಳಿಗೂ ಒಂದು ಮಿತಿ ಇರುತ್ತದೆ. ಅವುಗಳ ವಾದಕ್ಕೆ ತರ್ಕವೂ ಇಲ್ಲ, ಕಾಮನ್‌ಸೆನ್ಸ್‌ ಕೂಡ ಇಲ್ಲ.  ದಾಳಿಗೂ ಮುನ್ನ ಎಬಿವಿಪಿ ಲೀಡರ್‌ಗಳು ವಾಟ್ಸ್‌ಆಪ್‌ ಗ್ರೂಪ್‌ ಸೃಷ್ಟಿಸಿದ್ದರು ಎಂದು ಇಂಡಿಯನ್‌ ಎಕ್ಸ್‌ಪ್ರಸ್‌ನ ವರದಿ ಹೇಳುತ್ತದೆ

ಈ ರೀತಿಯಲ್ಲಿ ಯಾರು ಬೇಕಾದರೂ ವಾಟ್ಸ್‌ಆಪ್‌ ಗ್ರೂಪ್‌ ಸೃಷ್ಟಿಸಿ, ಸುಳ್ಳು ಹರಡಬಹುದಲ್ಲವೇ? ಆ ಗುಂಪಿನಲ್ಲಿ ಎಡ ಒಕ್ಕೂಟದ ವಿದ್ಯಾರ್ಥಿ ಇದ್ದಾನೆ. ಆತ ಹೈದ್ರಾಬಾದ್‌ನವನು, ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಅವನ ಫೋನ್‌ ನಂಬರ್‌ ಕೂಡ ಇದೆ. ಹೀಗಿರುವಾಗ, ಇದು ಎಬಿವಿಪಿ ಪ್ಲಾನ್‌ ಎಂದು ಹೇಗೆ ಹೇಳುತ್ತೀರಿ? ಯಾರು ಬೇಕಾದರೂ ಗ್ರೂಪ್‌ ಸೃಷ್ಟಿಸಿ, ಅದರಲ್ಲಿನ ಸಂಭಾಷಣೆಯನ್ನು ವೈರಲ್‌ ಆಗುವಂತೆ ನೋಡಿಕೊಂಡು, ಎಬಿವಿಪಿಯನ್ನು ಬೈಯಬಹುದು. ಇದೆಲ್ಲ ಸುಳ್ಳು ಸುದ್ದಿ.

ದಾಳಿಕೋರರಲ್ಲಿ ಒಬ್ಬರು ಎಬಿವಿಪಿಯ ಕಾರ್ತಕರ್ತರು ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಗುರುತಿಸಲಾಗಿದೆಯಲ್ಲ?
ಆಕೆಯ ಹೆಸರು ಶಾಂಭವಿ ಅಂತ. ಶಾಂಭವಿ ದಾಳಿ ಮಾಡಿಲ್ಲ. ಆಕೆ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಏಕಕಾಲದಲ್ಲಿ ಅತ್ತ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಾ, ಇನ್ನೊಂದೆಡೆ ಜೆಎನ್‌ಯುನಲ್ಲಿ ದಾಳಿ ನಡೆಸಲು ಸಾಧ್ಯವೇ? ಇದಕ್ಕೆ ತರ್ಕವೇ ಇಲ್ಲ.

ನಿಮ್ಮ ಮೇಲೆ ಆರೋಪ ಮಾಡಿ ಎಡ ಒಕ್ಕೂಟಗಳಿಗೇನು ಲಾಭ?
ಅವರಿಗೆ ಒಟ್ಟಲ್ಲಿ ಎಬಿವಿಪಿಯನ್ನು ದೂಷಿಸಬೇಕಷ್ಟೇ. ಇವರೆಲ್ಲ ಒಂದು ರೀತಿಯ ಫೋಬಿಯಾದಿಂದ ಬಳಲುತ್ತಿದ್ದಾರೆ. ಇದೇ ಜನರೇ ಅಲ್ಲವೇ 26/11 ಮುಂಬೈ ಉಗ್ರ ದಾಳಿಯಲ್ಲಿ ಆರ್‌ಎಸ್‌ಎಸ್‌ ಕೈವಾಡವಿದೆ ಎಂದು ಹೇಳಿದವರು? ಆ ದಾಳಿ ಯಾರಿಂದ ನಡೆಯಿತು ಎಂದು ಈಗ ಎಲ್ಲರಿಗೂ ಗೊತ್ತಿದೆ.
ಇವರೆಲ್ಲ ಎಬಿವಿಪಿ ಫೋಬಿಯಾ ಇರುವ ಜನರು. ನಾಳೆ ಅಮೆರಿಕವೇನಾದರೂ ಇರಾನ್‌ನ ಮೇಲೆ ದಾಳಿ ಮಾಡಿತೆಂದರೆ ಅದಕ್ಕೂ ಕೂಡ ಎಬಿವಿಪಿಯೇ ಕಾರಣ ಎನ್ನುತ್ತಾರೆ. ನಮ್ಮನ್ನು ದೂಷಿಸುವುದನ್ನು ಬಿಟ್ಟು ಇವರಿಗೆ ಬೇರೇನೂ ಗೊತ್ತಿಲ್ಲ.

ಜೆಎನ್‌ಯು ಚುನಾವಣೆಗಳಲ್ಲಿ ಎಡ ಒಕ್ಕೂಟಗಳು ಗೆಲ್ಲುತ್ತಾ ಸಾಗಿವೆ. ಎಬಿವಿಪಿ ಸೋಲುತ್ತಿದೆ. ಈ ಕಾರಣಕ್ಕಾಗಿಯೇ, ಎಬಿವಿಪಿಗೆ ಅವುಗಳ ಮೇಲೆ ಸಿಟ್ಟಂತೆ?
ಯಾರು ಹಾಗೆ ಹೇಳ್ಳೋರು? ದೇಶಾದ್ಯಂತ ಇಂಥದ್ದೊಂದು ಸುಳ್ಳನ್ನು ಹಬ್ಬಿಸಲಾಗುತ್ತಿದೆ. ಒಂದು ವೇಳೆ ಜೆಎನ್‌ಯು ವಿದ್ಯಾರ್ಥಿಗಳೆಲ್ಲ ಎಡ ಒಕ್ಕೂಟಗಳಿಗೆ ಬೆಂಬಲ ನೀಡುತ್ತಾರೆ ಎಂದಾದರೆ, ಅದೇಕೆ ಎಬಿವಿಪಿ ವಿರುದ್ಧ ಹೋರಾಡಲು ಈ ಐದು ಒಕ್ಕೂಟಗಳು ಕೈಜೋಡಿಸುವಂಥ ಸ್ಥಿತಿ ಇದೆಯಂತೆ? ನೀವು ಓಟ್‌ ಪರ್ಸಂಟೇಜ್‌ ತೆಗೆದುನೋಡಿದರೆ ನಮ್ಮ ಮಾತು ಅರ್ಥವಾಗುತ್ತದೆ. ಅವಕ್ಕೆ ತಮ್ಮ ಮೇಲೆ ತಮಗೆ ಅಷ್ಟು ಆತ್ಮವಿಶ್ವಾಸವಿದ್ದರೆ, ನಮ್ಮ ವಿರುದ್ಧ ಒಂಟಿಯಾಗಿ ಸೆಣಸಲಿ ನೋಡೋಣ? ಗುಂಪುಕಟ್ಟಿಕೊಂಡೇಕೆ ಚುನಾವಣೆಗೆ ನಿಲ್ಲುತ್ತವೆ?

ಜಿಎನ್‌ಯು ಶುಲ್ಕ ಹೆಚ್ಚಳದ ವಿಚಾರದಲ್ಲಿ ಎಬಿವಿಪಿ ನಿಲುವೇನು?
ಶುಲ್ಕ ಹೆಚ್ಚಳವನ್ನು ನಾವು ವಿರೋಧಿಸುತ್ತೇವೆ ಎಂದು ಮೊದಲೇ ಸ್ಪಷ್ಟಪಡಿಸಿದ್ದೇವೆ. ಶುಲ್ಕ ಹೆಚ್ಚಳದ ಘೋಷಣೆ ಆದಾಗ ಈ ಎಡ ಒಕ್ಕೂಟಗಳು ಶಿಕ್ಷಕಿಯೊಬ್ಬರನ್ನು 3 ಗಂಟೆಗಳ ಕಾಲ ಗೃಹ ಬಂಧನದಲ್ಲಿ ಇಟ್ಟವು. ಇವರೆಲ್ಲ ಟೀಚರ್‌ಗಳ ಮನೆಗಳ ಮೇಲೆ ದಾಳಿ ಮಾಡಿದರು. ವಾರ್ಡನ್‌ಗಳ ಅಪಾರ್ಟ್‌ಮೆಂಟುಗಳ ಮೇಲೆ ಮದ್ಯದ ಬಾಟಲಿಗಳನ್ನು, ಕಲ್ಲುಗಳನ್ನು ಎಸೆದರು. ಇದಷ್ಟೇ ಅಲ್ಲದೇ, ಕ್ಯಾಂಪಸ್‌ನಲ್ಲಿನ ಲೈಟುಗಳನ್ನೂ ಒಡೆದುಹಾಕಿದ್ದಾರೆ. ಎಬಿವಿಪಿ ಇಂಥದ್ದನ್ನೆಲ್ಲ ಬೆಂಬಲಿಸುವುದಿಲ್ಲ.

ವಿವಾದಕ್ಕೆ ಮೂಲ ಕಾರಣವಾದ ಪರೀಕ್ಷೆಯ ವಿಚಾರವೇನಾಯಿತು? ಎಡ ಒಕ್ಕೂಟಗಳು ಪರೀಕ್ಷೆಗಳನ್ನು ಬಹಿಷ್ಕರಿಸಿವೆಯಲ್ಲ?
ಎಡ ವಿದ್ಯಾರ್ಥಿ ಒಕ್ಕೂಟಗಳಿಗೆ ಪರೀಕ್ಷೆ ಬೇಕಿಲ್ಲ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನೆಲ್ಲ ಇವು ಹರಿದುಹಾಕಿವೆ. ಇನ್ನು ಪರೀಕ್ಷಾ ಅರ್ಜಿಗಳನ್ನೂ ಈ ಎಡ ನಾಯಕರು ಹರಿದುಹಾಕಿದ್ದಾರೆ. ಒಟ್ಟಲ್ಲಿ ಇವರೆಲ್ಲ ಸೇರಿ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಿಲ್ಲ ಎಂದು ಎಡ ಒಕ್ಕೂಟಗಳು ಹೇಳುತ್ತವೆ. ಹಾಗಿದ್ದರೆ, ಜೆಎನ್‌ಯುನ ಬಿಲ್ಡಿಂಗ್‌ಗಳನ್ನು ಮುಚ್ಚುವ ಅಗತ್ಯವೇನಿತ್ತು? ಜೆಎನ್‌ಯು ವಿದ್ಯಾರ್ಥಿಗಳು ಓದಲು ಬಯಸುತ್ತಾರೆ. ಆದರೆ ಈ ಎಡಪಂಥೀಯರು ಮತ್ತು ನಕ್ಸಲರಿಗೆ ಜೆಎನ್‌ಯುನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವುದು ಬೇಕಾಗಿಲ್ಲ.

ನಿಧಿ ತ್ರಿಪಾಠಿ, ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next